ತನ್ನೆರಡು ಕರುಳ ಕುಡಿಗಳನ್ನು ಕೊಂದು ನೇಣಿಗೆ ಶರಣಾದ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

Suicide-Mother--01

ಬೆಂಗಳೂರು, ಸೆ.1-ತನ್ನೆರಡು ಕರುಳ ಕುಡಿಗಳನ್ನು ಉಸಿರುಗಟ್ಟಿಸಿ ಸಾಯಿಸಿದ ತಾಯಿ, ನಂತರ ನೇಣುಬಿಗಿದುಕೊಂಡು ಆಕೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮರ್ಫಿಟೌನ್‍ನ ಸತ್ಯನಾರಾಯಣ ಕಲ್ಯಾಣಮಂಟಪ ಸಮೀಪದ ನಿವಾಸಿ ರೇಣುಕಾ(34), ಮಕ್ಕಳಾದ ನಿಶ್ಚಿತ(6) ಮತ್ತು ಪಾವನಿ (10 ತಿಂಗಳು) ಮೃತಪಟ್ಟವರು.

ಸಾಫ್ಟ್‍ವೇರ್ ಎಂಜಿನಿಯರ್ ಆಗಿರುವ ಹೇಮಂತ್ ಎಂಬುವರ ಪತ್ನಿಯಾದ ರೇಣುಕಾ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ದಂಪತಿ ನಿಶ್ಚಿತ ಮತ್ತು ಪಾವನಿ ಎಂಬ ಮುದ್ದಾದ ಮಕ್ಕಳೊಂದಿಗೆ ಅನ್ಯೋನ್ಯವಾಗಿಯೇ ಇದ್ದರು ಎನ್ನಲಾಗಿದೆ.  ನಿನ್ನೆ ಎಂದಿನಂತೆ ದಂಪತಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ರಾತ್ರಿ ಮಕ್ಕಳಿಗೆ ಹಾಗೂ ಪತಿಗೆ ಊಟ ನೀಡಿ ರೇಣುಕಾ ಸಹ ಊಟ ಮಾಡಿದ್ದಾರೆ. ಆದರೆ ಬೆಳಗಾಗುವುದರೊಳಗೆ ರೇಣುಕಾ ತನ್ನಿಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಸಾಯಿಸಿ, ನಂತರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬೆಳಗಿನ ಜಾವ ಈ ವಿಷಯ ಹರಡುತ್ತಿದ್ದಂತೆ ಸುತ್ತಮುತ್ತಲಿನ ನಾಗರಿಕರು ಇತರರು ಮನೆ ಬಳಿ ಜಮಾಯಿಸಿದ್ದರು.

ದಂಪತಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ. ಬಹಳ ಅನ್ಯೋನ್ಯವಾಗಿದ್ದರು. ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ಬರುತ್ತಿದ್ದರು. ಆದರೆ ರೇಣುಕಾ ಅವರು ಯಾಕೆ ಹೀಗೆ ಮಾಡಿಕೊಂಡರು ಎಂಬುದೇ ತಿಳಿಯುತ್ತಿಲ್ಲ ಎಂದು ನೆರೆಹೊರೆಯ ನಿವಾಸಿಗಳು ಹೇಳಿಕೊಂಡು ಕಣ್ಣೀರಿಡುತ್ತಿದ್ದುದು ಕಂಡುಬಂತು.
ಮುದ್ದಾದ ಮಕ್ಕಳು, ತಾಯಿ ಸಾವನ್ನಪ್ಪಿರುವುದನ್ನು ನೋಡಲು ಬಂದ ನಾಗರಿಕರ ಕಣ್ಣಾಲಿಗಳು ಅವರಿಗರಿವಿಲ್ಲದಂತೆ ಒದ್ದೆಯಾಗಿದ್ದವು. ಘಟನಾ ಸುದ್ದಿ ತಿಳಿದ ಹಲಸೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ನೆರೆಹೊರೆಯವರಿಂದ ಹಾಗೂ ಕುಟುಂಬಸ್ಥರಿಂದ ಘಟನೆ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ.

Facebook Comments

Sri Raghav

Admin