ತಜ್ಞರ ಸಮಿತಿ ರಚನೆಗೆ ಪ್ರತ್ಯೇಕ ಲಿಂಗಾಯತ ಹೋರಾಟ ವೇದಿಕೆ ಸ್ವಾಗತ

ಈ ಸುದ್ದಿಯನ್ನು ಶೇರ್ ಮಾಡಿ

Lingayat--02

ಬೆಂಗಳೂರು, ಡಿ.25- ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚನೆ ಮಾಡಿರುವುದಕ್ಕೆ ಪ್ರತ್ಯೇಕ ಲಿಂಗಾಯತ ಹೋರಾಟ ವೇದಿಕೆ ಸ್ವಾಗತಿಸಿದೆ. ಹೋರಾಟ ವೇದಿಕೆ ಮುಖಂಡರಾದ ಬಸವರಾಜ ಹೊರಟ್ಟಿ, ಎಸ್.ಎಂ.ಜಾಮ್‍ದಾರ್, ಜಯಣ್ಣ, ಬಸವರಾಜ ಪಾಟೀಲ್ ಸೇರಿದಂತೆ ಹಲವು ಮುಖಂಡರು ಇಂದು ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಕ್ರಮವನ್ನು ಸ್ವಾಗತಿಸಿದರು.  ಪ್ರತ್ಯೇಕ ಧರ್ಮ ವಿರೋಧಿಸಿ ನಿನ್ನೆ ಗದಗದಲ್ಲಿ ನಡೆದಿರುವುದು ವೀರಶೈವ ಮಹಾಸಭಾ ಸಮಾವೇಶವಲ್ಲ. ಪಂಚಪೀಠಾಧ್ಯಕ್ಷರ ಸಮಾವೇಶವಾಗಿದೆ. ಅವರೆಲ್ಲ ಬಿಜೆಪಿ ಪರವಾದ ಮಠಾಧೀಶರಾಗಿ ಸಮಾವೇಶವನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.

ವೀರಶೈವ-ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸುವಂತೆ ಈಗಾಗಲೇ ಕೇಂದ್ರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಈ ಪ್ರಸ್ತಾವ ತಿರಸ್ಕರಿಸಲ್ಪಟ್ಟಿದೆ. ಅದಕ್ಕಾಗಿ ಲಿಂಗಾಯತ ಧರ್ಮವನ್ನು ಪ್ರತ್ಯೇಕ ಮಾಡಬೇಕೆಂದು ಕೋರಿ ಮನವಿ ಸಲ್ಲಿಸಲಾಗಿದೆ. ಬಿ.ಎಸ್.ಯಡಿಯೂರಪ್ಪನವರೇ ಎಲ್ಲರನ್ನೂ ಪ್ರಧಾನಿ ಮೋದಿ ಬಳಿ ಕರೆದೊಯ್ದು ವೀರಶೈವ-ಲಿಂಗಾಯತ ಎಂದು ಪ್ರತ್ಯೇಕ ಧರ್ಮ ಮಾನ್ಯತೆ ಕೊಡಿಸಲಿ. ನಮ್ಮದೇನೂ ತಕರಾರಿಲ್ಲ ಎಂದು ಅವರು ಹೇಳಿದರು.

ದೇವರಾಜ ಅರಸು ಅವರು ಕೈ-ಕಾಲು ಕಡಿದರೆ, ಸಿದ್ದರಾಮಯ್ಯ ರುಂಡವನ್ನೇ ಕತ್ತರಿಸಿದ್ದಾರೆ ಎಂದು ಸ್ವಾಮೀಜಿಯೊಬ್ಬರು ಹೇಳಿದ್ದಾರೆ. ಅಂತಹ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿಲ್ಲ ಎಂದು ಅವರು ಹೇಳಿದರು. ಹಾನಗಲ್‍ಗೆ ಪಂಚ ಪೀಠಾಧ್ಯಕ್ಷರು ಆಗಮಿಸಿದಾಗ ಎತ್ತರದಲ್ಲಿ ಕುರ್ಚಿ ಹಾಕಿಲ್ಲ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಮತ್ತೊಬ್ಬರು ಸ್ವಾಮೀಜಿ ಲಿಂಗಾಯತ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವ ಮೂವರು ಸಚಿವರಿಗೆ ತ್ರಿ ಈಡಿಯಟ್ಸ್ ಎಂದಿದ್ದಾರೆ.

ತೋಂಟದಾರ್ಯ ಶ್ರೀಗಳು ಬಸವ ತತ್ವ ಆಧಾರದ ಮೇಲೆ ನಡೆಯುತ್ತಿದ್ದಾರೆ ಎಂದು ಹೇಳಿದರು. ಸ್ವಾಮೀಜಿಗಳು ಸುಮ್ಮನಿದ್ದರೆ ಸಾಕು, ಎಲ್ಲ ವ್ಯವಸ್ಥೆಯೂ ಸರಿಯಾಗಿ ನಡೆಯುತ್ತದೆ ಎಂದು ಅವರು ತಿಳಿಸಿದರು. ಲಿಂಗಾಯತರ ಪ್ರತ್ಯೇಕ ಧರ್ಮದ ಬೇಡಿಕೆ ವಿಷಯದಲ್ಲಿ ತಿಪ್ಪಣ್ಣನವರ ವರ್ತನೆ ಸರಿಯಿಲ್ಲ. ಪ್ರತ್ಯೇಕ ಧರ್ಮಕ್ಕಾಗಿ ಏಳು ತಜ್ಞರ ಸಮಿತಿಯನ್ನು ರಚಿಸಿದೆ. ಸಮಿತಿ ನೀಡುವ ವರದಿಯನ್ನು ಸಂಪುಟದಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ವರದಿಯೇ ವೇದವಾಕ್ಯವಾಗುವುದಿಲ್ಲ ಎಂದು ಹೇಳಿದರು.

ವೀರಶೈವರಲ್ಲಿ ಕೆಲವರು ಸುಪ್ರೀಂಕೋರ್ಟ್‍ನಲ್ಲಿ ಬೇಡ ಜಂಗಮ ಎಂದು ಮೀಸಲಾತಿ ಪಡೆದು ಸೌಲಭ್ಯ ಪಡೆಯುತ್ತಿದ್ದಾರೆ. ಈಗ ಬೇರೆಯವರ ಸೌಲಭ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ತಿಳಿಸಿದರು. ವೀರಶೈವ ಮಹಾಸಭಾ, ಮಾತೆ ಮಹಾದೇವಿ, ಪಂಚಪೀಠ, ವಿರಕ್ತಮಠ ಸೇರಿದಂತೆ ಐದು ಜನರಿಂದ ಅರ್ಜಿ ಬಂದ ಹಿನ್ನೆಲೆಯಲ್ಲಿ ಅದನ್ನು ಸಮಿತಿಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Facebook Comments

Sri Raghav

Admin