‘ಡ್ಯಾಂ ಇರುವುದು ನಿಮಗೆ ನೀರು ಬಿಡಲಿಕ್ಕಲ್ಲ’ : ತಮಿಳುನಾಡಿಗೆ ಖಡಕ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

TBJ

ಬೆಂಗಳೂರು, ಆ.30-ಸಂಕಷ್ಟದ ಸಂದರ್ಭದಲ್ಲಿ ಕಾವೇರಿ ನೀರಿಗಾಗಿ ತಮಿಳುನಾಡು ಸರ್ಕಾರ ಬಂದ್ ಮಾಡುತ್ತಿರುವುದು ಒಂದು ತಂತ್ರವಷ್ಟೆ. ಈ ಬಂದ್ನಿಂದ ಅವರ ಯಾವುದೇ ತಂತ್ರ ಫಲಿಸುವುದಿಲ್ಲ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಇಂದಿಲ್ಲಿ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ಆದರೂ ತಮಿಳುನಾಡಿನವರು ಮುಂದಿನ ಸಾಂಬಾ ಮತ್ತು ಕರುವೈ ಬೆಳೆಗೆ ನೀರು ಕೇಳುತ್ತಿದ್ದಾರೆ. ಆದರೆ, ಇಲ್ಲಿ ನಮಗೆ ಈಗ ಕುಡಿಯುವ ನೀರೇ ಇಲ್ಲ. ನಮ್ಮ ನಿಲುವನ್ನು ನಾವು ಸ್ಪಷ್ಟಪಡಿಸಿದ್ದೇವೆ. ಒಂದಲ್ಲ, ಹತ್ತು ಬಾರಿ ಹೇಳಿದ್ದೇವೆ. ಆದರೂ ಕೂಡ ಬಂದ್ ಮಾಡುವ ತಂತ್ರ ಮಾಡುತ್ತಿದ್ದಾರೆ. ಇದು ಫಲಿಸುವುದಿಲ್ಲ ಎಂದು ಹೇಳಿದರು.

ಸುಪ್ರೀಂಕೋರ್ಟ್ಗೆ ರಾಜ್ಯದ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಮಳೆ ಬರದ ಸಂದರ್ಭದಲ್ಲಿ ನೀರು ಬಿಡುವ ಪ್ರಮೇಯವೇ ಇಲ್ಲ. ನಾವು ಅಣೆಕಟ್ಟುಗಳನ್ನು ಕಟ್ಟಿಕೊಂಡಿರುವುದು ತಮಿಳುನಾಡಿಗೆ ನೀರು ಬಿಡಲು ಅಲ್ಲ ಎಂದು ಹೇಳಿದರು. ನಮಗೆ ಮುಂಗಾರು ಮಳೆ ಬರುವ ಸಮಯ ಮುಗಿದಿದೆ. ತಮಿಳುನಾಡಿನಲ್ಲಿ ಈಗ ಮುಂಗಾರು ಮಳೆ ಸಮಯ ಶುರುವಾಗಿದೆ. ತಮಿಳುನಾಡಿನ ಮುಖಂಡರು ನೀರಿನ ಬೇಡಿಕೆ ಇಡುವ ಬದಲು ಜಲಾಶಯಗಳನ್ನು ನಿರ್ಮಾಣ ಮಾಡಿಕೊಳ್ಳಲಿ. ಹೊಗೇನಕಲ್ನಲ್ಲಿ ಅವರು ಜಲಾಶಯ ನಿರ್ಮಾಣ ಮಾಡಲಿ. ನಮ್ಮ ಡ್ಯಾಮ್ಗಳ ಮೇಲೆ ಅವರು ಕಣ್ಣಿಡಬಾರದು. ನಾವು ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ನಮ್ಮ ಡ್ಯಾಮ್ಗಳು ನಿರ್ಮಾಣವಾಗಿರುವುದು ಅವರಿಗೆ ನೀರು ಬಿಡಲು ಎಂಬ ಮನೋಭಾವ ತಮಿಳುನಾಡಿಗೆ ಬರುವುದು ಬೇಡ. ಅವರ ನೀರಾವರಿ ಸಮಸ್ಯೆ ಬಗೆಹರಿಸಿಕೊಳ್ಳಲು ಅವರು ಕ್ರಮ ಕೈಗೊಳ್ಳಲಿ ಎಂದು ಹೇಳಿದರು. ರಾಜ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕೆರೆಗಳಲ್ಲಿ ಒಂದು ಹನಿ ನೀರಿಲ್ಲ. ಅಂತರ್ಜಲ ಸಂಪೂರ್ಣವಾಗಿ ಬರಿದಾಗಿದೆ. ಇದನ್ನು ತಮಿಳುನಾಡು ಅರ್ಥ ಮಾಡಿಕೊಳ್ಳಬೇಕು. ನಮ್ಮ ಜಲಾಶಯಗಳ ಪರಿಸ್ಥಿತಿ ಬಗ್ಗೆ ತಮಿಳುನಾಡು ರೈತರು ಬಂದು ನೋಡಿಕೊಂಡು ಹೋಗಿದ್ದಾರೆ. ಅದನ್ನು ಅವರು ಅಲ್ಲಿನ ಸಿಎಂಗೆ ವಿವರಿಸಬೇಕು ಎಂದು ಟಿ.ಬಿ.ಜಯಚಂದ್ರ ತಿಳಿಸಿದರು. ಕೆರೆಗಳಿಗೆ ನೀರು ಹರಿಯುವ ಬಫರ್ಜೋನ್ಗಳನ್ನು ತೆರವುಮಾಡುವ ಬಗ್ಗೆ ಚಿಂತನೆ ನಡೆದಿದೆ. ಬಫರ್ಜೋನ್ನಲ್ಲಿ ಗ್ರೀನರಿ ಮೈಂಟೇನ್ ಮಾಡಲು ತೀರ್ಮಾನ ಮಾಡಲಾಗಿದೆ. ಇದು ರಾಜ್ಯದ ಎಲ್ಲ ರಾಜಕಾಲುವೆಗಳಿಗೆ ಅನ್ವಯಿಸಲಿದೆ ಎಂದು ಹೇಳಿದರು.

ಕೆರೆಗಳನ್ನು ಸಂರಕ್ಷಿಸುವುದು ಬಹುಮುಖ್ಯವಾಗಿದೆ. ಒತ್ತುವರಿ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಕೆರೆಗಳನ್ನು ಸಂರಕ್ಷಿಸದಿದ್ದರೆ ದೊಡ್ಡ ಅನಾಹುತವಾಗಲಿದೆ. ಅಂತರ್ಜಲ ಹೆಚ್ಚಿಸಲು ಒತ್ತು ನೀಡಲಿದ್ದೇವೆ. ಬಫರ್ಜೋನ್ ಎಷ್ಟಿರಬೇಕು ಎಂಬುದರ ಬಗ್ಗೆ ಸುಪ್ರೀಂಕೋರ್ಟ್ ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ನಾವಿನ್ನೂ ತೀರ್ಮಾನ ಮಾಡಿಲ್ಲ ಎಂದು ತಿಳಿಸಿದರು. ಬೆಂಗಳೂರು ಕೆರೆ ಮತ್ತು ಕಲುಷಿತ ನೀರನ್ನು ಸಂಸ್ಕರಿಸಿ ಕೋಲಾರ ಕೆರೆಗಳಿಗೆ ಹರಿಸಲಾಗುವುದು. 1950 ಕೋಟಿ ರೂ.ಗೆ ಈಗಾಗಲೇ ಟೆಂಡರ್ ಆಗಿದೆ. ಕೋಲಾರದ ಕೆರೆ ಮತ್ತು ನಾಲೆಗಳನ್ನು ನಾನು ಪರಿಶೀಲಿಸಿದ್ದೇನೆ. ನಮ್ಮ ಅವಧಿಯಲ್ಲಿಯೇ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೆರೆಗಳಿಗೆ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಲೋಕಾಯುಕ್ತ ಹುದ್ದೆ ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸುವುದಾಗಿ ಜಯಚಂದ್ರ ತಿಳಿಸಿದರು.   ಕೆಪಿಎಸ್ಸಿ ಅಧ್ಯಕ್ಷರ ನೇಮಕಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದರು. ಅದೇ ರೀತಿ ಎಸ್.ಆರ್.ನಾಯಕ್ ಅವರಿಗೆ ಒಪ್ಪಿಗೆ ಸೂಚಿಸಿದ್ದರೆ ಅವರೂ ಲೋಕಾಯುಕ್ತರಾಗುತ್ತಿದ್ದರು ಎಂದು ತಿಳಿಸಿದರು.  ನಾಳೆ ಕಂದಾಯ ಭವನದಲ್ಲಿ ಭೂ ವ್ಯಾಜ್ಯಗಳ ನ್ಯಾಯಾಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin