ತಮಿಳುನಾಡಿಗೆ ನೀರು ಬಿಡುವುದಾಗಿ ಅಫಿಡೆವಿಟ್ : ರಾಜ್ಯ ಸರ್ಕಾರದ ಬಣ್ಣ ಬಯಲು

ಈ ಸುದ್ದಿಯನ್ನು ಶೇರ್ ಮಾಡಿ

siddu
ಸದ್ಯದ ಪರಿಸ್ಥಿತಿಯಲ್ಲಿ ನಾವು 10 ಸಾವಿರ ಕ್ಯೂಸೆಕ್ಸ್ (.087 ಟಿಎಂಸಿ) ನೀರು ಹರಿಸಲು ಬದ್ಧರಿದ್ದೇವೆ. ಸಂಕಷ್ಟದ ಸೂತ್ರದ ನಿಯಮದಂತೆ ಈ ನೀರನ್ನು ಸಾಂಬಾ ಬೆಳೆಗೆ ಬಳಕೆ ಮಾಡಿಕೊಳ್ಳದೆ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕೆಂದು ನಾರಿಮನ್ ನ್ಯಾಯಾಶರಿಗೆ ಮನವರಿಕೆ ಮಾಡಿಕೊಟ್ಟರು.

ಬೆಂಗಳೂರು, ಸೆ.6- ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದ ಕರ್ನಾಟಕ ಸರ್ಕಾರ ಪ್ರತಿದಿನ 10 ಸಾವಿರ ಕ್ಯೂಸೆಕ್ಸ್ ನೀರು ಹರಿಸುವುದಾಗಿ ನ್ಯಾಯಾಲಯಕ್ಕೆ ಅಫಿಡೆವಿಟ್ ಸಲ್ಲಿಸಿರುವುದು ಬಯ ಲಾಗಿದೆ.  ಕಳೆದ ಶುಕ್ರವಾರ ರಾಜ್ಯದ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಫಾಲಿ ನಾರಿಮನ್ ಅವರು ತಮಿಳುನಾಡಿಗೆ ಸೆ.7ರಿಂದ 12ರ ವರೆಗೆ ಪ್ರತಿದಿನ 10 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಕರ್ನಾಟಕ ಒಪ್ಪಿಕೊಂಡಿದೆ ಎಂಬುದನ್ನು ಅಫಿಡವಿಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.ನಿನ್ನೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಗಳಾದ ದೀಪಕ್ ಮಿಶ್ರಾ ಮತ್ತು ಲಲಿತ್ ಉದಯ್ ಅವರಿದ್ದ ದ್ವಿಸದಸ್ಯ ಪೀಠ ಪ್ರತಿದಿನ ತಮಿಳುನಾಡಿಗೆ 25 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಸಾಧ್ಯವೇ ಎಂದು ನಾರಿಮನ್ ಅವರನ್ನು ಪ್ರಶ್ನಿಸಿತು. ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಾದ ಹಾರಂಗಿ, ಕೆಆರ್‌ಎಸ್, ಕಬಿನಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಈ ಬಾರಿ ನೀರಿನ ಸಂಗ್ರಹಣೆ ಕಳೆದ ಒಂದು ದಶಕದ ಅವಯಲ್ಲಿಯೇ ಅತ್ಯಂತ ಕನಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ನಾವು 10 ಸಾವಿರ ಕ್ಯೂಸೆಕ್ಸ್ (.087 ಟಿಎಂಸಿ) ನೀರು ಹರಿಸಲು ಬದ್ಧರಿದ್ದೇವೆ. ಸಂಕಷ್ಟದ ಸೂತ್ರದ ನಿಯಮದಂತೆ ಈ ನೀರನ್ನು ಸಾಂಬಾ ಬೆಳೆಗೆ ಬಳಕೆ ಮಾಡಿಕೊಳ್ಳದೆ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕೆಂದು ನಾರಿಮನ್ ನ್ಯಾಯಾಶರಿಗೆ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಆಕ್ಷೇಪಿಸಿದ ತಮಿಳುನಾಡಿನ ಹಿರಿಯ ವಕೀಲ ಶೇಖರ್ ನಪಾಡೆ ಅವರು ಸುಮಾರು 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾಂಬಾ ಬೆಳೆ ಬೆಳೆದು ನಿಂತಿದೆ. 5 ಲಕ್ಷ ಕುಟುಂಬಗಳು ಈ ಬೆಳೆಯನ್ನೇ ಅವಲಂಬಿಸಿವೆ. ಈಗ ನೀರು ಬಿಡದಿದ್ದರೆ ಬೆಳೆ ಒಣಗಿ ಹೋಗಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ ಎಂದು ಅರಿಕೆ ಮಾಡಿದರು. ಅಲ್ಲದೆ, ಕರ್ನಾಟಕ ಸರ್ಕಾರ ಸಂಕಷ್ಟದ ಸೂತ್ರದ ನಿಯಮದಂತೆ ನಮ್ಮ ರಾಜ್ಯಕ್ಕೆ ಬಿಡಬೇಕಾದ ನೀರನ್ನು ಹರಿಸಿಲ್ಲ. ಇದು ಕೂಡ ನ್ಯಾಯಾಂಗ ನಿಂದನೆಯಾಗಲಿದೆ ಎಂದು ಗಮನ ಸೆಳೆದರು. ನಮಗೆ ಪ್ರತಿದಿನ ಕಡಿಮೆ ಎಂದರೆ 50 ಸಾವಿರ ಕ್ಯೂಸೆಕ್ಸ್ ನೀರನ್ನು ಕನಿಷ್ಟ 10 ದಿನಗಳವರೆಗೆ ಹರಿಸಲು ನಿರ್ದೇಶನ ನೀಡುವಂತೆ ನ್ಯಾಯಾಶರಿಗೆ ಮನವರಿಕೆ ಮಾಡಿಕೊಟ್ಟರು.

