ತಂಬಾಕು ಸೇವನೆಯಿಂದ ದೇಶದಲ್ಲಿ ಪ್ರತಿದಿನ 2500 ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Tobaccco

ಬೆಂಗಳೂರು, ಅ.26- ತಂಬಾಕು ಸೇವನೆ ತುಂಬಾ ಅಪಾಯಕಾರಿ ಶೇ.30ಕ್ಕೂ ಅಧಿಕ ಜನರು ಬೀಡಿ, ಸಿಗರೇಟು, ತಂಬಾಕು ಸೇವನೆಯಂತಹ ದುಶ್ಚಟಗಳಿಗೆ ದಾಸರಾಗಿದ್ದಾರೆ. ಇದ ರಿಂದ ಹೊರಬರಲಾರದೆ ದೇಶದಲ್ಲಿ ಪ್ರತಿದಿನ 2500 ಜನ ಸಾವಿಗೀಡಾಗುತ್ತಿದ್ದಾರೆ ಎಂದು ರಾಜ್ಯ ತಂಬಾಕು ನಿಯಂತ್ರಣ ಕೋಶದ ಉಪನಿರ್ದೇಶಕ ಡಾ.ಭಾನುಮೂರ್ತಿ ಆತಂಕ ವ್ಯಕ್ತಪಡಿಸಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಂಬಾಕು ನಿಯಂತ್ರಣ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ ಕುರಿತ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಸಿಗರೇಟು, ಬೀಡಿ ಸೇವನೆಯಿಂದ 7 ನಿಮಿಷ ಆಯುಸ್ಸು ಮೊಟಕುಗೊಳ್ಳುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಇವುಗಳ ಸೇವನೆಯಿಂದ ಕ್ಯಾನ್ಸರ್, ಹೃದಯಾಘಾತ, ಪಾಶ್ರ್ವ ವಾಯು ಹಾಗೂ ಶ್ವಾಸಕೋಶ ಸಮಸ್ಯೆ ಗಳು ಉಲ್ಭಣಗೊಳ್ಳಲಿವೆ ಎಂದು ತಿಳಿಸಿದರು. ತಂಬಾಕು ಉತ್ಪನ್ನಗಳ ಸೇವನೆ ಯಿಂದಾಗುವ ಹಾನಿಯ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವುದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ತಂಬಾಕು ಬೀಡಿ, ಸಿಗರೇಟ್‍ಗಳ ಮೇಲೆ ಅಪಾಯಕಾರಿ ಎಂದು ಎಚ್ಚರಿಕೆಯ ಸಂದೇಶಗಳನ್ನು ಪ್ರಕಟಿಸುವ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ಆರೋಗ್ಯ ವಿಭಾಗದ ಡಾ.ರಂಗನಾಥ್, ತಂಬಾಕು ಬಳಕೆಯಿಂದಾಗಿ ದೇಶ ಹಾಗೂ ಕುಟುಂಬಗಳ ಮೇಲಾಗುವ ಆರ್ಥಿಕ ನಷ್ಟ ಹಾಗೂ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಮಾತನಾಡಿದರು.ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ವಿಶಾಲ್‍ರಾವ್ ಮಾತನಾಡಿ, ಈ ದುಶ್ಚಟಗಳಿಂದಾಗುವ ಹಾನಿಯನ್ನು ತಡೆಯಲು ಜಾರಿಯಲ್ಲಿರುವ ಕಾನೂನುಗಳನ್ನು ಜನಸಮುದಾಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು. ಜಿಲ್ಲಾ ಕ್ಷಯಾರೋಗ ನಿಯಂತ್ರಣಾಧಿಕಾರಿ ಡಾ.ಶ್ರೀನಿವಾಸ್ ಹಾಗೂ ಜಿಲ್ಲಾ ಸಲಹೆಗಾರ ಡಾ.ಚಂದ್ರಕಿರಣ್ ಸೇರಿದಂತೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin