ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಗೆ (Live Updates)

ಈ ಸುದ್ದಿಯನ್ನು ಶೇರ್ ಮಾಡಿ

ಅಮ್ಮನಿಗೆ ಹೃದಯಾಘಾತ (Live)

Jayalalitha-01

> ಅಮ್ಮನ ಆರೋಗ್ಯ ಸ್ಥಿತಿ ಗಂಭೀರ : ಸಂಜೆ 5 ಗಂಟೆಗೆ ಸ್ಪಷ್ಟ ಚಿತ್ರಣ, ಎಲ್ಲೆಲ್ಲೂ ಬಿಗಿ ಭದ್ರತೆ

ಚೆನ್ನೈ, ಡಿ.5- ತೀವ್ರ ಹೃದಯಾಘಾತದಿಂದ ಗಂಭೀರ ಸ್ಥಿತಿಯಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಪರಿಸ್ಥಿತಿಯ ವಿವರಗಳನ್ನು ಅಪೋಲೋ ಆಸ್ಪತ್ರೆ ವೈದ್ಯರು ಮಧ್ಯಾಹ್ನ ನೀಡಿದ್ದು, ಕೃತಕ ಜೀವರಕ್ಷಕ ಸಾಧನಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ.  ಪರ್ಯಾಯ ಹೃದಯ, ಶ್ವಾಸಕೋಶ ಯಂತ್ರಗಳನ್ನು ಅಳವಡಿಸಲಾಗಿದೆ. ಬಾಹ್ಯ ಹೃದಯ ಯಂತ್ರ, ಬಾಹ್ಯ ಕಿಡ್ನಿ ಯಂತ್ರ ಅಳವಡಿಸಲಾಗಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ. ಸಂಜೆ ಇನ್ನೂ ಹೆಚ್ಚಿನ ವಿವರಗಳನ್ನು ನೀಡುವುದಾಗಿ ಅಪೋಲೋ ವೈದ್ಯರು ತಿಳಿಸಿದ್ದಾರೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಾಗುವ ಇಸಿಎಂಒ ಎನ್ನುವ ಯಂತ್ರದ ಮೂಲಕ ತಜ್ಞ ವೈದ್ಯರಿಂದ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Press-Note-'

ಸಾರ್ವಜನಿಕರಲ್ಲಿ ಆತಂಕ:

ಆರೋಗ್ಯ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಇಲ್ಲಿನ ಜನ ಆಸ್ಪತ್ರೆಯತ್ತ ದಾವಿಸುತ್ತಿದ್ದಾರೆ. ನಿನ್ನೆ ರಾತ್ರಿ ಸುರಿಯುವ ಮಳೆಯಲ್ಲಿಯೇ ಜನ ತಮ್ಮ ನೆಚ್ಚಿನ ನಾಯಕಿಯ ಆರೋಗ್ಯ ಸುಧಾರಣೆಗಾಗಿ ಆಸ್ಪತ್ರೆ ಮುಂದೆಯೇ ಭಗವಂತನನ್ನು ಪ್ರಾರ್ಥಿಸುತ್ತಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆ ಸುತ್ತ ಹೆಚ್ಚಿನ ಪೋಲೀಸರನ್ನು ನಿಯೋಜಿಸಲಾಗಿದೆ. ಪ್ಯಾರಾ ಮಿಲಿಟರಿ ಪಡೆ, ಸಿಐಎಸ್‍ಎಫ್ ಪಡೆಗಳನ್ನು ನಿಯೋಜಿಸಲಾಗಿದೆ. ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಮಿಳುನಾಡಿನಾದ್ಯಂತ ಅಘೋಷಿತ ಬಂದ್ ಏರ್ಪಟ್ಟಿದೆ. ರಾಜಕೀಯ ಕಡು ವಿರೋಧಿಗಳಾದ ಡಿಎಂಕೆ ನಾಯಕರ ನಿವಾಸ ಮತ್ತು ಕಚೇರಿಗಳಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ.

ಆಸ್ಪತ್ರೆಯಲ್ಲಿ ತುರ್ತು ಸಚಿವ ಸಂಪುಟ ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಚರ್ಚಿಸಲಾಗಿದೆ. ರಾಜ್ಯಪಾಲರು ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಪಡೆದು ಕೇಂದ್ರಕ್ಕೆ ರವಾನಿಸಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ಕೂಡ ತಮಿಳುನಾಡು ಸರ್ಕಾರ ಹಾಗೂ ರಾಜ್ಯಪಾಲರೊಂದಿಗೆ ಸತತ ಸಂಪರ್ಕದಲ್ಲಿದ್ದು, ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರಮೋದಿ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‍ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಜಯಲಲಿತಾ ಅವರ ಆರೋಗ್ಯ ಸುಧಾರಣೆಗೆ ಹಾರೈಸಿದ್ದಾರೆ.

ತಮಿಳುನಾಡು ಮತ್ತು ಕರ್ನಾಟಕದಲ್ಲಿ ಪರಿಸ್ಥಿತಿ ಕೈ ಮೀರದಂತೆ ತಡೆಯಲು ಎಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಎರಡೂ ರಾಜ್ಯಗಳ ಸಾರಿಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಗಡಿಗಳಲ್ಲಿ ಹೆಚ್ಚಿನ ಪೋಲೀಸರನ್ನು ನಿಯೋಜಿಸಲಾಗಿದೆ. ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಪೋಲೀಸ್ ಮಹಾನಿರ್ದೇಶಕ ಟಿ.ಕೆ.ರಾಜೇಂದ್ರನ್ ತಿಳಿಸಿದ್ದಾರೆ. ಅವರು ಅಪೋಲೋ ಆಸ್ಪತ್ರೆ ಬಳಿ ವಾಸ್ತವ್ಯವಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ಬೆಂಗಳೂರು ವರದಿ: ರಾಜಧಾನಿ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ತಮಿಳು ಭಾಷಿಗರಿರುವ ಕಡೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಜಯಲಲಿತಾ  ಅವರ ಆರೋಗ್ಯದ ಬಗ್ಗೆ ಯಾವುದೇ ವದಂತಿ ಹಬ್ಬಿಸುವುದು ಬೇಡ ಎಂದು ಅವರ ಆಪ್ತರು, ಬಂಧುಗಳು ಮನವಿ ಮಾಡಿದ್ದಾರೆ.

> ತಮಿಳುನಾಡು ಗಡಿ ಭಾಗದಲ್ಲಿ ಕಟ್ಟೆಚ್ಚರ: ಕುಲದೀಪ್ ಕುಮಾರ್

ಚಾಮರಾಜನಗರ, ಡಿ.5- ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರೀ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಜೈನ್ ತಿಳಿಸಿದ್ದಾರೆ. ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಗಡಿ ಭಾಗದ ಗ್ರಾಮಗಳಾದ ಮೂಳೆಹೊಳೆ, ಬಿಸಲವಾಡಿ, ನವಕಟ್ಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಚೆಕ್‍ ಪೋಸ್ಟ್ ನಿರ್ಮಾಣ ಮಾಡಿದ್ದು, ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ವಾಹನಗಳನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ ಎಂದರು. ಚಾಮರಾಜನಗರ-ತಮಿಳುನಾಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈಗಾಗಲೇ ಭದ್ರತೆಗಾಗಿ ಪೊಲೀಸರು ನಿಯೋಜನೆಗೊಂಡಿದ್ದು, ಗಸ್ತು ತಿರುಗುತ್ತಿದ್ದಾರೆ.ತಮಿಳುನಾಡಿಗೆ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ನಿರ್ಬಂಧಿಸಿದ್ದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.

> ಡಿ.9ರವರೆಗೆ ತಮಿಳುನಾಡು ಶಾಲೆ-ಕಾಲೇಜುಗಳಿಗೆ ರಜೆ

ಚೆನ್ನೈ, ಡಿ.5-ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಇಂದಿನಿಂದ 9ರವರೆಗೆ ತಮಿಳುನಾಡು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಇಂದು ನಡೆಯಬೇಕಿದ್ದ ವಿವಿಧ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪೆಟ್ರೋಲ ಬಂಕ್‍ಗಳನ್ನು ಸಹ ಬಂದ್ ಮಾಡಲು ಸೂಚಿಸಲಾಗಿದೆ. ಎಲ್ಲ ಸರಕಾರಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಎಲ್ಲ ಪಕ್ಷಗಳ ಮುಖಂಡರನ್ನು ಚೆನ್ನೈಗೆ ಬರುವಂತೆ ಸೂಚಿಸಲಾಗಿದೆ. ಒ.ಪನ್ನೀರ್ ಸೆಲ್ವಂ ಅಧ್ಯಕ್ಷತೆಯಲ್ಲಿ ತುರ್ತು ಸಂಪುಟ ಸಭೆ ನಡೆದಿದ್ದು, ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆದ ಮಾಹಿತಿ ಸಿಕ್ಕಿದೆ. ಇದೇ ವೇಳೆ ಅಪೋಲೋ ಆಸ್ಪತ್ರೆ ಹೊರಭಾಗದಲ್ಲಿ ಜನರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆ. ತಮಿಳುನಾಡಿನ ಒಳಗೆ ಕರ್ನಾಟಕದ ವಾಹನಗಳನ್ನು ಬಿಡದೆ ವಾಪಸ್  ಕಳಿಸಲಾಗುತ್ತದೆ. ಯಾವುದೇ ವೇಳೆ ಅಪೋಲೋ ಆಸ್ಪತ್ರೆಯಿಂದ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಗಳಿದ್ದು ಜಯಲಲಿತಾ ಅವರ ಆರೋಗ್ಯದ ಮಾಹಿತಿ ನೀಡಬಹುದು ಎಂಬ ನಿರೀಕ್ಷೆಯಿದೆ. ಅಪೋಲೋ ಆಸ್ಪತ್ರೆ ಟ್ವೀಟರ್‍ನಲ್ಲಿ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತೇವೆ. ಗುಣಮುಖರಾಗುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಲಾಗಿದೆ. ದೇಶದಾದ್ಯಂತ ರಾಜಕೀಯ ಮುಖಂಡರು ಅಮ್ಮ ಆರೋಗ್ಯ ಚೇತರಿಕೆಗೆ ಹಾರೈಸುತ್ತಿದ್ದಾರೆ.

> ಗಡಿ ಭಾಗಗಳಲ್ಲಿ ಕಟ್ಟೆಚ್ಚರ

ರಾಮನಗರ, ಡಿ.5- ಕಳೆದ ಹಲವು ದಿನಗಳಿಂದ ಅಪಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ನಿನ್ನೆ ಹೃದಯಾಘಾತವಾಗಿದ್ದು, ವೈದ್ಯರು ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ. ತಮಿಳುನಾಡಿನ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ತೀವ್ರ ಆತಂಕಕ್ಕೊಳಗಾಗಿದ್ದು, ರಾಜ್ಯದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಈ ಭಾಗಗಳಲ್ಲಿ ಹೆಚ್ಚುವರಿ ಚೆಕ್‍ ಪೋಸ್ಟ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಮನಗರ ಜಿಲ್ಲೆ, ಕನಕಪುರ, ಚಾಮರಾಜನಗರ, ಹೊಸೂರು ಮುಂತಾದ ಗಡಿ ಭಾಗಗಳಲ್ಲಿ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ರಾಮನಗರದ ಕೋಡಿಹಳ್ಳಿ, ಕೊಳಗೊಂಡನಹಳ್ಳಿ ಮುಂತಾದ ಗ್ರಾಮಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ಹಾಕಲಾಗಿದ್ದು, ಮೈಸೂರು-ಬೆಂಗಳೂರು ರಸ್ತೆಯಲ್ಲಿ ಪೊಲೀಸರ ಪಹರೆ ಹಾಕಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.


ತಜ್ಞ ವೈದ್ಯರ ತೀವ್ರ ನಿಗಾದಲ್ಲಿ ಜಯಾ : ಚೇತರಿಕೆಗಾಗಿ ಪ್ರಾರ್ಥನೆ

ಚೆನ್ನೈ, ಡಿ.5-ತೀವ್ರ ಹೃದಯಾಘಾತದಿಂದ ಅತ್ಯಂತ ಗಂಭೀರ ಸ್ಥಿತಿಗೆ ತಲುಪಿರುವ ತಮಿಳುನಾಡು ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಪರಮೋಚ್ಚ ನಾಯಕಿ ಜೆ.ಜಯಲಲಿತಾರಿಗೆ ತಜ್ಞ ವೈದ್ಯರ ತಂಡ ನಿರಂತರ ತುರ್ತು ಚಿಕಿತ್ಸೆಯಲ್ಲಿ ನಿರತರಾಗಿದ್ದಾರೆ. ನಿಗಾ ವಹಿಸಿದ್ದಾರೆ.   ಇದೇ ವೇಳೆ ಜಯಾ ಚೇತರಿಕೆಗಾಗಿ ತಮಿಳುನಾಡಿನಾದ್ಯಂತ ವಿಶೇಷ ಪೂಜೆ-ಪ್ರಾರ್ಥನೆಗಳು ಮುಂದುವರಿದಿವೆ. ತಮ್ಮ ನೆಚ್ಚಿನ ಅಮ್ಮನ ಆರೋಗ್ಯ ತೀವ್ರ ಬಿಗಡಾಯಿಸಿರುವುದರಿಂದ ಜನ ಕಂಗಲಾಗಿದ್ದಾರೆ. ಆತಂಕದಿಂದ ಅಪೋಲೋ ಆಸ್ಪತ್ರೆ ಬಳಿಗೆ ಧಾವಿಸುತ್ತಿರುವ ಸಾವಿರಾಗು ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ತಜ್ಞ ವೈದ್ಯರು ಜಯಲಲಿತಾರ ಆರೋಗ್ಯ ಸ್ಥಿತಿ ಬಗ್ಗೆ ತೀವ್ರ ನಿಗಾ ವಹಿಸಿದ್ದಾರೆ. ಅವರು ಚೇತರಿಸಿಕೊಳ್ಳುವಂತೆ ಮಾಡಲು ತಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ ಎಂದು ಇಂದು ಬೆಳಿಗ್ಗೆ ಆಸ್ಪತ್ರೆಯ ಚೀಫ್ ಆಪರೇಟಿಂಗ್ ಆಫೀಸರ್ ಡಾ.ಸುಬ್ಬಯ್ಯ ವಿಶ್ವನಾಥನ್ ತಿಳಿಸಿದ್ದಾರೆ.

68 ವರ್ಷದ ಅವರಿಗೆ ಹೃದಯ ನೆರವು ಸಾಧನವಾದ ಎಕ್ಸ್‍ಟ್ರಾಕಾಪೆರ್ರಿಯಲ್ ಮೆಂಬ್ರೆನ್ ಆಕ್ಸಿಜೇಷನ್ (ಇಸಿಎಂಓ) ಆಧಾರ ನೀಡಲಾಗಿದೆ. ಖ್ಯಾತ ಹೃದ್ರೋಗ ಮತ್ತು ಶ್ವಾಸಕೋಶ ತಜ್ಞರು, ವಿಷಮ ಸ್ಥಿತಿ ನಿಭಾಯಿಸುವ ಪರಿಣಿತರು ಸೇರಿದಂತೆ ನುರಿತ ವೈದ್ಯರ ತಂಡ ಅವರ ದೇಹಸ್ಥಿತಿ ಮೇಲೆ ನಿಗಾ ವಹಿಸಿದೆ. ಈ ಮಧ್ಯೆ, ಜಯಲಲಿತಾರಿಗೆ ಹೃದಯಾಘಾತವಾದ ಸುದ್ದಿ ತಿಳಿದ ಕೂಡಲೇ ನಿನ್ನೆಯಿಂದಲೇ ಅಪೋಲೋ ಅಸ್ಪತ್ರೆ ಮುಂದೆ ಜಮಾಯಿಸಿರುವ ಅಸಂಖ್ಯಾತ ಮಹಿಳೆಯರು ಹಾಗೂ ಅಣ್ಣಾ ಡಿಎಂಕೆ ಕಾರ್ಯಕರ್ತರು ಮತ್ತು ನಾಯಕರು ಮಧ್ಯರಾತ್ರಿ ಮಳೆ ಮತ್ತು ಶೀತಗಾಳಿಯನ್ನೂ ಲೆಕ್ಕಿಸದೇ ಅಸ್ಪತ್ರೆ ಮುಂದೆ ಸೇರಿದ್ದರು. ಅಮ್ಮಾ ಶೀಘ್ರ ಗುಣಮುಖರಾಗಲೆಂದು ಅವರು ಪ್ರಾರ್ಥಿಸುತ್ತಿದ್ದಾರೆ. ಆಸ್ಪತ್ರೆ ಮುಂದೆ ಭಾರೀ ಜನರು ಸೇರಿರುವುದರಿಂದ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಜಯಾ ಚೇತರಿಕೆಗಾಗಿ ರಾಜ್ಯದಾದ್ಯಂತ ವಿಶೇಷ ಪೂಜೆ-ಪುನಸ್ಕಾರ, ಹೋಮ-ಹವನಗಳು ನಡೆಯುತ್ತಿವೆ. ಅನೇಕ ಜಿಲ್ಲೆಗಳಲ್ಲಿ ಆತಂಕದ ವಾತಾವರಣೆ ನಿರ್ಮಾಣವಾಗಿದೆ.
ಮುಂದಿನ ಆದೇಶಗಳ ತನಕ ಎಲ್ಲ ಪೊಲೀಸರು ಕರ್ತವ್ಯದಲ್ಲಿರುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಟಿ.ಕೆ.ರಾಜೇಂದ್ರನ್ ಈಗಾಗಲೇ ಸೂಚನೆ ನೀಡಿದ್ದಾರೆ. ಸಮವಸ್ತ್ರಧಾರಿಗಳಾಗಿ ರಾಜ್ಯವ್ಯಾಪಿ ಬಂದೋಬಸ್ತ್ ವ್ಯವಸ್ಥೆ ಮಾಡಬೇಕೆಂದು ಅವರು ಕಟ್ಟಪ್ಪಣೆ ಹೊರಡಿಸಿದ್ದಾರೆ. ಭದ್ರತೆಗಾಗಿ ಆರೆಸೇನಾ ಪಡೆ, ಪೊಲೀಸರನ್ನು ಸಾವಿರ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.
ಕೇಂದ್ರ ಸಚಿವ ಪಿ.ರಾಧಾಕೃಷ್ಣನ್ ಇಂದು ಬೆಳಿಗ್ಗೆ ಚೆನ್ನೆಗೆ ಆಗಮಿಸಿ ಆಸ್ಪತ್ರೆಗೆ ಭೇಟಿ ನೀಡಿದರು. ಜಯಲಲಿತಾ ಶೀಘ್ರ ಚೇತರಿಸಿಕೊಳ್ಳಲೆಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಚಿವರು, ಬಿಜೆಪಿ ಮುಖಂಡರು ಪ್ರಾರ್ಥಿಸಿದ್ದಾರೆ ಎಂದು ಅವರು ವಿಮಾನನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮುಖ್ಯಮಂತ್ರಿಯವರು ಚೇತರಿಸಿಕೊಂದು ಕರ್ತವ್ಯಕ್ಕೆ ಹಿಂದಿರುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಚೇತರಿಸಿಕೊಂಡು ಇನ್ನೇನು ಮನೆಗೆ ಹಿಂದಿರುಗಬೇಕಿದ್ದ ಜಯಲಲಿತಾರಿಗೆ ಹಠಾತ್ ಹೃದಯಾಘಾತವಾಗಿ ಶೋಚನೀಯ ಸ್ಥಿತಿ ತಲುಪಿರುವ ಬೆಳವಣಿಗೆ ನಂತರ ಮುಂಬೈನಲ್ಲಿದ್ದ ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ತಕ್ಷಣ ನಿನ್ನೆ ತಡರಾತ್ರಿಯೇ ಚೆನ್ನೈಗೆ ಆಗಮಿಸಿ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದರು. ವೈದ್ಯರ ತಂಡದಿಂದ ಜಯಾ ಆರೋಗ್ಯ ಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆದರು.  ನಿನ್ನೆ ರಾತ್ರಿಯಿಡಿ ಆಸ್ಪತ್ರೆ ಮುಂದೆ ವಾಸ್ತವ್ಯ ಹೂಡಿದ್ದ ಎಐಎಡಿಎಂಕೆ ಸಚಿವರು ಇಂದು ಅಲ್ಲಿಂದ ತೆರಳಿದ್ದು, ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸಿದರು.  ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಡಿಎಂಕೆ ನಾಯಕ ಎಂ.ಕರುಣಾನಿಧಿ, ಅವರ ಪುತ್ರ ಮತ್ತು ವಿರೋಧಪಕ್ಷದ ನಾಯಕ ಕೆ.ಸ್ಟಾಲಿನ್, ಕೇಂದ್ರ ಸಚಿವರು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಚಿತ್ರ ನಟ-ನಟಿಯರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಜಯಲಲಿತಾ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಶೀಘ್ರ ಗುಣವಾಗಲೆಂದು ಹಾರೈಸಿದ್ದಾರೆ.

ತೀವ್ರ ಜ್ವರ ಮತ್ತು ನಿರ್ಜಲೀಕರಣದಿಂದ ಸೆಪ್ಟೆಂಬರ್ 22ರಂದು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಪ್ರ ಜ್ಞಾಶೂನ್ಯ ಸ್ಥಿತಿಯಲ್ಲಿದ್ದ ಜಯಲಲಿತಾರಿಗೆ ಸೋಂಕು ಮತ್ತು ಉಸಿರಾಟದ ತೊಂದರೆಗೆ ಚಿಕಿತ್ಸೆ ನೀಡಲಾಗಿತ್ತು. ಕಳೆದ ಒಂದು ವಾರದ ಹಿಂದಷ್ಟೇ ಚೇತರಿಸಿಕೊಂಡಿದ್ದರು. ಅವರು ಯಾವುದೇ ಸಂದರ್ಭದಲ್ಲಿ ಮನೆಗೆ ಹಿಂದುಗುವರು ಎಂದು ಆಸ್ಪತ್ರೆ ಮುಖ್ಯಸ್ಥರು ಮತ್ತು ಪಕ್ಷದ ನಾಯಕರು ತಿಳಿಸಿದ್ದರು. ಆದರೆ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಅವರು ಗಂಭೀರ ಸ್ಥಿತಿ ತಲುಪಿರುವುದು ತಮಿಳುನಾಡಿನ ಜನತೆಗೆ ಬರಸಿಡಿಲು ಬಡಿದಂತಾಗಿದೆ.

ಕೆಎಸ್‍ಆರ್‍ಟಿಸಿ ಬಸ್‍ಗಳ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

ಚೆನ್ನೈ, ಡಿ.5-ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆರೋಗ್ಯ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‍ಆರ್‍ಟಿಸಿ) ಕೆಲವು ಬಸ್‍ಗಳ ಮೇಲೆ ಕಲ್ಲು ಮತ್ತು ಬಾಟಲ್‍ಗಳನ್ನು ತೂರಿ ಜಖಂಗೊಳಿಸಿರುವ ಘಟನೆ ಇಂದು ಬೆಳಿಗ್ಗೆ ತಿರುವಣ್ಣಾಮಲೈನಲ್ಲಿ ನಡೆದಿದೆ.  ಬೆಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ನಾಲ್ಕು ಬಸ್‍ಗಳ ಮೇಲೆ ದುಷ್ಕಮಿಗಳು ಕಲ್ಲುಗಳು ಮತ್ತು ಬಿಯರ್ ಬಾಟಲ್‍ಗಳನ್ನು ಎಸೆದರು. ಇದರಿಂದ ಬಸ್‍ಗಳ ಕಿಟಕಿ ಗಾಜುಗಳು ಜಖಂಗೊಂಡಿವೆ. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಕೆಲವು ಕಿಡಿಗೇಡಿಗಳನ್ನು ವಶಕ್ಕೆ ತೆಗೆದುಕೊಂಡರು.

ತಮಿಳುನಾಡಿನ ಎಲ್ಲ ಜಿಲ್ಲೆಗಳು ಮತ್ತು ಗಡಿ ಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ತಮಿಳುನಾಡಿನಿಂದ ಕರ್ನಾಟಕಕ್ಕೆ ಸರ್ಕಾರಿ ಬಸ್‍ಗಳ ಸೇವೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.  ಚಾಮರಾಜನಗರ ವರದಿ : ತಮಿಳುನಾಡಿನ ಕೆಲವೆಡೆ ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆದಿರುವುದರಿಂದ ಚಾಮರಾಜನಗರ, ಕೋಲಾರ ಮತ್ತಿತರ ಭಾಗಗಳಿಂದ ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

KSRTC

ಬೆಂಗಳೂರು ಡಿ.05 : ತಮಿಳುನಾಡಿನ ತಿರುವಣ್ಣಾಮಲೈನಲ್ಲಿ, 2 ಕೆಎಸ್ಆರ್ಟಿಸಿ. ಬಸ್ ಗಳ ಮೇಲೆ ಬಾಟಲಿ, ಕಲ್ಲು ತೂರಾಟ ನಡೆಸಿದ ಹಿನ್ನಲೆಯಲ್ಲಿ, ರಾಜ್ಯದಿಂದ ತಮಿಳುನಾಡಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.  ರಾಜ್ಯದ ವಿವಿಧ ಕಡೆಗಳಿಂದ ತಮಿಳುನಾಡಿಗೆ ತೆರಳುವ ಗಡಿಭಾಗದಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಚಾಮರಾಜನಗರ, ಅತ್ತಿಬೆಲೆಯ ತಮಿಳುನಾಡು ಗಡಿಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಿದ್ದು, ಎರಡೂ ರಾಜ್ಯಗಳಿಂದ ಸಾರಿಗೆ ಸಂಸ್ಥೆ ಬಸ್ ಗಳ ಸಂಚಾರ ನಿಂತಿದೆ. ಕರ್ನಾಟಕದಿಂದ 470 ಟ್ರಿಪ್ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗೆಯೆ ಮಂಡ್ಯದಿಂದ ತಮಿಳುನಾಡಿಗೆ ಹೊರಡಬೇಕಿದ್ದ ಬಸ್ ಗಳನ್ನೂ ತಡೆಹಿಡಿಯಲಾಗಿದೆ. ಮಂಡ್ಯದಿಂದ ಪ್ರತಿದಿನ ನಾಲ್ಕಕ್ಕೂಹೆಚ್ಚು ಬಸ್ ಗಳು ತಮಿಳುನಾಡಿಗೆ ಸಂಚರಿಸುತ್ತವೆ. ಅದರೆ ಸೋಮವಾರ 2 ಬಸ್ ಗಳನ್ನು ತಡೆಯಲಾಗಿದೆ. ಆದರೆ ಭಾನುವಾರ ರಾತ್ರಿ ನಾಲ್ಕು ಬಸ್ ಗಳನ್ನು ತಡೆಯಲಾಗಿದ್ದು, ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಮಂಡ್ಯ ಕೆಎಸ್ ಆರ್ ಟಿಸಿ ಅಧಿಕಾರಿ ದೀಪಕ್ ತಿಳಿಸಿದ್ದಾರೆ.

ಚಾಮರಾಜನಗರ ಗಡಿ ಭಾಗದಿಂದ ಬೆಳಗ್ಗೆ ತೆರಳಬೇಕಿದ್ದ ಆರು ಬಸ್ಗಳನ್ನು ತಡೆಹಿಡಿಯಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೂ ಯಾವುದೇ ಬಸ್ ತಮಿಳುನಾಡಿಗೆ ತೆರಳಿಲ್ಲ. ಚಾಮರಾಜನಗರದಿಂದ ತೆರಳಬೇಕಿದ್ದ 15 ಬಸ್ಗಳು ಹಾಗೂ ರಾಜ್ಯದ ಇತರೆ ಭಾಗದಿಂದ ಈ ಗಡಿಯ ಮೂಲಕ ತೆರಳಬೇಕಿದ್ದ 60 ಬಸ್ ಸೇರಿದಂತೆ ಒಟ್ಟು 75 ಬಸ್ಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ತಮಿಳುನಾಡು ಗಡಿ, ಕರ್ನಾಟಕ ಗಡಿ, ಬಂಡಿಪುರ ಅಭಯಾರಣ್ಯ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಬೆಂಗಳೂರಿನಿಂದ ಸಂಚಾರ ಸ್ಥಗಿತ

ಬೆಂಗಳೂರಿನ ಶಾಂತಿನಗರದಿಂದ ತಮಿಳುನಾಡಿಗೆ ತೆರಳಬೇಕಿದ್ದ ಬಸ್ಗಳು ತೆರಳಲು ಸಿದ್ಧವಾಗಿದ್ದರೂ, ನಿಲ್ಲಿಸುವ ಸೂಚನೆ ಬಂದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿಯೇ ಮುಂದಿನ ಆದೇಶಕ್ಕೆ ಕಾದು ನಿಂತಿವೆ.  ನಗರದಿಂದ 470 ಷಡ್ಯೂಲ್ನಲ್ಲಿ ಬಸ್ಗಳು ತಮಿಳುನಾಡಿಗೆ ನಿತ್ಯ ತೆರಳುತ್ತವೆ. ಇವೆಲ್ಲವನ್ನೂ ಸ್ಥಗಿತಗೊಳಿಸಲಾಗಿದೆ. ತಮಿಳುನಾಡಿನಿಂದ ಕೂಡ ಇದೇ ಸಂಖ್ಯೆಯ ಬಸ್ಗಳ ಸೇವೆ ಇತ್ತು. ಅದೂ ನಿಂತಿದೆ. ಬೆಳಗ್ಗಿನಿಂದ ಏಕಾಏಕಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.  ನಗರದಿಂದ ಬಸ್ ತೆರಳಿದರೂ, ಗಡಿ ಭಾಗದಲ್ಲಿ ಬಸ್ಗಳನ್ನು ತೆರಳಲು ಬಿಡುತ್ತಿಲ್ಲ. ಇದರಿಂದ ನಗರದಿಂದಲೇ ಬಸ್ ಬಿಡದಿರಲು ನಿರ್ಧರಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಮೂಲಗಳು ತಿಳಿಸಿವೆ. ಬೆಂಗಳೂರಿನಿಂದ ಪ್ರತಿ ಒಂದು ಗಂಟೆಗೆ ಒಂದು ವೋಲ್ವೊ ಬಸ್ ತೆರಳುತ್ತಿತ್ತು. ಅದನ್ನೂ ನಿಲ್ಲಿಸಲಾಗಿದ್ದು, ಪ್ರತಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಾಗಿದ್ದು, ಆಯಾ ಭಾಗದ ಮಾಹಿತಿ ಸಿಕ್ಕ ಮೇಲೆ, ಪರಿಸ್ಥಿತಿ ಆಧರಿಸಿ ಮುಂದಿನ ಸಂಚಾರ ನಿರ್ಧರಿಸಲಾಗುವುದು ಎಂದು ಕೆಎಸ್ಆರ್ಟಿಸಿ ಎಂಡಿ ರಾಜೇಂದ್ರ ಕುಮಾರ್ ಕಠಾರಿಯಾ ತಿಳಿಸಿದ್ದಾರೆ.

ರಾಜ್ಯದಲ್ಲೂ ಕಟ್ಟೆಚ್ಚರ, ಗಡಿ ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

KSRTC-01

ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಹೃದಯಾಘಾತವಾದ ಬೆನ್ನಲ್ಲೇ ಕರ್ನಾಟಕದಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಮುಖವಾಗಿ ತಮಿಳುನಾಡು ಗಡಿ ಸಮೀಪದ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ ಮತ್ತು ಬೆಂಗಳೂರಿನಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಮುಖವಾಗಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರಿನ ಅತ್ತಿಬೆಲೆ ಹಾಗೂ ಅನೇಕಲ್ ನಲ್ಲಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿದ್ದು, ಅತ್ತಿಬೆಲೆ ಮತ್ತು ಆನೇಕಲ್ ಚೆಕ್ ಪೋಸ್ಟ್ ಗಳಲ್ಲಿ ಕಟ್ಟೆಚ್ಚರವಹಿಸಲಾಗಿದೆ.

ಅತ್ತ ಜಯಾಗೆ ಹೃದಯಾಘಾತ ವಿಚಾರ ತಿಳಿಯುತ್ತಿದ್ದಂತೆಯ ಚೆನ್ನೈನ ಆಪೋಲೋ ಆಸ್ಪತ್ರೆಯತ್ತ ಅಭಿಮಾನಿಗಳು ಧಾವಿಸುತ್ತಿದ್ದಂತೆಯೇ, ಇತ್ತ ಬೆಂಗಳೂರಿನಲ್ಲೂ ಅವರ ಅಭಿಮಾನಿಗಳು ಕಂಗಾಲಾಗಿದ್ದರೆ. ನಗರ ಶ್ರೀರಾಂಪುರದಲ್ಲಿರುವ ತಮಿಳು ನಿವಾಸಿಗಳು ಜಯಲಿಲಿತಾ ಚೇತರಿಸಿಕೊಳ್ಳಲಿ ಎಂದು ರಾತ್ರಿಯಿಂದಲೇ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದಾರೆ. ಇನ್ನು ಜಯಲಲಿತಾ ಅವರಿಗೆ ಹೃದಯಾಘಾತವಾದಗ ಹಿನ್ನಲೆಯಲ್ಲಿ ನಗರದಲ್ಲಿ ತಮಿಳುನಿವಾಗಳು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವಂತೆ ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಅವರು ಆದೇಶ ಹೊರಡಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin