ಡಿಸಿಸಿ ಬ್ಯಾಂಕ್‍ನಲ್ಲಿ ಅಕ್ರಮ : ಸಿಬಿಐ ತನಿಖೆಗೆ ವಹಿಸುವಂತೆ ಸಿಎಂಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

DCC-Bank
ಬೆಂಗಳೂರು, ಆ.14- ಶಿವಮೊಗ್ಗದ ಡಿಸಿಸಿ ಬ್ಯಾಂಕ್‍ನಲ್ಲಿ ನಡೆದಿರುವ ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ಸಹಕಾರ ಇಲಾಖೆ ವಿಶೇಷ ಕರ್ತವ್ಯಾಧಿಕಾರಿ ಎಂ.ವೆಂಕಟಸ್ವಾಮಿ ತಿಳಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಡಿಸಿಸಿ ಬ್ಯಾಂಕ್‍ನಲ್ಲಿ ಭಾರೀ ಅಕ್ರಮಗಳು ನಡೆಯುತ್ತಿದ್ದು, ಇದನ್ನು ಬಯಲಿಗೆಳೆಯಲು ಸಿಬಿಐನಿಂದ ಮಾತ್ರ ಸಾಧ್ಯವಿದೆ., ಹಾಗಾಗಿ ಸಿಬಿಐ ತನಿಖೆಗೆ ಒಪ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಸಹಕಾರ ಇಲಾಖೆ ನಿಬಂಧಕರು ಕಳೆದ ತಿಂಗಳು 15ರಂದು ಸಲ್ಲಿಸಿರುವ ವರದಿ ಆಧಾರದ ಮೇಲೆ ಸಹಕಾರ ಇಲಾಖೆ ಕಾರ್ಯದರ್ಶಿಯವರು ಸಿಬಿಐ ತನಿಖೆಗೆ ಮುಖ್ಯಮಂತ್ರಿಯವರಿಗೆ ಶಿಫಾರಸು ಮಾಡಿದ್ದಾರೆ. ಡಿಸಿಸಿ ಬ್ಯಾಂಕ್‍ನ ಮಾನ್ಯತೆಯನ್ನು ಏಕೆ ರದ್ದುಗೊಳಿಸಬಾರದು ಎಂದು ನಬಾರ್ಡ್ ಆರ್‍ಬಿಐಗೆ ಪತ್ರ ಬರೆದ ಬೆನ್ನಲ್ಲೆ ಇಡೀ ಹಗರಣವನ್ನು ಸಿಬಿಐಗೆ ವಹಿಸುವಂತೆ ಸ್ವತಃ ಸಹಕಾರ ಇಲಾಖೆಯೇ ನಿರ್ಧಾರಕ್ಕೆ ಬಂದಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ಹೇಳಿದರು.   ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನು ಡಿಸಿಸಿ ಬ್ಯಾಂಕ್ ಪಾಲಿಸಿಲ್ಲ. ಕಳೆದ ಮಾರ್ಚ್‍ನ ಅವಧಿಯಲ್ಲಿ ಬ್ಯಾಂಕ್‍ನಲ್ಲಿ ಶೇ.7ರಷ್ಟು ಮೀಸಲು ನಗದು ವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ಬ್ಯಾಂಕ್ ವಿಫಲವಾಗಿದೆ. ಜತೆಗೆ ಅನುತ್ಪಾದಕ ಆಸ್ತಿ ಪ್ರಮಾಣ ಶೇ.12.8ರಷ್ಟಿದೆ. ಬ್ಯಾಂಕ್‍ನ ಇತರೆ ನಿಧಿಗಳಲ್ಲಿ ಸುಮಾರು 486 ಕೋಟಿ ರೂ. ನಷ್ಟ ಉಂಟಾಗಿದೆ ಎಂದರು.
ಅಕ್ರಮಗಳ ಮೂಲಕ ಬ್ಯಾಂಕ್ ದಿವಾಳಿ ಅಂಚಿಗೆ ತಲುಪಿದ್ದು, ಕಾಲಮಿತಿಯಲ್ಲಿ ಪುನಶ್ಚೇತನಕ್ಕೆ ಬ್ಯಾಂಕ್‍ನ ಮುಖ್ಯ ಆಡಳಿತಾಧಿಕಾರಿ ಮತ್ತು ಆಡಳಿತ ಮಂಡಳಿ ಯಾವುದೇ ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲ. ಬ್ಯಾಂಕ್‍ನಲ್ಲಿ ಸುಮಾರು 50 ಕೋಟಿ ರೂ.ಗಿಂತ ಹೆಚ್ಚು ಅಕ್ರಮ ನಡೆದಿದ್ದು, ಇದನ್ನು ಸಿಬಿಐಗೆ ವಹಿಸಬೇಕೆಂದು ಸಹಕಾರ ಇಲಾಖೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ ಎಂದು ಹೇಳಿದರು.

 

Facebook Comments

Sri Raghav

Admin