ಡಿಕೆಶಿ ಮೇಲೆ ಐಟಿ ದಾಳಿಯಾದಾಗ ಸೈಲೆಂಟಾಗಿದ್ದ ಬಿಎಸ್ವೈ ವಿರುದ್ಧ ದೂರು
ಬೆಂಗಳೂರು,ಆ.11-ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಸಂಬಂಧಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಮೌನವಾಗಿಯೇ ಅಂತರ ಕಾಪಾಡಿಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ದೂರು ನೀಡಲು ನಾಯಕರು ಮುಂದಾಗಿದ್ದಾರೆ.
ನಾಳೆ ಬೆಂಗಳೂರಿಗೆ ಮೂರು ದಿನಗಳ ಪ್ರವಾಸಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮಿಸುತ್ತಿದ್ದಾರೆ. ಈ ವೇಳೆ ಪಕ್ಷದಲ್ಲಿನ ಕೆಲ ಪ್ರಮುಖರು ಬಿಎಸ್ವೈ ಅವರ ಜಾಣ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು , ವಿವರಣೆ ಕೇಳುವಂತೆ ರಾಷ್ಟ್ರೀಯ ನಾಯಕರಿಗೆ ದೂರು ಸಲ್ಲಿಸಲಿದ್ದಾರೆ.
ಈಗಾಗಲೇ ಬಿಜೆಪಿಯ ಒಂದು ಬಣ ವೇದಿಕೆ ಸಿದ್ದಪಡಿಸಿದ್ದು , ಅಮಿತ್ ಷಾ ಭೇಟಿಗೆ ಸಂಘಪರಿವಾರದ ಪ್ರಮುಖ ನಾಯಕರೊಬ್ಬರು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಡಿ.ಕೆ.ಶಿವಕುಮಾರ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ರಾಜ್ಯ ಸರ್ಕಾರ ಕೇಂದ್ರದ ವಿರುದ್ದ ಹಿಗ್ಗಾಮುಗ್ಗಾ ಟೀಕಾ ಪ್ರಹಾರ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ದುರುದ್ದೇಶಪೂರ್ವಕವಾಗಿಯೇ ದಾಳಿ ನಡೆಸಲು ಸೂಚನೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು.
ಸಾಲದಕ್ಕಾಗಿ ಸಂಸತ್ನ ಉಭಯ ಸದನಗಳಲ್ಲೂ ಕೂಡ ಇದೇ ವಿಷಯವನ್ನು ಮುಂದಿಟ್ಟುಕೊಂಡು ಆಡಳಿತಾರೂಢ ಪಕ್ಷವನ್ನು ಕಾಂಗ್ರೆಸ್ ಹಣಿಯಲು ಮುಂದಾಗಿತ್ತು. ಕೇವಲ ನೆಪ ಮಾತ್ರಕ್ಕೆ ಎಂಬಂತೆ ಯಡಿಯೂರಪ್ಪ ಡಿ.ಕೆ.ಶಿವಕುಮಾರ್ ಸಮರ್ಥ ನಾಯಕ. ಈ ಪ್ರಕರಣವನ್ನು ಅವರು ಎದುರಿಸುವಷ್ಟು ಸಮರ್ಥವಾಗಿದ್ದಾರೆ ಎಂದು ಹೇಳಿಕೆ ನೀಡಿ ಜಾರಿಕೊಂಡಿದ್ದರು. ಆದರೆ ರಾಜ್ಯ ಸರ್ಕಾರ ಟೀಕೆಗೆ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ.
ಡಿ.ಕೆ.ಶಿವಕುಮಾರ್ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿತು. ಇದನ್ನು ರಾಜ್ಯ ಬಿಜೆಪಿ ನಾಯಕರು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದರು. ಸ್ವತಃ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರೇ ಏನೂ ಹೇಳದ ಮೇಲೆ ನಾವೇಕೆ ಮಾತನಾಡಬೇಕೆಂದು ಬಹುತೇಕ ನಾಯಕರು ಮೌನಕ್ಕೆ ಶರಣಾದರು.
ಇದರಿಂದ ಜನರ ಭಾವನೆಯಲ್ಲಿ ಶಿವಕುಮಾರ್ ಮೇಲೆ ಐಟಿ ಅಧಿಕಾರಿಗಳು ದುರದ್ದೇಶ ಪೂರ್ವಕವಾಗಿಯೇ ದಾಳಿ ನಡೆಸಿರಬಹುದೆಂಬ ಅನುಮಾನವೂ ವ್ಯಕ್ತವಾಯಿತು. ಸಾಲದಕ್ಕೆ ಡಿಕೆಶಿ ಮೇಲೆ ಒಂದಿಷ್ಟು ಅನುಕಂಪ ವ್ಯಕ್ತವಾಗಿತ್ತು. ಐಟಿ ಸ್ವಾಯತ್ತ ಸಂಸ್ಥೆಯಾಗಿದ್ದು ಕೇಂದ್ರ ಸರ್ಕಾರ ಯಾರೊಬ್ಬರ ಮೇಲೆ ದಾಳಿ ನಡೆಸಲು ಸೂಚನೆ ಕೊಡುವುದಿಲ್ಲ. ಅನುಮಾನದ ಬಂದ ಯಾವುದೇ ವ್ಯಕ್ತಿಯ ಮೇಲೆ ದಾಳಿ ನಡೆಸಲು ಸ್ವತಂತ್ರವಾಗಿದೆ. ತನಿಖೆ ಮುಗಿಯುವವರೆಗೂ ಕೇಂದ್ರದ ಮೇಲೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ ಎಂಬು ಹೇಳಿಕೆ ಬಿಜೆಪಿ ನಾಯಕರಿಂದ ವ್ಯಕ್ತವಾಗಲಿಲ್ಲ.
ರಾಜ್ಯ ಸರ್ಕಾರ ನಿರಂತರವಾಗಿ ಕೇಂದ್ರದ ಮೇಲೆ ದಾಳಿ ನಡೆಸಿದಾಲೂ ಮುಖಂಡರಾದ ಜಗದೀಶ್ ಶೆಟ್ಟರ್, ಸದಾನಂದಗೌಡ, ಅನಂತಕುಮಾರ್, ಈಶ್ವರಪ್ಪ, ಅಶೋಕ್ ಸೇರಿದಂತೆ ಯಾವುದೇ ನಾಯಕರು ಬಾಯಿ ಬಿಡದಿರುವುದಕ್ಕೆ ಪಕ್ಷದ ವಲಯದಲ್ಲೇ ಅಸಮಾಧಾನವಾಗಿತ್ತು. ಈ ಎಲ್ಲ ಅಂಶಗಳನ್ನು ಟಿಪ್ಪಣಿ ಮಾಡಿಕೊಂಡಿರುವ ಪಕ್ಷದ ನಾಯಕರು ವರಿಷ್ಠರಿಗೆ ದೂರು ನೀಡಲು ಮುಂದಾಗಿದ್ದಾರೆ. ಅಲ್ಲದೆ ರಾಜ್ಯದ ಬಹುತೇಕ ನಾಯಕರು ಮೋದಿ ಅಲೆಯನ್ನೇ ನಂಬಿಕೊಂಡು ಸಂಘಟನೆಯಲ್ಲಿ ತೊಡಗಿಕೊಂಡಿಲ್ಲ.
ರಾಜ್ಯ ಸರ್ಕಾರದ ವೈಪಲ್ಯಗಳು , ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆ, ಅಧಿಕಾರಿಗಳ ಬೇಕಾಬಿಟ್ಟಿ ವರ್ಗಾವಣೆ, ಆರ್ಎಸ್ಎಸ್ ಕಾರ್ಯಕರ್ತರ ಹತ್ಯೆ ಸೇರಿದಂತೆ ಯಾವುದರಲ್ಲೂ ಸಕ್ರೀಯರಾಗದಿರುವುದರ ಬಗ್ಗೆ ದೂರು ನೀಡಲು ಸಿದ್ದತೆ ನಡೆದಿದೆ. ಯಡಿಯೂರಪ್ಪ ವಿರೋಧಿ ಬಣದ ಸಂಘ ಪರಿವಾರ ಹಿನ್ನೆಲೆಯ ನಾಯಕರೊಬ್ಬರು ಅಮಿತ್ ಷಾ ಭೇಟಿಗೆ ಸಮಯ ನಿಗದಿಪಡಿಸಿ ದೂರು ನೀಡುವಂತೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.