ರಾಜಕೀಯ ಪ್ರವೇಶ ಕುರಿತು ಸೂಪರ್ ಸ್ಟಾರ್ ರಜನಿ ಹೇಳಿದ್ದೇನು ಗೊತ್ತೇ ..?

ಈ ಸುದ್ದಿಯನ್ನು ಶೇರ್ ಮಾಡಿ

Rajnikat--02

ಚೆನ್ನೈ, ಡಿ.26-ನಾನು ರಾಜಕೀಯಕ್ಕೆ ಸೇರುವ ಬಗ್ಗೆ ಡಿ.31ರಂದು ನನ್ನ ಅಂತಿಮ ನಿಲುವು ಪ್ರಕಟಿಸುತ್ತೇನೆ ಎಂದು ಖ್ಯಾತ ಚಿತ್ರನಟ ರಜನೀಕಾಂತ್ ಇಂದು ಘೋಷಿಸಿದ್ದಾರೆ. ಈ ಮೂಲಕ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಅಸಂಖ್ಯಾತ ಅಭಿಮಾನಿಗಳು ಮತ್ತು ರಾಜಕೀಯ ವಲಯ ಈ ವರ್ಷಾಂತ್ಯದವರೆಗೂ ತೀವ್ರ ಕುತೂಹಲದಿಂದ ನಿರೀಕ್ಷಿಸುವಂತೆ ಮಾಡಿದ್ದಾರೆ. ರಾಜಕೀಯ ರಂಗಕ್ಕೆ ನಾನೇನು ಹೊಸಬನಲ್ಲ. 1990ರಿಂದಲೂ ನಾನು ರಾಜಕೀಯದಲ್ಲಿದ್ದೇನೆ. ನಾನು ರಾಜಕಾರಣಕ್ಕೆ ಪ್ರವೇಶಿಸುತ್ತೇನೆ ಎಂದು ಈವರೆಗೆ ಎಲ್ಲೂ ಅಧಿಕೃತವಾಗಿ ಹೇಳಿಲ್ಲ. ಈ ವರ್ಷಾಂತ್ಯದ ಕೊನೆಯಲ್ಲಿ ಈ ಕುರಿತು ನಿರ್ಧಾರ ಪ್ರಕಟಿಸುತ್ತೇನೆ ಎಂದು ಅಭಿಮಾನಿಗಳಿಗೆ ತಲೈವಾ ತಿಳಿಸಿದ್ದಾರೆ.

ಚೆನ್ನೈನ ರಾಘವೇಂದ್ರ ಹಾಲ್‍ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಆರು ದಿನಗಳ ಫೋಟೋ ಸೆಷನ್‍ನ ಮೊದಲ ದಿನವಾದ ಇಂದು ರಜನಿ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡರು. ರಾಜಕೀಯ ಕ್ಷೇತ್ರಗಳ ಚಲನೆಗಳು ಮತ್ತು ಆಯಾಮಗಳನ್ನು ನಾನು ಚೆನ್ನಾಗಿ ಬಲ್ಲವನಾಗಿದ್ದೇನೆ. ಹೀಗಾಗಿ ರಾಜಕೀಯ ಸೇರಲು ನಾನು ಹಿಂದೇಟು ಹಾಕುವುದಿಲ್ಲ. ಹಾಗೆಯೇ ನಾನು ರಾಜಕೀಯ ಪ್ರವೇಶಿಸುತ್ತೇನೆ ಎಂದು ಹೇಳುತ್ತಿಲ್ಲ. ನಾನು ಈ ಬಗ್ಗೆ ಡಿ.31ರಂದು ನನ್ನ ನಿಲುವು ಘೋಷಿಸುತ್ತೇನೆ ಎಂದು ರಜನಿ ಹೇಳಿದರು.

ಯುದ್ಧ ಎದುರಾದಾಗ ಅದನ್ನು ನಾನು ಎದುರಿಸಬೇಕು. ಯುದ್ಧದಲ್ಲಿ ತೋಳ್ಬಲವಿದ್ದರೆ ಸಾಲದು, ಬುದ್ದಿಬಲವೂ ಬೇಕು ಎಂದು ಶ್ವೇತ್ರವಸ್ತ್ರಧಾರಿಯಾದ ರಜನಿ ಸೂಚ್ಯವಾಗಿ ರಾಜಕೀಯ ಪ್ರವೇಶದ ಸುಳಿವನ್ನೂ ನೀಡಿದ್ದಾರೆ.  ಯುದ್ಧ ಎಂದರೆ ಈಗ ಚುನಾವಣೆ ಮಾತ್ರ. ಈಗ ಯುದ್ಧ ಎದುರಾಗಿದೆಯೇ ಎಂದು ಅಭಿಮಾನಿಗಳನ್ನು ರಜನಿ ಪ್ರಶ್ನಿಸಿದರು. ನಾನು ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ಕೆ.ಬಾಲಚಂದರ್ ಕಾರಣ ಎಂದು ಸ್ಮರಿಸಿದ ರಜನಿ, ನನ್ನ ನಟನೆಯನ್ನು ಮೆಚ್ಚಿ ಜಯಲಲಿತಾ ಅವರು ನನಗೆ ಪುಷ್ಪಗುಚ್ಚ ನೀಡಿದ್ದರು. ನಾನು ಅಭಿಮಾನಿಗಳ ಆಶೀರ್ವಾದದಿಂದ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿದ್ದೇನೆ ಎಂದು ಸ್ಮರಿಸಿದರು.

ಈ ವರ್ಷದ ತಮ್ಮ ಜನ್ಮದಿನದ ಸಂದರ್ಭದಲ್ಲಿ ಏಕಾಂತ ವಾಸಕ್ಕೆ ಮೊರೆ ಹೋಗಿದ್ದಕ್ಕೆ ಅವರು ಅಭಿಮಾನಿಗಳ ಕ್ಷಮೆ ಕೋರಿದರು.  67 ವರ್ಷದ ರಜನಿ ಕಳೆದ ಮೇ ತಿಂಗಳಿನಲ್ಲಿ ಆಯ್ದ ಅಭಿಮಾನಿಗಳಾಗಿ ಇದೇ ರೀತಿಯ ಫೋಟೋ ಸೆಷನ್‍ನಲ್ಲಿ ಭಾಗವಹಿಸಿ ರಾಜಕೀಯ ಪ್ರವೇಶದ ಬಗ್ಗೆ ಮುನ್ಸೂಚನೆ ನೀಡಿದ್ದರು. ಡಿ.12ರಂದು ತಮ್ಮ ಜನ್ಮದಿನದಂದು ರಜನಿ ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತವಾಗಿ ಘೋಷಿಸುತ್ತಾರೆ ಎಂದು ಅಭಿಮಾನಿಗಳು ಮತ್ತು ರಾಜಕೀಯ ವಲಯ ನಿರೀಕ್ಷಿಸಿತ್ತು. ಆದರೆ ಅವರು ತಮ್ಮ ನಿರ್ಧಾರವನ್ನು ಡಿ.31ಕ್ಕೆ ಮುಂದೂಡಿ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಉಳಿಸಿದ್ದಾರೆ.

Facebook Comments

Sri Raghav

Admin