ಡಿಸೆಂಬರ್ ಒಳಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 1388 ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar

ಬೆಳಗಾವಿ, ನ.24– ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಡಿಸೆಂಬರ್ ಒಳಗಾಗಿ ವೈದ್ಯಕೀಯೇತರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ಪ್ರಕಟಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಹುಕ್ಕೇರಿ ಶಾಸಕ ಉಮೇಶ್‍ಕತ್ತಿ ತಮ್ಮ ಕ್ಷೇತ್ರದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅದರಲ್ಲೂ ತಜ್ಞ ವೈದ್ಯರ ಕೊರತೆ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರಮೇಶ್‍ಕುಮಾರ್ ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ ತೀವ್ರವಾಗಿದೆ. 1388 ಹುದ್ದೆಗಳು ಖಾಲಿ ಇವೆ. ನೇಮಕಾತಿಗಾಗಿ ಅರ್ಜಿ ಕರೆದರೆ ಸಂದರ್ಶನಕ್ಕೆ ಹಾಜರಾದ ವರು ಅಲ್ಲಿಂದಲೇ ವಾಪಸ್ ಹೊಗಿದ್ದಾರೆ. ಕೆಲಸಕ್ಕೆ ಬಂದಿಲ್ಲ ತಜ್ಞ ವೈದ್ಯರಿಗೆ ಒಂದು ಲಕ್ಷ ರೂ. ವೇತನ, 20ಸಾವಿರ ಮನೆ

ಬಾಡಿಗೆ, ನಂಜುಂಡಪ್ಪ ವರದಿಯಲ್ಲಿ ಗುರುತಿಸಿರುವ ಹಿಂದುಳಿದ ತಾಲ್ಲೂಕುಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಒಂದು ಲಕ್ಷ ರೂ. ಹೆಚ್ಚುವರಿ ವೇತನ ಕೊಡುತ್ತೇವೆ ಎಂದರೂ ತಜ್ಞ ವೈದ್ಯರು ಬರುತ್ತಿಲ್ಲ. ಬಡ ಜನರು ಕಟ್ಟಿದ ತೆರಿಗೆ ಹಣದಲ್ಲಿ ಸರ್ಕಾರದ ಆರ್ಥಿಕ ನೆರವು ಪಡೆದು ಓದಿದ ತಜ್ಞ ವೈದ್ಯರು ಈ ಮಣ್ಣಿನ ಋಣ ತೀರಿಸಬೇಕೆಂಬ ಕೃತಜ್ಞತೆ ಹೊಂದಿಲ್ಲ. ಹಳ್ಳಿಗಳಿಗೆ ಬಂದು ಕೆಲಸ ಮಾಡಲು ನಿರಾಕರಿಸುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ನಾನು ಏನು ಮಾಡಲು ಸಾಧ್ಯ ಎಂದು ಆಕ್ರೋಶ ಭರಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಆಡಳಿತಪಕ್ಷದ ಶಾಸಕ ರಾಜಣ್ಣ, ಜೆಡಿಎಸ್‍ನ ವೈ.ಎಸ್.ವಿ.ದತ್ತ, ಬಿಜೆಪಿಯ ಸಿ.ಟಿ.ರವಿ ಮತ್ತಿತರರು ಸಚಿವರು ಅಸಹಾಯಕರಾಗಬಾರದು ಎಂದು ಸಲಹೆ ನೀಡಿದರು.
ನಾನು ಅಸಹಾಯಕನಾಗಿಲ್ಲ, ಅಧೀರನೂ ಆಗಿಲ್ಲ. ಆದರೆ, ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತಿದ್ದೇನೆ. ರಾಜ್ಯದಲ್ಲಿರುವ 11 ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಡಿಪೆÇ್ಲಮೋ, ಸ್ನಾತಕೋತ್ತರ ಕೋರ್ಸ್‍ಗೆ ಅನುಮತಿ ನೀಡಲಾಗುತ್ತಿದೆ. ಇದರಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಗ್ರಾಮೀಣ ಸೇವೆ ಕಡ್ಡಾಯ ಎಂಬ ಷರತ್ತಿನೊಂದಿಗೆ ಡಿಪ್ಲೊಮಾ , ಪಿಜಿ ಮಾಡಲು ಅವಕಾಶ ನೀಡಲಾಗುತ್ತಿದೆ. ಇದರಿಂದ ಸರ್ಕಾರಿ ತಜ್ಞ ವೈದ್ಯರ ಸಂಖ್ಯೆ ಹೆಚ್ಚಾಗಿ ಖಾಸಗಿ ತಜ್ಞ ವೈದ್ಯರ ಕೊಬ್ಬು ಕಡಿಮೆಯಾಗಲಿದೆ. ಖಾಸಗಿ ತಜ್ಞ ವೈದ್ಯರಿಗೆ ಜನರ ಋಣ ತೀರಿಸಬೇಕು ಎಂಬ ಮನಸ್ಸು ಇಲ್ಲದೇ ಇರುವುದಕ್ಕೆ ನನ್ನ ಆಕ್ರೋಶವಿದೆ ಎಂದರು.

ರಾಜ್ಯದಲ್ಲಿ ಖಾಲಿ ಇರುವ ವೈದ್ಯಾಧಿಕಾರಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. 2148 ಎಫ್‍ಡಿಎ, ಎಸ್‍ಡಿಎ ಹುದ್ದೆಗಳಿಗೆ ಮತ್ತು ವೈದ್ಯಕೀಯ, ವೈದ್ಯಕೀಯೇತರ ಸಿಬ್ಬಂದಿಗಳು ನೇಮಕಾತಿ ನಡೆಯುತ್ತಿದೆ. ಡಿ ಗ್ರೂಪ್ ಹುದ್ದೆಗಳಿಗೆ ಹೊರ ಗುತ್ತಿಗೆ ನೀಡಲಾಗಿದೆ. ಡಿಸೆಂಬರ್ ವೇಳೆಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ಕೊರತೆ ನೀಗಲಿದೆ ಎಂದು ಸಚಿವರು ಭರವಸೆ ನೀಡಿದರು. ತಜ್ಞ ವೈದ್ಯಾಧಿಕಾರಿಗಳ ಹುದ್ದೆಗೆ ನಿವೃತ್ತರನ್ನು ನೇಮಕಾತಿ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಹುಕ್ಕೇರಿ ಕ್ಷೇತ್ರಕ್ಕೆ ಡಿಸೆಂಬರ್ ವೇಳೆಗೆ ಸಿಬ್ಬಂದಿಗಳನ್ನು ನಿಯೋಜಿಸುವುದಾಗಿ ಅವರು ಭರವಸೆ ನೀಡಿದರು.

Facebook Comments

Sri Raghav

Admin