ಡಾ.ಕಸ್ತೂರಿರಂಗನ್ ವರದಿ ಜಾರಿ ಮಾಡದಿರಲು ರಾಜ್ಯ ಸರ್ಕಾರ ತೀರ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

Western-Ghats

ಬೆಂಗಳೂರು,ಮಾ.6– ಮಲೆನಾಡು ಹಾಗು ಕರಾವಳಿ ಭಾಗದ ಜನರಿಗೆ ಮರಣ ಶಾಸನ ಎಂದೇ ಹೇಳಿರುವ ಡಾ.ಕಸ್ತೂರಿರಂಗನ್ ವರದಿ ಜಾರಿ ಮಾಡದಿರಲು ರಾಜ್ಯ ತೀರ್ಮಾನಿಸಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿರುವುದು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ವರದಿಯನ್ನು ಅನುಷ್ಠಾನ ಮಾಡದೆ ಸದ್ಯದಲ್ಲೇ ರಾಜ್ಯ ಸರ್ಕಾರ ತಕರಾರು ಅರ್ಜಿ ಸಲ್ಲಿಸಲಿದೆ.   ವರದಿ ಜಾರಿ ಮಾಡಲು ಇನ್ನು 545 ದಿನ ಸಮಯಾವಕಾಶ ಇರುವುದರಿಂದ ಕಸ್ತೂರಿರಂಗನ್ ವರದಿ ಬಗ್ಗೆ ಕೇಂದ್ರ ಸರ್ಕಾರ ಅಭಿಪ್ರಾಯ ತಿಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಇದೀಗ ಈ ವರದಿ ಅನುಷ್ಠಾನಕ್ಕೆ ಬಿಜೆಪಿ ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸದ್ಯದಲ್ಲೇ ತಕರಾರರು ಅರ್ಜಿ ಸಲ್ಲಿಸಿ ಯಾವುದೇ ಕಾರಣಕ್ಕೂ ವರದಿಯನ್ನು ಅನುಷ್ಠಾನ ಮಾಡಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯವನ್ನು ತಿಳಿಸಲು ಮುಂದಾಗಿದೆ.    ಈಗಾಗಲೇ ಅರಣ್ಯ ಮತ್ತು ಪರಿಸರ ಇಲಾಖೆ ಸಾರ್ವಜನಿಕರು, ಸಂಘಸಂಸ್ಥೆಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಅಭಿಪ್ರಾಯವನ್ನು ಕ್ರೋಢೀಕರಿಸಿ ಕೇಂದ್ರಕ್ಕೆ ವರದಿ ನೀಡಲಿದೆ.

ಕಾರಣವೇನು:  

ಡಾ.ಕಸ್ತೂರಿರಂಗನ್ ವರದಿಯನ್ನು ಅನುಷ್ಠಾನ ಮಾಡಿದರೆ ಪಶ್ಚಿಮ ಘಟ್ಟ ಮತ್ತು ಮಲೆನಾಡು ಪ್ರದೇಶವನ್ನು ಅತೀ ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಲಾಗುತ್ತದೆ.
ಒಂದು ಬಾರಿ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಿದರೆ ಇಲ್ಲಿ ಯಾವುದೇ ರೀತಿಯ ಚಟುವಟಿಕೆಯನ್ನು ನಡೆಸುವಂತಿಲ್ಲ. ರಾಜ್ಯ ಸರ್ಕಾರ ಸಂಪೂರ್ಣವಾಗಿ ತನ್ನ ಹತೋಟಿಯನ್ನು ಕಳೆದುಕೊಂಡು ಕೇಂದ್ರ ಸರ್ಕಾರದ ಸುಪರ್ದಿಗೆ ನೀಡಬೇಕಾಗುತ್ತದೆ.  ಪಶ್ಚಿಮ ಘಟ್ಟದಲ್ಲಿ ಅಪರೂಪದ ಪ್ರಾಣಿಪಕ್ಷಿಗಳು, ಗಿಡಮೂಲಿಕೆಗಳು, ವನ್ಯಜೀವಿಗಳು ಇರುವುದರಿಂದ ಇವುಗಳ  ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಅಲ್ಲದೆ ದಶಕಗಳಿಂದಲೂ ಅರಣ್ಯ ಪ್ರದೇಶದಲ್ಲಿ ರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಬೇಕಾಗುತ್ತದೆ.

ಡಾ.ಕಸ್ತೂರಿರಂಗನ್ ವರದಿಯಿಂದ ಬೆಳಗಾವಿ ಜಿಲ್ಲೆಯ ಖಾನಾಪುರ 62 ಹೆಕ್ಟೇರ್, ಬೆಳಗಾವಿ ಒಂದು ಹೆಕ್ಟೇರ್, ಚಾಮರಾಜನಗರದ ಗುಂಡ್ಲುಪೇಟೆಯ 21, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು 27, ಕೊಪ್ಪ 32, ಮೂಡಗೆರೆ 27, ನರಸಿಂಹರಾಜಪುರ 35, ಶೃಂಗೇರಿ 26, ಕೊಡಗು ಜಿಲ್ಲೆಯ ಮಡಿಕೇರಿ 23, ಸೋಮವಾರಪೇಟೆಯ 11, ವಿರಾಜಪೇಟೆಯ 21, ಹಾಸನ ಜಿಲ್ಲೆಯ ಆಲೂರು 1, ಸಕಲೇಶಪುರ 34, ದ.ಕನ್ನಡದ ಬೆಳ್ತಂಗಡಿ 17, ಪುತ್ತೂರು 11, ಸುಳ್ಯ 18, ಉ.ಕನ್ನಡ ಜಿಲ್ಲೆಯ ಆಂಕೋಲಾ 43, ಭಟ್ಕಳ 28, ಹೊನ್ನಾವರ 44, ಜೋಯ್ಡಾ 110, ಕಾರವಾರ 39, ಕುಮ್ಟಾ 43, ಸಿದ್ದಾಪುರ 107, ಸಿರಸಿ 125, ಯಲ್ಲಾಪುರ 87, ಮೈಸೂರಿನ ಎಚ್.ಡಿ.ಕೋಟೆ 62, ಶಿವಮೊಗ್ಗದ ಹೊಸನಗರ 126, ಸಾಗರ 134, ಶಿಕಾರಿಪುರ 12, ಶಿವಮೊಗ್ಗ 66, ತೀರ್ಥಹಳ್ಳಿ 146, ಉಡುಪಿಯ ಕಾರ್ಕಳ 13, ಕುಂದಾಪುರದ 24 ಹೆಕ್ಟೇರ್ ಈ ವ್ಯಾಪ್ತಿಗೆ ಒಳಪಡುತ್ತದೆ.

ಅಲ್ಲದೆ ವಿದ್ಯುತ್, ನೀರಾವರಿ, ಕೈಗಾರಿಕೆ ಸೇರಿದಂತೆ ಯಾವುದೇ ರೀತಿಯ ಹೊಸ ಯೋಜನೆಗಳನ್ನು ಜಾರಿ ಮಾಡಬೇಕಾದರೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕು. ಹೀಗಾಗಿ ಸರ್ಕಾರ ವರದಿಯನ್ನು ಅನುಷ್ಠಾನ ಮಾಡದಿರಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin