ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ : ಸಚಿವ ಜಾರ್ಜ್ ಗೆ ಸಿಐಡಿ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

Jeorgeಬೆಂಗಳೂರು, ಆ.19- ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಜೆ.ಜಾರ್ಜ್ ವಿಚಾರಣೆಗೆ ಹಾಜರಾಗಬೇಕೆಂದು ಸಿಐಡಿ ತನಿಖಾ ತಂಡ ನೋಟಿಸ್ ನೀಡಿದೆ. ಈ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಮೊದಲನೆ ಆರೋಪಿಯಾಗಿರುವುದರಿಂದ ವಿಚಾರಣೆಗೆ ಹಾಜರಾಗಬೇಕೆಂದು ಸಿಐಡಿ ತನಿಖಾ ತಂಡದ ಮುಖ್ಯಸ್ಥರು ನೋಟಿಸ್ ಜಾರಿ ಮಾಡಿದ್ದಾರೆ. ಈಗಾಗಲೇ ಈ ಪ್ರಕರಣದ ಇತರೆ ಆರೋಪಿಗಳಾದ ಲೋಕಾಯುಕ್ತ ಎಡಿಜಿಪಿಯಾಗಿದ್ದ ಪ್ರಣವ್ ಮೊಹಾಂತಿ ಹಾಗೂ ಗುಪ್ತಚರ ವಿಭಾಗದ ಎಡಿಜಿಪಿ ಎ.ಎನ್.ಪ್ರಸಾದ್ ಕೂಡ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ.

ಸಿಐಡಿ ತನಿಖಾ ತಂಡದ ಮುಖ್ಯಸ್ಥ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈಗಾಗಲೇ ಗಣಪತಿ ಕುಟುಂಬದ ಪತ್ನಿ, ಪುತ್ರರು, ತಂದೆ, ಸಹೋದರ ಸೇರಿದಂತೆ ಮತ್ತಿತರರಿಂದ ಮಾಹಿತಿ ಕಲೆ ಹಾಕಲಾಗಿದೆ.   ಇದರ ಜತೆಗೆ ಮಡಿಕೇರಿಯ ಜಿಲ್ಲಾ ನ್ಯಾಯಾಲಯ ಹಾಗೂ ಹೈಕೋರ್ಟ್ ಪ್ರಕರಣದ ಮೂವರು ಆರೋಪಿಗಳು ವಿಚಾರಣೆಗೆ ಸಹಕಾರ ನೀಡಬೇಕೆಂದು ಸೂಚನೆ ಕೊಟ್ಟಿತ್ತು.  ಮಡಿಕೇರಿ ನ್ಯಾಯಾಲಯದ ನಿರ್ದೇಶನದಂತೆ ಕೆ.ಜೆ.ಜಾರ್ಜ್, ಪ್ರಣವ್ ಮೊಹಾಂತಿ ಹಾಗೂ ಎ.ಎನ್.ಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು.

ಘಟನೆ ನಡೆದು ಒಂದು ತಿಂಗಳು ಮುಗಿದಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ವಿಚಾರಣೆ ನಡೆಸಬೇಕಾದ ಅಗತ್ಯವಿರುವ ಕಾರಣ ಜಾರ್ಜ್ಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಮೂಲಗಳ ಪ್ರಕಾರ, ಸಿಐಡಿ ತನಿಖಾ ತಂಡ ಈಗಾಗಲೇ ಪ್ರಣವ್ ಮೊಹಾಂತಿಗೆ ಈ ಪ್ರಕರಣದಲ್ಲಿ ಕ್ಲೀನ್ಚಿಟ್ ನೀಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಉಳಿದಂತೆ ಜಾರ್ಜ್ ಮತ್ತು ಎ.ಎನ್.ಪ್ರಸಾದ್ ಪಾತ್ರ ಕುರಿತು ಸಿಐಡಿ ಮಾಹಿತಿ ಕಲೆ ಹಾಕುತ್ತಿದೆ. ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿದ್ದ ಎಂ.ಕೆ.ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನನ್ನ ಆತ್ಮಹತ್ಯೆಗೆ ಈ ಮೂವರು ಕಾರಣ ಎಂದು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.  ಇದು ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ತಮ್ಮ ಸ್ಥಾನವನ್ನು ಕಳೆದುಕೊಳ್ಳುವಂತಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin

Comments are closed.