ಡೈರಿ ಬಾಂಬ್ಗೆ ‘ಸ್ಟೀಲ್ ಬ್ರಿಡ್ಜ್’ ಕುಸಿದು ಬಿದ್ದ ನಂತರ ಮತ್ತೆರಡು ಪ್ರಸ್ತಾವನೆಗಳನ್ನು ಕೈಬಿಡಲು ಮುಂದಾದ ಸರ್ಕಾರ
ಬೆಂಗಳೂರು, ಮಾ.4-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿಡಿಸಿದ ಕಪ್ಪಕಾಣಿಕೆ ಡೈರಿ ಬಾಂಬ್ಗೆ ಉದ್ದೇಶಿತ ಸ್ಟೀಲ್ ಬ್ರಿಡ್ಜ್ ಕುಸಿದು ಬಿದ್ದ ಬೆನ್ನಲ್ಲೇ ಇದೀಗ ಎರಡು ಪ್ರಸ್ತಾವನೆಗಳನ್ನು ಸರ್ಕಾರ ಕೈಬಿಡಲು ಮುಂದಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸುವ ಸಲುವಾಗಿ ಜೆ.ಸಿ.ರಸ್ತೆ ಮತ್ತು ಶಿವಾನಂದ ವೃತ್ತದಲ್ಲಿ ಎರಡು ಸ್ಟೀಲ್ ಬ್ರಿಡ್ಜ್ಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಬಿಡಿಎ ಮತ್ತು ಬಿಬಿಎಂಪಿ ಸಹಭಾಗಿತ್ವದಲ್ಲಿ ಈ ಎರಡೂ ಉಕ್ಕಿನ ಸೇತುವೆಗಳನ್ನು ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಸದ್ಯದಲ್ಲೇ ಇದಕ್ಕೆ ಟೆಂಡರ್ ಕರೆಯಲು ಚಿಂತನೆ ನಡೆಸಲಾಗಿತ್ತು.
ಆದರೆ ಚಾಲುಕ್ಯ ವೃತ್ತದಿಂದ ಹೆಬ್ಬಾಳ ಫ್ಲೈಓವರ್ವರೆಗೆ ಸುಮಾರು 7 ಕಿ.ಮೀ. ಉದ್ದದ ಉಕ್ಕಿನ ಸೇತುವೆ ನಿರ್ಮಾಣದ ಗುತ್ತಿಗೆಯಲ್ಲಿ ಭಾರೀ ಮೊತ್ತದ ಕಿಕ್ಬ್ಯಾಕ್ ನಡೆದಿದ್ದು ಇದರಲ್ಲಿ 65 ಕೋಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬಕ್ಕೆ ಸಂದಾಯವಾಗಿದೆ ಎಂದು ಬಾಂಬ್ ಸಿಡಿಸಿದ್ದರು. ಕೊನೆಗೆ ಸರ್ಕಾರ ಒಲ್ಲದ ಮನಸ್ಸಿನಿಂದಲೇ ಗುರುವಾರ ಈ ಯೋಜನೆ ಅಧಿಸೂಚನೆಯನ್ನು ರದ್ದುಪಡಿಸಿತು. ಇದೀಗ ಪ್ರಸ್ತಾವಿತ ಎರಡು ಉಕ್ಕಿನ ಸೇತುವೆಗಳ ಕಾಮಗಾರಿಯನ್ನೂ ಕೈಬಿಡಲು ಸರ್ಕಾರ ತೀರ್ಮಾನಿಸಿದೆ. ಜೆ.ಸಿ.ರಸ್ತೆಯಲ್ಲಿ ಮಿನರ್ವ ವೃತ್ತ, ಹಡ್ಸನ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸುಮಾರು 2.35 ಕಿ.ಮೀ. ಉದ್ದದ ಉಕ್ಕಿನ ಸೇತುವೆಗೆ 2008ರಲ್ಲೇ ಅಂದಿನ ಬಿಜೆಪಿ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ತದನಂತರ ವಿವಿಧ ಕಾರಣಗಳಿಂದ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು.
ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಈ ಯೋಜನೆಯ ಮೊತ್ತವನ್ನು 104 ಕೋಟಿಯಿಂದ 138 ಕೋಟಿಗೆ ಹೆಚ್ಚಳ ಮಾಡಿ ಸಿಂಪ್ಲೆಕ್ಸ್ ಇಂಫ್ರಾಸ್ಟ್ರಕ್ಚರ್ ಲಿ. ಕಂಪೆನಿಗೆ ಗುತ್ತಿಗೆ ಕಾಮಗಾರಿಯನ್ನು ನೀಡಿತ್ತು. ಇದಲ್ಲದೆ, ನಗರದ ಹೃದಯಭಾಗದಲ್ಲಿರುವ ಶಿವಾನಂದ ವೃತ್ತದಲ್ಲಿ 330 ಮೀಟರ್ ಉದ್ದದ ಸ್ಟೀಲ್ಬ್ರಿಡ್ಜ್ನ್ನು 50 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ನಿರ್ಮಿಸಲು ಮುಂದಾಗಿತ್ತು. ಮೆಜೆಸ್ಟಿಕ್ನಿಂದ ವಿಂಡ್ಸರ್ಮ್ಯಾನರ್, ರೇಸ್ಕೋರ್ಸ್ನಿಂದ ಕುಮಾರಕೃಪಾದವರೆಗೆ ಭಾರೀ ಪ್ರಮಾಣದಲ್ಲಿ ವಾಹನ ಸಂಚಾರದ ದಟ್ಟಣೆಯಿರುವುದರಿಂದ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾಗಿತ್ತು. ರಾಜ್ಯಸರ್ಕಾರ ಈ ಎರಡು ಯೋಜನೆಗಳಿಗೆ ಹಸಿರು ನಿಶಾನೆ ತೋರಲಿದೆ ಎಂದು ಭಾವಿಸಲಾಗಿತ್ತು. ಆದರೆ ಪ್ರಥಮ ಚುಂಬನಂ ದಂತ ಭಗ್ನಂ ಎಂಬಂತೆ ಚಾಲುಕ್ಯ ವೃತ್ತದಿಂದ ಹೆಬ್ಬಾಳ ಫ್ಲೈಓವರ್ವರೆಗಿನ ಉಕ್ಕಿನ ಸೇತುವೆ ಯೋಜನೆಯಿಂದ ಸರ್ಕಾರಕ್ಕೆ ಭಾರೀ ಮುಜುಗರ ಉಂಟಾಯಿತು. ಇನ್ನು ಉಕ್ಕಿನ ಸೇತುವೆ ಸಹವಾಸ ಬೇಡ ಎಂಬ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಿರುವುರಿಂದ ಉಳಿದ ಈ ಎರಡೂ ಯೋಜನೆಗಳು ನೆನೆಗುದಿಗೆ ಬಿದ್ದಿವೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS