ಡಿಜಿಟಲ್ ಲೈಬ್ರರಿ 6 ತಿಂಗಳಲ್ಲಿ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Umashre--vccbn

ಬೆಂಗಳೂರು, ಆ.26- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಮೂಲ್ಯ ಪುಸ್ತಕ ಮತ್ತು ದಾಖಲಾತಿಗಳನ್ನು ಒಳಗೊಂಡ ಡಿಜಿಟಲ್ ಲೈಬ್ರರಿಯನ್ನು ಇನ್ನು 6 ತಿಂಗಳ ಒಳಗಾಗಿ ಆರಂಭಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದರು. ನಗರದ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಐತಿಹಾಸಿಕ ದಾಖಲೆಗಳ ಛಾಯಾಚಿತ್ರ ಪ್ರದರ್ಶನ ಮತ್ತು ಬ್ರಿಟಿಷ್ ಆಡಳಿತದ ದಾಖಲೆಗಳ ಪುಸ್ತಕಗಳನ್ನು ಸಂಶೋಧನೆಗಾಗಿ ಅನಾವರಣ ಮಾಡಿ ಮಾತನಾಡಿದ ಅವರು, ಸುಮಾರು 250 ವರ್ಷಗಳ ಹಿಂದಿನ ದಾಖಲೆಗಳು, ಪತ್ರಗಳು ಮತ್ತು ಆಡಳಿತದ ಮಾಹಿತಿಗಳು ಲಂಡನ್ನ ಲೈಬ್ರರಿಯಲ್ಲಿ ಇದ್ದವು. ನಮ್ಮ ಇಲಾಖೆ ಸತತವಾಗಿ ಸಂಪರ್ಕ ಮಾಡಿ ಅವುಗಳನ್ನು ಕರ್ನಾಟಕಕ್ಕೆ ತಂದಿದೆ ಎಂದು ಹೇಳಿದರು.

ಈ ಅಮೂಲ್ಯ ದಾಖಲಾತಿಗಳನ್ನು ಪ್ರತಿ ವರ್ಷ 15 ಕಾಲೇಜುಗಳಲ್ಲಿ ಪ್ರದರ್ಶನ ಮಾಡುವ ಪ್ರವೃತ್ತಿಯನ್ನು ಕಳೆದ ಮೂರು ವರ್ಷಗಳಿಂದಲೂ ನಡೆಸಿಕೊಂಡು ಬಂದಿದ್ದೇವೆ. ಅದರ ಭಾಗವಾಗಿ ಇಂದು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ದಾಖಲಾತಿ ಪ್ರದರ್ಶನವಾಗಿದೆ.  ಸುಮಾರು 72 ಗ್ರಂಥಗಳನ್ನು ಅನಾವರಣ ಮಾಡಲಾಗಿದೆ. ಇದರ ಅಧ್ಯಯನದಿಂದ ವಿದ್ಯಾರ್ಥಿಗಳಲ್ಲಿ ಜ್ಞಾನ ಹೆಚ್ಚಾಗಲಿದೆ. ರಾಜ್ಯದ ಇತಿಹಾಸದ ನೈಜ್ಯತೆ ತಿಳಿಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಅಮೂಲ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸುವ ಪ್ರಯತ್ನ ಪ್ರಗತಿಯಲ್ಲಿದೆ. ಅಪ್ರಕಟಿತ ಅಮೂಲ್ಯ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ 50 ಪುಸ್ತಕಗಳನ್ನು ಗಣಕ ತಂತ್ರಾಂಶಕ್ಕೆ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುವ್ಯವಸ್ಥಿತವಾದ ಡಿಜಿಟಲ್ ಲೈಬ್ರರಿಯನ್ನು ಇನ್ನು 6 ತಿಂಗಳಲ್ಲಿ ಆರಂಭಿಸಲಾಗುವುದು. ಸುಮಾರು 250 ಪುಸ್ತಕಗಳನ್ನು ನ್ಯೂಸ್ ಹಂಟ್ನಲ್ಲಿ ಪ್ರಕಟಿಸಲಾಗಿದೆ. ಒಂದರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕಗಳು ನ್ಯೂಸ್ ಹಂಟ್ನಲ್ಲಿ ಲಭ್ಯವಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಜತೆಗೆ ಸಂರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.  ಇಂದು ಸಂಸ್ಕೃತಿ ಬದಲಾಗುತ್ತಿದೆ. ನಮಸ್ಕಾರ ಎಂದರೆ ಪ್ರತಿಕ್ರಿಯಿಸುವುದಿಲ್ಲ. ಹಾಯ್, ಬಾಯ್ ಎಂದರೆ ವಿದ್ಯಾರ್ಥಿಗಳು ಸ್ಪಂದಿಸುತ್ತಾರೆ. ವಿದ್ಯಾರ್ಥಿಗಳನ್ನು ಮಕ್ಕಳು ಎಂದರೆ ಸಿಟ್ಟು ಬರುತ್ತದೆ. ಸ್ನೇಹಿತರು ಎನ್ನಬೇಕಾಗಿದೆ ಎಂದು ಉಮಾಶ್ರೀ ಹಾಸ್ಯ ಚಟಾಕಿ ಹಾರಿಸಿದರು.

ನಾನು ಪಿಯುಸಿ ಓದಿದವಳು, ಇತ್ತೀಚೆಗಷ್ಟೆ ಎಂಎ ಮಾಡಿಕೊಂಡಿದ್ದೇನೆ. ನಿಮ್ಮ ತಾಯಂದಿರಿಗೆ ಮುಂದೆ ಓದಬೇಕು ಎಂಬ ಅಭಿಲಾಷೆ ಇದ್ದರೆ ಅದಕ್ಕೆ ಸಹಕರಿಸಿ. ಮುಕ್ತ ವಿಶ್ವವಿದ್ಯಾಲಯದ ಮೂಲಕ ಓದಲು ಅನುಕೂಲ ಕಲ್ಪಿಸಿಕೊಡಿ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ನಿರ್ದೇಶಕ ಕೆ.ಎ.ದಯಾನಂದ್, ಪತ್ರಗಾರ ಇಲಾಖೆಯ ಉಪ ನಿರ್ದೇಶಕಿ ಡಾ.ಅಂಬುಜಾಕ್ಷಿ, ಇತಿಹಾಸತಜ್ಞ ಡಾ.ಪೃಥ್ವಿದತ್ತ ಚಂದ್ರಶೋಭಿ, ಪ್ರಾಂಶುಪಾಲರಾದ ಡಾ.ಶಾಂತಕುಮಾರಿ ಮತ್ತಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin