ಡಿವೈಡರ್ಗೆ ತಾಗಿ ಲಾರಿಗೆ ಡಿಕ್ಕಿಹೊಡೆದ ಖಾಸಗಿ ವೋಲ್ವೋ ಬಸ್, ಚಾಲಕ ಸೇರಿ ಇಬ್ಬರ ಸಾವು
ಬೆಂಗಳೂರು/ಹುಬ್ಬಳ್ಳಿ, ಏ.2- ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಸಂಸ್ಥೆಯ ವೋಲ್ವೋ ಬಸ್ವೊಂದು ರಸ್ತೆ ಬದಿಯ ಡಿವೈಡರ್ಗೆ ತಾಗಿ ನಂತರ ಲಾರಿಗೆ ಡಿಕ್ಕಿಹೊಡೆದ ಪರಿಣಾಮ ಇಬ್ಬರು ಮೃತಪಟ್ಟು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರ್ಘಟನೆ ಇಂದು ಬೆಳಗ್ಗೆ ಹಾವೇರಿ ಶಿಗ್ಗಾಂವ ತಾಲ್ಲೂಕಿನ ತಡಸ ಬಳಿ ನಡೆದಿದೆ. ಬಸ್ ಚಾಲಕ ಲವ(35), ಪ್ರಯಾಣಿಕ ರವಿಕುಮಾರ್ ಮೆಹೆತಾ(39) ಮೃತಪಟ್ಟ ದುರ್ದೈವಿಗಳು.
ಮನೀಷ ಟ್ರಾವಲ್ಸ್ನ ವೋಲ್ವೋ ಬಸ್ ಕಳೆದ ರಾತ್ರಿ ಬೆಂಗಳೂರಿನ ಆನಂದರಾವ್ ವೃತ್ತದಿಂದ ಹುಬ್ಬಳ್ಳಿ-ಬೆಳಗಾವಿ ಮಾರ್ಗವಾಗಿ ಗೋವಾಕ್ಕೆ ತೆರಳುತ್ತಿತ್ತು. ಮುಂಜಾನೆ 4.30ರ ಸಂದರ್ಭದಲ್ಲಿ ನಿದ್ದೆ ಮಂಪರಿನಲ್ಲಿದ್ದ ಬಸ್ ಚಾಲಕ ವಾಹನವನ್ನು ವೇಗವಾಗಿ ಓಡಿಸುತ್ತಿದ್ದ. ತಿರುವೊಂದರ ಬಳಿ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ಗೆ ತಾಗಿ ನಂತರ ಎದುರಿಗೆ ಬರುತ್ತಿದ್ದ ಟೈಲ್ಸ್ ತುಂಬಿದ ಲಾರಿಗೆ ಗುದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿದ್ದೆಗೆ ಜಾರಿದ್ದ ಪ್ರಯಾಣಿಕರು ಅಪಘಾತ ನಂತರ ಜೀವ ಉಳಿಸಿಕೊಳ್ಳಲು ಬಸ್ನಿಂದ ಕೂಗುತ್ತ ಆಚೆ ಎಗರಿದ್ದಾರೆ. ಈ ವೇಳೆ ತಳ್ಳಾಟದಲ್ಲಿ ಕೆಲವರು ಗಾಯ ಮಾಡಿಕೊಂಡಿದ್ದಾರೆ.
ಕೆಲವರು ಬಸ್ಗೆ ಬೆಂಕಿ ಬೀಳಬಹುದೆಂಬ ಆತಂಕದಿಂದ ದೂರವಾಣಿ ಮೂಲಕವೇ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದ ಹಿನ್ನೆಲೆಯಲ್ಲಿ ಕೆಲವೇ ಕ್ಷಣದಲ್ಲಿ ಬಂದ ಸಿಬ್ಬಂದಿಗಳು ಪ್ರಯಾಣಿಕರಿಗೆ ನೆರವಾಗಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟರೆ. ಮೂಲತಃ ಬಿಹಾರದವರಾದ ಪ್ರಸ್ತುತ ಬೆಂಗಳೂರಿನ ಬನ್ನೇರುಘಟ್ಟ ಬಳಿ ಕಾರ್ಖಾನೆಯೊಂದರಲ್ಲಿ ನೌಕರರಾಗಿದ್ದ ರವಿಕುಮಾರ್ ಮೆಹೆತಾ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆರ್ಎನ್ಆರ್ ಕಂಪೆನಿಯ ಲಾರಿಯ ಚಾಲಕ ಮತ್ತು ಕೂಲಿಕಾರ್ಮಿಕರು ಅಪಾಯದ ಮುನ್ಸೂಚನೆ ಅರಿತು ವಾಹನದಿಂದ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ತಡಸ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು ಕಾಮನ್ ಬೈಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಈ ಸಂಜೆ ಪತ್ರಿಕೆಗೆ ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS