ಡಿಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ರೊಚ್ಚಿಗದ್ದ ಡಿಕೆ ಬ್ರದರ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

DK-Brothers--01
ಬೆಂಗಳೂರು, ಮೇ 23- ಉಪಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ನಿನ್ನೆ ಸಂಜೆ ಹೈಕಮಾಂಡ್ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಎಂದು ಘೋಷಿಸಿದ ಬೆನ್ನಲ್ಲೇ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮೇಲೆ ಹರಿಹಾಯ್ದಿದ್ದಾರೆ.

ನಿನ್ನೆ ಸಂಜೆಯೇ ಡಿಕೆಶಿ ಸಹೋದರರು ಹೋಟೆಲ್‍ನಿಂದ ಹೊರಬಂದಿದ್ದು, ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದೆ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ. ಇಂದು ನಿಯೋಜಿತ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆ.ಸಿ.ವೇಣುಗೋಪಾಲ್ ಅವರು ಶಿವಕುಮಾರ್ ಅವರ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಫಲ ನೀಡಿಲ್ಲ. ಕಾಂಗ್ರೆಸ್‍ನ ಎಲ್ಲಾ ಕೆಲಸ ಮಾಡಲು ನಾವು ಬೇಕು. ಅಧಿಕಾರ ಅನುಭವಿಸಲು ಬೇರೆಯವರೇ ಎಂಬ ಸಿಟ್ಟನ್ನು ಡಿಕೆಶಿ ಸಹೋದರರು ಹೊರ ಹಾಕಿದ್ದಾರೆ ಎನ್ನಲಾಗಿದೆ.

