ತಮಿಳುನಾಡಿಗೆ ನೀರು ಬಿಡಬೇಡಿ : ವಾಟಾಳ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Vatala

ಬೆಂಗಳೂರು, ಆ.28– ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತಹ ಪರಿಸ್ಥಿತಿ ನಮಗಿಲ್ಲದಿದ್ದರೂ ಅನಗತ್ಯವಾಗಿ ತಮಿಳುನಾಡು ಕಾವೇರಿ ನೀರಿನ ಬೇಡಿಕೆಯಿಟ್ಟು ಗೊಂದಲ ಸೃಷ್ಟಿಸುತ್ತಿದೆ. ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದಿಲ್ಲಿ ಪ್ರತಿಭಟನೆ ಮಾಡಿದರು.
ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಎತ್ತಿನಗಾಡಿ ಮೇಲೆ ಖಾಲಿ ಕೊಡ ಇಟ್ಟು ಮೆರವಣಿಗೆ ನಡೆಸಿ ವಿನೂತನ ಪ್ರತಿಭಟನೆ ಮಾಡಿದ ಅವರು, ತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿದರು.   ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗದೆ ಜಲಾಶಯಗಳು ಬತ್ತಿ ಹೋಗಿವೆ. ಕಾವೇರಿ, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳಲ್ಲಿ ನೀರಿಲ್ಲ. ಇರುವ ನೀರು ಬೆಂಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗೆ ಸಾಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡು ಸರ್ಕಾರ ರೈತರ ಬೆಳೆಗೆ ನೀರು ಕೇಳುತ್ತಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿಲ್ಲದೆ ಬೆಳೆ ಹಾಕಬಾರದೆಂದು ಸರ್ಕಾರ ನಮ್ಮ ರೈತರಿಗೆ ಸೂಚಿಸಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡು ರೈತರ ಬೆಳೆಗಳಿಗೆ ಎಲ್ಲಿಂದ ನೀರು ಬಿಡುವುದು. ಇದನ್ನು ಕೇಳುವವರಾದರೂ ಅರ್ಥ ಮಾಡಿಕೊಳ್ಳಬೇಕು. ಸುಪ್ರೀಂಕೋರ್ಟ್ಗೆ ಬೆಳೆನಷ್ಟ ಪರಿಹಾರ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರ ಸಮರ್ಪಕ ಕಾನೂನು ಹೋರಾಟ ನಡೆಸಿ ಕಾವೇರಿ ನದಿ ನೀರು ಕೊರತೆಯಿಂದ ಸಂಕಷ್ಟಕ್ಕೀಡಾಗಿರುವ ನಮ್ಮ ರಾಜ್ಯದ ರೈತರಿಗೆ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು. ಮೊನ್ನೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ರಾಜ್ಯದ ರೈತರ ಹಿತಾಸಕ್ತಿ ಕಾಪಾಡಲು ಎಲ್ಲ ಪಕ್ಷಗಳೂ ಮುಂದಾಗಿರುವುದು ಸ್ವಾಗತಾರ್ಹ ಕ್ರಮ. ತಮ್ಮ ರಾಜಕೀಯ ಪ್ರತಿಷ್ಠೆಗಳನ್ನು ಬದಿಗಿಟ್ಟು ನೆಲ-ಜಲ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ವಾಟಾಳ್ ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin