ಡಿ.19ರವರೆಗೆ ಸಿಬಿಐ ಕಸ್ಟಡಿಗೆ ಹವಾಲ ಏಜೆಂಟ್ ಕೆ.ಸಿ.ವೀರೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

K.C.Veerendra-Doddanna

ನವದೆಹಲಿ/ಬೆಂಗಳೂರು, ಡಿ.13-ಸ್ನಾನ ಮನೆಯಲ್ಲಿ 5.70 ಕೋಟ ರೂ. ಹೊಸ ಕರೆನ್ಸಿ ಮತ್ತು ಚಿನ್ನ ಬಚ್ಚಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿತನಾದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಹವಾಲ ಏಜೆಂಟ್ ಮತ್ತು ಕ್ಯಾಸಿನೋ ಉದ್ಯಮಿ ಕೆ.ಸಿ.ವೀರೇಂದ್ರನಿಗೆ ವಿಶೇಷ ನ್ಯಾಯಾಲಯ ಡಿ.19ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.  ಸಿಬಿಐ ಅಧಿಕಾರಿಗಳು ಇಂದು ಬೆಳಿಗ್ಗೆ ವೀರೇಂದ್ರನನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಧೀಶರು ಆತನನ್ನು ಆರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿದರು.  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಐಸಿಐಸಿಐ ಬ್ಯಾಂಕ್ ಮತ್ತು ಕೊಟಕ್ ಮಹೀಂದ್ರ ಬ್ಯಾಂಕ್‍ನ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‍ಐಆರ್ ದಾಖಲಿಸಿದೆ.

ವೀರೇಂದ್ರನ ಮನೆ ಮತ್ತು ಗೋವಾದಲ್ಲಿರುವ ಆತನ ಮಾಲೀಕತ್ವದ ಕ್ಯಾಸಿನೋ ಸೇರಿದಂತೆ 15ಕ್ಕೂ ಹೆಚ್ಚು ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಡಿ.10ರಂದು ದಾಳಿ ನಡೆಸಿದ್ದರು. ದಾಳಿ ಸಂದರ್ಭದಲ್ಲಿ ಅವರ ಸ್ನಾನ ಮನೆಯಿಂದ 2 ಸಾವಿರ ಮುಖಬೆಲೆಯ 5.7 ಕೋಟಿ ರೂ. ಹೊಸ ನೋಟು, 28 ಕೆ.ಜಿ. ಚಿನ್ನದ ಬಿಸ್ಕತ್ತುಗಳು, 100 ರೂ. ಮತ್ತು 20 ರೂ. ಮುಖಬೆಲೆಯ 90 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿತ್ತು.

157 ಕೋಟಿ ರೂ. ವಶ :

ಇದೇ ವೇಳೆ ನೋಟು ವಿನಿಮಯ ದಂಧೆ ವಿರುದ್ಧ ಸಮರ ಸಾರಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜಸ್ತಾನದ ಜೈಪುರದ ಸಹಕಾರಿ ಬ್ಯಾಂಕೊಂದರ ಮೇಲೆ ದಾಳಿ ನಡೆಸಿ ಸೂಕ್ತ ದಾಖಲೆ ಇಲ್ಲದ 157 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ತಮಗೆ ದೊರೆತ ನಿಖರ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ಇಂಟಿಗ್ರಲ್ ಕೋ-ಆಪರೇಟಿವ್ ಬ್ಯಾಂಕ್ ಮೇಲೆ ದಾಳಿ ಮಾಡಿದರು. 156.59 ಕೋಟಿ ರೂ.ಗಳನ್ನು ಜಪ್ತಿ ಮಾಡಿದ್ದಾರೆ. ಇದರಲ್ಲಿ 138 ಕೋಟಿ ರೂ. ಮೌಲ್ಯದ ಹೊಸ 2 ಸಾವಿರ ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.
ಈ ಸಹಕಾರಿ ಬ್ಯಾಂಕಿನಲ್ಲಿ ಕಾನೂನುಬಾಹಿರವಾಗಿ ಹಳೆ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯ ಮಾಡಲಾಗುತ್ತಿತ್ತು. ಇದರಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿರುವ ಬಗ್ಗೆ ತನಿಖೆ ಮುಂದುವರಿದಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin