ಡಾ. ಹೊ.ಶ್ರೀನಿವಾಸಯ್ಯ ಅವರ ನಿಧನಕ್ಕೆ ಗಣ್ಯರ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

Srinivasaiah--02

ಬೆಂಗಳೂರು,ಏ.6-ಹಿರಿಯ ಗಾಂಧಿವಾದಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ಹೊ.ಶ್ರೀನಿವಾಸಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.   ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್, ವಸತಿ ಸಚಿವ ಎಂ.ಕೃಷ್ಣಪ್ಪ , ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಅನೇಕ ಸಚಿವರು ಹಾಗೂ ಗಣ್ಯರು ಹೊ.ಶ್ರೀನಿವಾಸಯ್ಯ ಅವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

Srinivasaiah--01

ಗಾಂಧೀಜಿಯವರ ಸರಳತೆ, ಸಿದ್ಧಾಂತದಿಂದ ಆಕರ್ಷಿತರಾಗಿದ್ದ ಶ್ರೀನಿವಾಸಯ್ಯ ಅವರು ಸರಳತಾ ಧೀಕ್ಷೆ ಪಡೆದು ಖಾದಿ ಬಟ್ಟೆ ಧರಿಸಿದರು. ಜಾತ್ಯತೀತ ನಿಲುವಿಗೆ ಬದ್ಧರಾಗಿ ಗಾಂಧೀಜಿಯವರ ಸಂದೇಶಗಳನ್ನು ಪ್ರಚುರಪಡಿಸಲು ಟೊಂಕಕಟ್ಟಿ ನಿಂತಿದ್ದರು ಎಂದು ಸಿದ್ದರಾಮಯ್ಯ ಗುಣಗಾನ ಮಾಡಿದರು.   ಮಹಾತ್ಮಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ವರ್ಷವಿಡೀ ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದು ಸ್ಮರಿಸಿದ್ದಾರೆ.
ಶ್ರೀನಿವಾಸಯ್ಯ ಅವರ ನಿಧನದಿಂದ ಮನಸ್ಸಿಗೆ ಬಹಳ ನೋವಾಗಿದ್ದು, ಒಬ್ಬ ಅಪ್ಪಟ ಗಾಂಧಿವಾದಿಯನ್ನು ಕಳೆದುಕೊಂಡಂತಾಗಿದೆ ಎಂದು ದೇವೇಗೌಡರು ವಿಷಾದಿಸಿದ್ದಾರೆ. [ ಇದನ್ನೂ ಓದಿ : ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಡಾ.ಹೊ.ಶ್ರೀನಿವಾಸಯ್ಯ ಇನ್ನಿಲ್ಲ ]

ಕನ್ನಡ ನಾಡು ಕಂಡ ಒಬ್ಬ ಗಾಂಧಿವಾದಿ ಶ್ರೀನಿವಾಸಯ್ಯ ಅವರ ಅಗಲಿಕೆಯ ಸುದ್ದಿ ತಮಗೆ ಅಪಾರ ನೋವುಂಟು ಮಾಡಿದೆ ಎಂದು ಕುಮಾರಸ್ವಾಮಿ ವಿಷಾದಿಸಿದ್ದಾರೆ.   ಗಾಂಧಿ ವಿಚಾರಧಾರೆಗಳ ಪ್ರಚಾರಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀನಿವಾಸಯ್ಯ ಅವರು ಕೊನೆಯುಸಿರು ಇರುವವರೆಗೂ ಗಾಂಧಿತತ್ವ ಅಳವಡಿಸಿಕೊಂಡಿದ್ದರು.   ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಾಂಧಿ ಸ್ಮಾರಕ ನಿಧಿಗೆ ಒಂದು ಕೋಟಿ ರೂ. ನೆರವು ನೀಡಿ ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ತಮ ವೈಚಾರಿಕ ಕೇಂದ್ರವನ್ನಾಗಿ ಗಾಂಧಿಭವನವನ್ನು ರೂಪಿಸಲಾಯಿತು ಎಂದರು.

ರೈತಪರ ಕಾಳಜಿ ಹೊಂದಿದ್ದ ಅವರು ನಾನಾ ಸಂಘಸಂಸ್ಥೆಗಳ ಪದಾಧಿಕಾರಿಯಾಗಿ ನಿಸ್ವಾರ್ಥ ಸೇವೆಯಿಂದ ಆ ಸಂಸ್ಥೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದರು.   ಶ್ರೀನಿವಾಸಯ್ಯ ಅವರ ನಿಧನದಿಂದ ನಮ್ಮ ದೇಶ ಒಬ್ಬ ಅಪ್ರತಿಮ ಸಮಾಜಮುಖಿ ವ್ಯಕ್ತಿಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಅವರ ಕುಟುಂಬ ವರ್ಗ ಮತ್ತು ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಆದಿಚುಂಚನಗಿರಿ ಶ್ರೀಗಳ ಸಂತಾಪ  : 

ಆದಿಚುಂಚನಗಿರಿ, ಏ.6- ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಸಮಾಜ ಸೇವಕರೂ, ಗಾಂಧಿ ಅನುಯಾಯಿಗಳೂ , ಯೋಗ ಪಟುಗಳೂ ಆಗಿದ್ದ ಡಾ.ಹೊ.ಶ್ರೀನಿವಾಸಯ್ಯ ನಿಧನಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  ಹೊ.ಶ್ರೀನಿವಾಸಯ್ಯನವರು ತಮ್ಮ ಸೇವಾ ನಿವೃತ್ತಿಯ ನಂತರ ಗಾಂಧೀ ಸಾಹಿತ್ಯ, ಗಾಂಧಿ ಚಿಂತನೆಗಳ ಪ್ರಚಾರವೇ ಅಲ್ಲದೆ ಒಬ್ಬ ಶಿಕ್ಷಣ ತಜ್ಞರಾಗಿ , ಸಮಾಜ ಸೇವಕರಾಗಿ , ಪ್ರಕೃತಿ ಚಿಕಿತ್ಸಾ ಪ್ರತಿಪಾದಕರಾಗಿ, ಪತ್ರಿಕೋದ್ಯಮಿಯಾಗಿ, ಸಮಾಜಮುಖಿ ಚಿಂತಕರಾಗಿ ಸೇವ ಸಲ್ಲಿಸುತ್ತಿದ್ದರು. ಹೊ.ಶ್ರೀಯವರ ಸಾರಥ್ಯದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕಾರ್ಯ ಪ್ರವೃತ್ತವಾಗಿರುವ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಇಂದು ಇಡೀ ರಾಷ್ಟ್ರದಲ್ಲಿಯೇ ಮುಂಚೂಣಿಯ ಆದರ್ಶ ಸಂಸ್ಥೆಯಾಗಿ ರೂಪುಗೊಂಡಿದೆ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಧರ್ಮದರ್ಶಿಗಳೂ ಆಗಿದ್ದ ಡಾ.ಹೊ.ಶ್ರೀಯವರು ಶ್ರೀ ಮಠದ ಸರ್ವಾಂಗೀಣ ಏಳಿಗೆಯಲ್ಲಿ ಸಕ್ರಿಯರಾಗಿದ್ದರು. ಶ್ರೀನಿವಾಸಯ್ಯನವರ ಜನ್ಮ ಸ್ಥಳವಾಗಿರುವ ಚೌದರಿಕೊಪ್ಪಲನ್ನು ಮಾದರಿ ಗ್ರಾಮ ಮಾಡಿ ಗಾಂಧೀ ದರ್ಶನಕ್ಕೊಂದು ದಿಟ್ಟ ಆಯಾಮ ತೋರಿದ್ದರು. ಲಕ್ಷಾಂತರ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗಾಂಧಿ ತತ್ವಾದರ್ಶಗಳ ಕುರಿತು ಉಪನ್ಯಾಸ ನೀಡಿ ಯುವ ಶಕ್ತಿಯ ಮನದಾಳದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದರು.
ನಿಧನದಿಂದ ಇಂದು ನಾಡು ಒಬ್ಬ ಮಹಾನ್ ಸಾಧಕನನ್ನು ಕಳೆದುಕೊಂಡಂತಾಗಿದೆ. ಭಗವಂತನು ಇವರ ನಿಧನದಿಂದ ದುಃಖ ತಪ್ತರಾಗಿರುವ ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿ ವೃಂದಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನೂ, ಶ್ರೀನಿವಾಸಯ್ಯನವರ ಆತ್ಮಕ್ಕೆ ಚಿರಶಾಂತಿಯನ್ನೂ ನೀಡಲೆಂದು ಆಶಿಸುತ್ತೇವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin