ಡೆಡ್ಲಿ ನಿಫಾ ವೈರಸ್ ಭೀತಿಯಿಂದ ಮಾವುಮೇಳ ಮುಂದೂಡಿಕೆ
ಮೈಸೂರು, ಮೇ 24- ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯಬೇಕಿದ್ದ ಮಾವು ಮೇಳವನ್ನು ಮುಂದೂಡಲಾಗಿದೆ. ನಗರದ ತೋಟಗಾರಿಕೆ ಇಲಾಖೆಯಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಮಾವು ಮೇಳ ಪೂರ್ವ ಸಿದ್ಧತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಾವು ಇನ್ನೂ ಮಾಗದ ಕಾರಣ ಮಾವು ಮೇಳವನ್ನು ಜೂನ್ ಮೊದಲ ವಾರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.
ಬಾವಲಿ ತಿಂದ ಹಣ್ಣುಗಳಿಂದ ಹಾಗೂ ಹಂದಿಗಳಿಂದ ನಿಫಾ ವೈರಸ್ ಹರಡುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಾವು ಸೇರಿದಂತೆ ಇತರೆ ಹಣ್ಣು ಖರೀದಿಸುವವರ ಸಂಖ್ಯೆ ಇಳಿಮುಖವಾಗಿದೆ. ಅಲ್ಲದೆ ಹಣ್ಣಗಳ ಬೆಲೆಯೂ ಕಡಿಮೆಯಾಗಿದೆ. ಹಾಗಾಗಿ ಈ ತಿಂಗಳು ಆಯೋಜಿಸಬೇಕಿದ್ದ ಮಾವು ಮೇಳವನ್ನು ಜೂನ್ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಮಂಜುನಾಥ್ ತಿಳಿಸಿದ್ದಾರೆ. ಜೂನ್ ಮೊದಲವಾರದಲ್ಲಿ ಐದು ದಿನಗಳ ಕಾಲ ಮಾವು ಮೇಳ ನಡೆಸಲಾಗುತ್ತದೆ. ಈ ಬಾರಿ 20 ಮಳಿಗೆಗಳಲ್ಲಿ ಮಾವು ಮೇಳ ಹಾಗೂ ಐದು ಮಳಿಗೆಗಳಲ್ಲಿ ಹಲಸಿನ ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.