ಈ ಹಂತದಲ್ಲಿ ನ್ಯಾಯಾಶರು ಎರಡೂ ಕಡೆ ವಾದ-ವಿವಾದ ಆಲಿಸಿ ಕರ್ನಾಟಕ 25 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಸಾಧ್ಯವಿದೆ ಎಂಬುದನ್ನು ಪರಿಗಣಿಸಬೇಕೆ ಎಂದು ನಾರಿಮನ್‌ಗೆ ಪ್ರಶ್ನೆ ಮಾಡಿದರು. ನಾವು ಈಗಾಗಲೇ ಅಫಿಡವಿಟ್‌ನಲ್ಲಿ ಮನವಿ ಮಾಡಿರುವಂತೆ ಪ್ರತಿದಿನ ಅಂದರೆ ಸೆ.7ರಿಂದ 12ರ ವರೆಗೆ 10 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಸಿದ್ಧರಿದ್ದೇವೆ. ಕಾವೇರಿ ನದಿಯ ಮುಖ್ಯ ಜಲಮಾಪನ ಕೇಂದ್ರವಾದ ಬಿಳುಗುಂಡ್ಲುವಿಗೆ ಕೇಂದ್ರ ಜಲತಜ್ಞರ ತಂಡವನ್ನು ಕಳುಹಿಸಿಕೊಡಬೇಕೆಂದು ಕೋರಿದರು.  ಅಂತಿಮವಾಗಿ ಎರಡೂ ಕಡೆ ವಾದ-ವಿವಾದ ಆಲಿಸಿದ ನ್ಯಾಯಾಲಯ ತಮಿಳುನಾಡಿಗೆ ಪ್ರತಿದಿನ 15 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶ ನೀಡಿತ್ತು. ಅಂದಹಾಗೆ ತಮಿಳುನಾಡು ಪರ ವಾದ ಮಾಡಿದ್ದು ಆರು ಮಂದಿ ವಕೀಲರಾದರೆ, ಕರ್ನಾಟಕದ ಪರ ವಾದ ಮಂಡಿಸಿದ್ದು 25 ಮಂದಿ ವಕೀಲರು.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin