ಡ್ರೈವಿಂಗ್ ಲೈಸೆನ್ಸ್’ಗೂ ಆಧಾರ್ ಕಡ್ಡಾಯ..!

ಈ ಸುದ್ದಿಯನ್ನು ಶೇರ್ ಮಾಡಿ

Driving-Adhar

ನವದೆಹಲಿ, ಮಾ.26- ಒಂದೇ ಹೆಸರಿನಲ್ಲಿ ಬಹು ಡ್ರೈವಿಂಗ್ ಲೈಸನ್ಸ್‍ಗಳನ್ನು(ಚಾಲನಾ ಪರವಾನಗಿ) ಹೊಂದಿ ವಂಚನೆ ಚಟುವಟಿಕೆಗಳನ್ನು ನಡೆಸುತ್ತಿರುವವರನ್ನು ಮಟ್ಟ ಹಾಕಲು ಹೊಸ ಡಿಎಲ್ ನೀಡಿಕೆ ಮತ್ತು ನವೀಕರಣಕ್ಕಾಗಿಯೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.  ನಕಲಿ ದಾಖಲೆಗಳನ್ನು ನೀಡಿ ಅಕ್ರಮವಾಗಿ ಮೊಬೈಲ್ ಸಂಪರ್ಕ ಪಡೆದಿರುವವರನ್ನು ಪತ್ತೆ ಮಾಡಲು ಆಧಾರ್ ಕಾರ್ಡ್‍ನನ್ನು ಕಡ್ಡಾಯಗೊಳಿಸಿರುವ ಬೆನ್ನಲ್ಲೇ, ಇದೇ ಉದ್ದೇಶಕ್ಕಾಗಿ ಇದು ಡಿಎಲ್‍ಗೂ ಅನ್ವಯವಾಗಲಿದೆ. ಈ ವರ್ಷ ಅಕ್ಟೋಬರ್‍ನಿಂದ ಇದು ಜಾರಿಗೆ ಬರುವ ಸಾಧ್ಯತೆ ಇದೆ.
ಹೊಸ ಪರವಾನಗಿಗಳನ್ನು ನೀಡುವಾಗ ಆಧಾರ್ ಗುರುತು ಕಡ್ಡಾಯಗೊಳಿಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಶೀಘ್ರದಲ್ಲೇ ಸೂಚನೆ ನೀಡಲಿದೆ. ಅಲ್ಲದೇ ಡ್ರೈವಿಂಗ್ ಲೈಸನ್ಸ್ ನವೀಕರಣಕ್ಕೂ ಆಧಾರ್ ಅಗತ್ಯ.

ಒಂದು ಅಂದಾಜಿನ ಪ್ರಕಾರ, ಈವರೆಗೆ ದೇಶಾದ್ಯಂತ 18 ಕೋಟಿಗೂ ಅಧಿಕ ಡಿಎಲ್‍ಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಒಂದೇ ಹೆಸರಿನಲ್ಲಿ ಬಹು ಪರವಾನಗಿಗಳನ್ನು ಪಡೆದು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‍ಟಿಒ) ಮತ್ತು ಪೊಲೀಸ್ ಇಲಾಖೆಗೆ ವಂಚಿಸುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ವಂಚನೆ, ಅಪರಾಧ ಚಟುವಟಿಕೆಗಳು ಮತ್ತು ನಕಲಿ ಗುರುತುಗಳನ್ನು ತಡೆಗಟ್ಟಲು ಆಧಾರ್ ಅಸ್ತ್ರವನ್ನು ಬಳಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ನಿಟ್ಟಿನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಈಗಾಗಲೇ ಕಾರ್ಯೋನ್ಮುಖವಾಗಿದೆ. ನಕಲಿ ಗುರುತು ಹಾವಳಿಯನ್ನು ತಡೆಗಟ್ಟಲು ಈ ಸುರಕ್ಷಿತ ವ್ಯವಸ್ಥೆಯನ್ನು ಅಳವಡಿಸುಕೊಳ್ಳುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲು ಸಚಿವಾಲಯ ನಿರ್ಧರಿಸಿದೆ.   ವಿವಿಧ ರಾಜ್ಯಗಳಲ್ಲಿನ ಅನೇಕ ಆರ್‍ಟಿಒ ಕಚೇರಿಗಳಿಂದ ಬಹು ಲೈಸನ್ಸ್‍ಗಳನ್ನು ಪಡೆಯುತ್ತಿರುವ ಪ್ರಕರಣಗಳನ್ನು ಕೊನೆಗೊಳಿಸಲು ನಿರ್ಧರಿಸಲಾಗಿದೆ. ಡ್ರೈವಿಂಗ್ ಲೈಸನ್ಸ್‍ಗೆ ಒಮ್ಮೆ ಆಧಾರ್ ಕಾರ್ಡ್ ವಿವರಗಳನ್ನು ಸೇರಿಸಿದರೆ, ಚೀಟಿಯಲ್ಲಿರುವ ಬಯೋಮೆಟ್ರಿಕ್ ವಿವರಗಳು ನಕಲಿ ಹಾವಳಿಗೆ ಕಡಿವಾಣ ಹಾಕಲು ನೆರವಾಗುತ್ತದೆ.

ವಾಹನಗಳು ಮತ್ತು ಪರವಾನಗಿ ಪಡೆದ ಚಾಲಕರ ಮಾಹಿತಿಗಳನ್ನು ನಿರ್ವಹಣೆ ಮಾಡುವ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‍ಐಸಿ) ಆರ್‍ಟಿಒ ದಾಖಲೆಗಳಲ್ಲಿ ಲಭ್ಯವಾಗುವ ಅಂಕಿಸಂಖ್ಯೆ ಮಾಹಿತಿಯನ್ನು ಅಪ್‍ಲೋಡ್ ಮಾಡುತ್ತದೆ. ವಿವಿಧ ರಾಜ್ಯಗಳ ಆರ್‍ಟಿಒ ಕಚೇರಿಗಳಲ್ಲಿ ಕಂಪ್ಯೂಟರ್ ವ್ಯವಸ್ಥೆ ಇಲ್ಲ. ಅಲ್ಲಿ ಹಳೆ ಪದ್ದತಿಯಿಂದಲೇ (ಮ್ಯಾನುಯಲ್ ಸಿಸ್ಟಮ್) ಡಿಎಲ್‍ಗಳ ನೀಡಿದೆ ಮತ್ತು ನವೀಕರಣ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತಿದೆ. ಎಲ್ಲ ಆರ್‍ಟಿಒಗಳಲ್ಲಿ ರಿಯಲ್-ಟೈಮ್ ಡಾಟಾ ವ್ಯವಸ್ಥೆ ಇರದ ಕಾರಣ ಈಗಾಗಲೇ ಇನ್ನೊಂದು ಡಿಎಲ್ ಹೊಂದಿರುವ ಅರ್ಜಿದಾರರ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ.

ದೇಶದಲ್ಲಿನ ಎಲ್ಲ ಆರ್‍ಟಿಒ ಕಚೇರಿಗಳನ್ನು ಸಂಪೂರ್ಣ ಕಂಪ್ಯೂಟರೀಕರಣಗೊಳಿಸಿದರೆ, ಅರ್ಜಿದಾರನ ಪೂರ್ವಾಪರಗಳನ್ನು ಪತ್ತೆ ಮಾಡಲು ಸುಲಭವಾಗುತ್ತದೆ. ಈ ಮಾಹಿತಿಯು ಡಿಜಿಟಲೀಕರಣವಾದರೆ, ದೊಡ್ಡ ಮಟ್ಟದಲ್ಲಿ ಅಕ್ರಮಗಳು ಮತ್ತು ವಂಚನೆ ಪ್ರಕರಣಗಳಿಗೆ ಲಗಾಮು ಹಾಕಬಹುದು ಎಂದು ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.   ಎಲ್ಲಕ್ಕಿಂತ ಮಿಗಿಲಾಗಿ ಆಧಾರ್ ಕಾರ್ಡ್‍ನನ್ನು ಕಡ್ಡಾಯಗೊಳಿಸಿದರೆ ಹೊಸದಾಗಿ ಡಿಎಲ್ ಪಡೆಯುವವರು ತಮ್ಮ ಗುರುತು ಮತ್ತು ವಿಳಾಸವನ್ನು ದೃಢಪಡಿಸಲು ಅನೇಕ ದಾಖಲೆಗಳನ್ನು ಸಲ್ಲಿಸುವ ಅಗತ್ಯ ಕಂಡುಬರುವುದಿಲ್ಲ. ಇದಕ್ಕಾಗಿ ಸಾರಥಿ ಎಂಬ ಡಾಟಾಬೇಸ್ ಡಿಜಿಟಲ್ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin