ಡಾ.ರಾಜ್ ವಿಧಿವಶರಾಗಿ 11 ವರ್ಷವಾದರೂ ಜಮೀನು ನೀಡದ ಸರ್ಕಾರ
ಬೆಂಗಳೂರು, ಜೂ.3- ಕನ್ನಡ ಚಿತ್ರರಂಗದ ಧ್ರುವತಾರೆ, ಆರೂವರೆ ಕೋಟಿ ಕನ್ನಡಿಗರ ಕಣ್ಮಣಿ, ಅಭಿಮಾನಿಗಳ ಪಾಲಿನ ಅಣ್ಣ , ದಾದಾ ಫಾಲ್ಕೆ ಪ್ರಶಸ್ತಿ ಪುರಸ್ಕøತ ಡಾ.ರಾಜ್ಕುಮಾರ್ ಸಾವನ್ನಪ್ಪಿ ದಶಕಗಳೇ ಕಳೆದಿವೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ನಿರ್ಮಾಪಕಿ ಹಾಗೂ ಡಾ.ರಾಜ್ ಅವರ ಪತ್ನಿ ಪಾರ್ವತಮ್ಮ ರಾಜ್ಕುಮಾರ ಅವರು ಕೊನೆಯುಸಿರೆಳೆದರು. ಕನ್ನಡ ಚಿತ್ರರಂಗವಲ್ಲದೆ ಭಾರತೀಯ ಚಿತ್ರರಂಗಕ್ಕೂ ಎಂದಿಗೂ ಮರೆಯಲಾಗದ ಸೇವೆ ಸಲ್ಲಿಸಿದ್ದ ಡಾ.ರಾಜ್ಕುಮಾರ್ ಇಹಲೋಕ ತ್ಯಜಿಸಿ 11 ವರ್ಷವಾಗಿದ್ದರೂ ರಾಜ್ಯ ಸರ್ಕಾರ ಈವರೆಗೂ ನೀಡಬೇಕಾಗಿದ್ದ ಜಮೀನು ಮತ್ತು ಹಣವನ್ನು ನೀಡದೆ ಕೈಕಟ್ಟಿ ಕುಳಿತಿದೆ. 2006 ಏಪ್ರಿಲ್ 12ರಂದು ರಾಜ್ಕುಮಾರ್ ತೀರಿಕೊಂಡಾಗ ಅವರ ಅಂತ್ಯ ಸಂಸ್ಕಾರವನ್ನು ಎಲ್ಲಿ ಮಾಡಬೇಕೆಂಬ ವಿವಾದ ಉಂಟಾಗಿತ್ತು. ಕೆಲವರು ಹುಟ್ಟೂರು ಗಾಜನೂರಿನಲ್ಲಿ ನೆರವೇರಿಸಬೇಕೆಂದು ಪಟ್ಟು ಹಿಡಿದರೆ ಇನ್ನು ಕೆಲವರು ಬೆಂಗಳೂರಿನಲ್ಲಿ ಮಾಡಬೇಕೆಂದು ಒತ್ತಾಯಿಸಿದರು.
ಅಂತಿಮವಾಗಿ ರಾಜ್ಯ ಸರ್ಕಾರ ಕುಟುಂಬದ ಸದಸ್ಯರನ್ನು ಒತ್ತಾಯಿಸಿ ನಂದಿನಿ ಲೇಔಟ್ನಲ್ಲಿರುವ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ಕುಮಾರ್ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಈ ವೇಳೆ ಡಾ.ರಾಜ್ಕುಮಾರ್ ಕನ್ನಡ ಚಿತ್ರರಂಗಕ್ಕೆ ನೀಡಿದ ಅನನ್ಯ ಸೇವೆಯನ್ನು ಗುರುತಿಸಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ಕುಮಾರ್ ಸ್ಮರಣಾರ್ಥ ಡಾ.ರಾಜ್ ಸ್ಮಾರಕ ನಿರ್ಮಿಸಲು ಎರಡೂವರೆ ಎಕರೆ ಜಮೀನು ನೀಡುವುದಾಗಿ ವಾಗ್ದಾನ ಮಾಡಿದ್ದರು.
ಈ ಸ್ಮಾರಕದಲ್ಲಿ ಡಾ.ರಾಜ್ಕುಮಾರ್ ಏಳುಬೀಳು, ನಡೆದುಬಂದ ದಾರಿ, ಚಿತ್ರರಂಗಕ್ಕೆ ಕೊಟ್ಟ ಕೊಡುಗೆಗಳು, ನೆಲ, ಜಲ, ಭಾಷೆಗೆ ಸಲ್ಲಿಸಿದ ಸೇವೆ ಮುಂದಿನ ಪೀಳಿಗೆಗೆ ಪರಿಚಯವಾಗಲೆಂಬ ಕಾರಣಕ್ಕಾಗಿಯೇ ಸ್ಮಾರಕ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಕಳೆದ ಹನ್ನೊಂದು ವರ್ಷವಾದರೂ ಸರ್ಕಾರ ಕೊಟ್ಟ ಮಾತಿನಂತೆ ಜಮೀನು ನೀಡಿಲ್ಲ. ಪ್ರಸ್ತುತ ಇಲ್ಲಿ ಪ್ರತಿ ಎಕರೆಗೆ ಮಾರುಕಟ್ಟೆ ಬೆಲೆ 6-7 ಕೋಟಿಯಷ್ಟಿದ್ದು , ಎರಡೂವರೆ ಎಕರೆ ಜಮೀನಿಗೆ 16-17 ಕೋಟಿಯಷ್ಟು ಇದೆ ಎಂದು ಅಂದಾಜಿಸಲಾಗಿದೆ.
ವಾರ್ತಾ ಮತ್ತು ಪ್ರಸಾರ ಖಾತೆ ಇಲಾಖೆ ಮೂಲಕ ಜಮೀನನ್ನು ಡಾ.ರಾಜ್ಕುಮಾರ್ ಕುಟುಂಬಕ್ಕೆ ಹಸ್ತಾಂತರ ಮಾಡಬೇಕೆಂಬ ತೀರ್ಮಾನವನ್ನು ಅಂದಿನ ಸರ್ಕಾರ ಕೈಗೊಂಡಿತ್ತು. ಆದರೆ ಅದೆಕೋ ಸರ್ಕಾರ ಮಾತ್ರ ಜಮೀನು ನೀಡಲು ಮೀನಾಮೇಷ ಎಣಿಸುತ್ತದೆ. ಇದೀಗ ಪಾರ್ವತಮ್ಮ ರಾಜ್ಕುಮಾರ್ ಕೂಡ ಇಹಲೋಕ ತ್ಯಜಿಸಿರುವುದರಿಂದ ಕೊಟ್ಟಿರುವ ವಾಗ್ದಾನದಂತೆ ಜಮೀನು ಹಸ್ತಾಂತರ ಮಾಡುವ ಪ್ರಕ್ರಿಯೆ ಚುರುಕುಗೊಂಡಿದೆ ಎಂದು ತಿಳಿದುಬಂದಿದೆ. ಈ ಎರಡೂವರೆ ಎಕರೆ ಜಮೀನಿನಲ್ಲಿ ಸ್ಮಾರಕದ ಜೊತೆಗೆ ರಾಮೋಜಿ ಫಿಲಂ ಸಿಟಿ ನಿರ್ಮಾಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಮೀನು ಹಸ್ತಾಂತರ ಮಾಡುವ ಸಂಬಂಧ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS