ತಬ್ಬಲಿ ಮೇಘನಾಗೆ ಬೇಕಿದೆ ವಸತಿಯಾಸರೆ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಆ.20- ತಂದೆ-ತಾಯಿ ಕಳೆದುಕೊಂಡು ಅನಾಥಳಾಗಿರುವ ಮೇಘನಾ ಕೂಲಿನಾಲಿ ಮಾಡಿ ತಮ್ಮನನ್ನು ಸಾಕಿ ಸಲಹುತ್ತಿದ್ದರೂ ನೆತ್ತಿಯ ಮೇಲೊಂದು ಸೂರಿಲ್ಲದೆ ಪರಿತಪಿಸುತ್ತಿದ್ದಾರೆ.

ಜಗಳೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗ್ರಾಮವೊಂದರ ಮಳೆ ಸೋರುವ ಹಾಳು ಮನೆಯಲ್ಲಿ ವಾಸಿಸುತ್ತಿರುವ ಮೇಘನಾ ಭವಿಷ್ಯದಲ್ಲಿ ಸಾಧನೆ ಮಾಡುವ ಹಂಬಲ ಹೊಂದಿದ್ದಾಳೆ.

ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಮೇಘನಾ ಭವಿಷ್ಯದಲ್ಲಿ ಬ್ಯಾಂಕ್ ಅಕಾರಿಯಾಗುವ ಕನಸು ಕಂಡಿದ್ದಾಳೆ.

ತನ್ನ ಓದಿನ ಜತೆಗೆ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿರುವುದಲ್ಲದೆ ಎಸ್‍ಎಸ್‍ಎಲ್‍ಸಿ ಓದುತ್ತಿರುವ ತನ್ನ ಸಹೋದರನಿಗೂ ನೆಲೆ ಕಲ್ಪಿಸಿಕೊಡುವ ಹೊಣೆ ಮೇಘನಾ ಮೇಲಿದೆ.

ತಂದೆ-ತಾಯಿ ಇಲ್ಲದೆ ತಬ್ಬಲಿಯಾಗಿರುವ ಈ ಮಕ್ಕಳಿಗೆ ಅಗತ್ಯ ವಸತಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಎಐಎಸ್‍ಎಫ್ ರಾಜ್ಯ ಮಹಿಳಾ ಘಟಕ ಒತ್ತಾಯಿಸಿದೆ.

ಜನರ ಒಡನಾಡಿ ಜಿಲ್ಲಾಕಾರಿಯಾಗಿರುವ ರಮೇಶ್ ಬಿಳಗಿ ಅವರು ಕೂಡಲೇ ಈ ತಬ್ಬಲಿಗಳಿಗೆ ವಸತಿ ವ್ಯವಸ್ಥೆ ಮಾಡಿಕೊಡುವಂತೆ ಜಗಳೂರಿನ ಪಟ್ಟಣ ಪಂಚಾಯತ್ ಅಕಾರಿಗೆ ಆದೇಶ ನೀಡಬೇಕು ಎಂದು ಘಟಕದ ಉಪಾಧ್ಯಕ್ಷೆ ವೀಣಾನಾಯಕ್, ಜಿಲ್ಲಾ ಕಾರ್ಯದರ್ಶಿ ತಿಪ್ಪೇಸ್ವಾಮಿ ಹಾಗೂ ಸಹಕಾರ್ಯದರ್ಶಿ ಜ್ಯೋತಿ ಈ ಸಂಜೆ ಪತ್ರಿಕೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗಷ್ಟೆ ಮೇಘನಾ ತಂದೆ-ತಾಯಿ ಕ್ಷಯ ರೋಗದಿಂದ ಮೃತಪಟ್ಟಿದ್ದು, ಯಾರ ಆಸರೆಯೂ ಇಲ್ಲದೆ ಸ್ವಾಭಿಮಾನದ ಜೀವನ ನಡೆಸಲು ಮುಂದಾಗಿರುವ ಮೇಘನಾಳಿಗೆ ವಸತಿ ಆಸರೆ ನೀಡಬೇಕಿರುವುದು ಜಿಲ್ಲಾಡಳಿತದ ಕರ್ತವ್ಯ.

ಈ ಅನಾಥೆ ವಿದ್ಯಾರ್ಥಿನಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಜಿಲ್ಲಾಕಾರಿಗಳು ಮೀನಾಮೇಷ ಎಣಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ಪದಾಕಾರಿಗಳು ಎಚ್ಚರಿಸಿದ್ದಾರೆ.

Facebook Comments

Sri Raghav

Admin