ಇಂದು ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್, ಪರಮೇಶ್ವರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಸ್ಥಾನ ಗೆದ್ದವರಿಗೂ, ಇಡೀ ರಾಜ್ಯ ಸುತ್ತಿ ಕಾಂಗ್ರೆಸ್ ಗೆಲ್ಲಿಸಿಕೊಟ್ಟವರಿಗೂ ಒಂದೆನೇ ಎಂದು ನೇರವಾಗಿ ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ಎಂಟು ವರ್ಷದಿಂದ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಕೂತಿದ್ದಾರೆ. ಹಲವಾರು ಬಾರಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ನೀಡಿಲ್ಲ. ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣ ಅಧ್ಯಕ್ಷರಾಗಲು ಬಹಳಷ್ಟುಮಂದಿ ಬಾಯಿಬಿಟ್ಟು ಕೂತಿದ್ದಾರೆ. ಆದರೆ, ನಾನು ಕಾದು ಕುಳಿತಿಲ್ಲ. ಕಾಯುತ್ತಾ ಕುಳಿತುಕೊಳ್ಳುವ ವ್ಯಕ್ತಿತ್ವವೂ ನನ್ನದಲ್ಲ ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ರಾಜಕಾರಣಕ್ಕೆ ಬಂದಿದ್ದು ಸನ್ಯಾಸತ್ವ ತೆಗೆದುಕೊಳ್ಳಲು ಅಲ್ಲ. ನಾವು ರಾಜಕಾರಣ ಮಾಡಲಿಕ್ಕಾಗಿಯೇ ಬಂದಿದ್ದೇವೆ. ಹೈಕಮಾಂಡ್ ಯಾವ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡುತ್ತೇನೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಸಚಿವ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಟ್ಟ ?:
ಅಸಮಾಧಾನಗೊಂಡು ಬಂಡಾಯದ ಕಹಳೆ ಊದಿರುವ ಡಿ.ಕೆ.ಶಿವಕುಮಾರ್ ಅವರನ್ನು ಸಮಾಧಾನಪಡಿಸಲು ಹೈಕಮಾಂಡ್ ಕೆಪಿಸಿಸಿ ಸ್ಥಾನ ಮತ್ತು ಸಚಿವ ಸ್ಥಾನ ಎರಡೂ ಹುದ್ದೆಗಳನ್ನು ನೀಡುವ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ಕಾಂಗ್ರೆಸ್‍ನಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ನಿಯಮವಿದೆ. ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಾಲಿಗೆ ಆಪದ್ಬಾಂಧವರಾಗಿದ್ದು, ಸಂಕಷ್ಟ ಬಂದಾಗಲೆಲ್ಲಾ ತಮ್ಮ ವೈಯಕ್ತಿಕ ರಿಸ್ಕ್‍ಗಳನ್ನು ಪಕ್ಕಕ್ಕಿಟ್ಟು ಪಕ್ಷಕ್ಕಾಗಿ ದುಡಿದಿದ್ದಾರೆ. ಇತ್ತೀಚೆಗೆ ಗುಜರಾತ್‍ನಿಂದ ಕಾಂಗ್ರೆಸ್ ಶಾಸಕರು ಕರ್ನಾಟಕಕ್ಕೆ ಬಂದಾಗ ಅವರನ್ನು ರೆಸಾರ್ಟ್‍ನಲ್ಲಿರಿಸಿ ರಕ್ಷಣೆ ನೀಡಿ ಪಕ್ಷವನ್ನು ಸಂಕಷ್ಟದಿಂದ ಪಾರು ಮಾಡಿದವರು ಡಿಕೆಶಿ ಸಹೋದರರು.
ಅದಕ್ಕೂ ಮೊದಲು ಮಹಾರಾಷ್ಟ್ರದಿಂದ ಬಂದ ಕಾಂಗ್ರೆಸ್ ಶಾಸಕರಿಗೂ ರಕ್ಷಣೆ ನೀಡಿ ಡಬಲ್ ಶೂಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದರು. 2018ರ ವಿಧಾನಸಭೆ ಚುನಾವಣೆ ನಂತರ ಅತಂತ್ರ ವಿಧಾನಸಭೆ ನಿರ್ಮಾಣವಾಗಿ ಯಾವ ಪಕ್ಷಕ್ಕೂ ಬಹುಮತ ಬರದೇ ಇದ್ದಾಗ ಬಿಜೆಪಿ, ಆಪರೇಷನ್ ಕಮಲಕ್ಕೆ ಕೈ ಹಾಕಿತ್ತು. ಆಗ ಡಿ.ಕೆ.ಶಿವಕುಮಾರ್ ಅಖಾಡಕ್ಕಿಳಿದು ಶಾಸಕರನ್ನು ರಕ್ಷಿಸಿಕೊಂಡಿದ್ದಲ್ಲದೆ, ಬಿಜೆಪಿಯ ಘಟಾನುಘಟಿ ನಾಯಕರು ನಡೆಸಿದ ಆಪರೇಷನ್ ಕಮಲವನ್ನು ವಿಫಲಗೊಳಿಸಿದರು. ಅಷ್ಟೇ ಅಲ್ಲದೆ ಬಳ್ಳಾರಿ ಉಪ ಚುನಾವಣೆ, ಗುಂಡ್ಲುಪೇಟೆ ಉಪ ಚುನಾವಣೆಗಳಲ್ಲಿ ಪಕ್ಷದ ನಿಷ್ಠೆಗೆ ದುಡಿದು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದರು.
ಕಾಲಕಾಲಕ್ಕೆ ಕಾಂಗ್ರೆಸ್‍ಗೆ ಕಷ್ಟ ಬಂದಾಗಾಲೆಲ್ಲಾ ನೆರವಿಗೆ ನಿಲ್ಲುವ ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಚರ್ಚೆಗಳು ನಡೆದಿದ್ದವು. ಆದರೆ, ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಅವರಿಗೆ ಅವಕಾಶ ನೀಡಿದ್ದು, ಡಿಕೆ ಸಹೋದರರೂ ಸೇರಿದಂತೆ ಹಲವು ಶಾಸಕರಲ್ಲಿ ಅಸಮಾಧಾನ ಮೂಡಿದೆ ಎನ್ನಲಾಗಿದೆ.
ಸದ್ಯಕ್ಕೆ ವಿಶ್ವಾಸಮತಯಾಚನೆವರೆಗೂ ಎಲ್ಲಾ ಶಾಸಕರೂ ಖಾಸಗಿ ಹೋಟೆಲ್‍ನಲ್ಲಿ ತಂಗಲಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆಯನ್ನು ನೋಡಿದರೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಕೆರಳಿಸಿದೆ.
ಡಿ.ಕೆ.ಶಿವಕುಮಾರ್ ಅವರು ಸಚಿವ ಸ್ಥಾನ, ಕೆಪಿಸಿಸಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುತ್ತಾರಾ ಅಥವಾ ಉಪಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟುಹಿಡಿಯುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

Facebook Comments

Sri Raghav

Admin