ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ : ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

MB-Patil

ಬೆಂಗಳೂರು, ಜು.17-ಕಾವೇರಿ ನದಿ ಪಾತ್ರದ ನಾಲ್ಕು ಜಲಾಶಯಗಳಲ್ಲಿ ಕಳೆದ ವರ್ಷ ಸಂಗ್ರಹವಾಗಿದ್ದ ನೀರಿಗಿಂತಲೂ ಈ ವರ್ಷ ಅರ್ಧಕ್ಕರ್ಧ ನೀರು ಕಡಿಮೆ ಸಂಗ್ರಹವಾಗಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಇದೇ ಸಮಯದಲ್ಲಿ ಕಾವೇರಿ ನದಿ ಪಾತ್ರದ ಕೆಆರ್‍ಎಸ್, ಕಬಿನಿ, ಹಾರಂಗಿ ಸೇರಿ ನಾಲ್ಕು ಜಲಾಶಯಗಳಲ್ಲಿ 57.89 ಟಿಎಂಸಿ ನೀರು ಸಂಗ್ರಹವಾಗಿತ್ತು. 40 ವರ್ಷಗಳಲ್ಲೇ ಕಂಡರಿಯದಷ್ಟು ಭೀಕರ ಬರ ಇದೆ ಎಂದು ಅಂದಾಜಿಸಲಾಗಿದ್ದ ಕಳೆದ ವರ್ಷ 57 ಟಿಎಂಸಿ ನೀರಿದ್ದರೆ, ಈ ವರ್ಷ ಕೇವಲ 26.5 ಟಿಎಂಸಿ ನೀರು ಮಾತ್ರ ಇದೆ. ಇದು ಹಿಂದಿನ ವರ್ಷಕ್ಕಿಂತ ಅತ್ಯಂತ ದುಸ್ತರ ಸನ್ನಿವೇಶವಾಗಿದೆ.

ಕೆಆರ್‍ಎಸ್‍ನಲ್ಲಿ ಶೇ.1.62ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಇತ್ತೀಚಿನ ಮಳೆಯಿಂದ ನಾಲ್ಕು ಜಲಾಶಯಗಳಿಗೆ 24 ಟಿಎಂಸಿ ಮಾತ್ರ ನೀರು ಬಂದಿದೆ. ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಅನುಸಾರ ಜೂನ್ 10, ಜುಲೈನಲ್ಲಿ 34 ಟಿಎಂಸಿ ಸೇರಿ ಈ ತಿಂಗಳ ಅಂತ್ಯಕ್ಕೆ 44 ಟಿಎಂಸಿ ನೀರು ಬಿಡಬೇಕಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ನೀರು ಹರಿಸುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ. ನೀರಿನ ಒಳಹರಿವನ್ನು ಆಧರಿಸಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಇವತ್ತಿನ ಪರಿಸ್ಥಿತಿಯಲ್ಲಿ 9,500 ಕ್ಯೂಸೆಕ್ ನೀರಿನ ಒಳಹರಿವಿದೆ. ಇದರಲ್ಲಿ ಶೇ.30ರಷ್ಟು ನೀರನ್ನು ಬೆಂಗಳೂರಿನ ಕುಡಿಯುವ ನೀರಿನ ಉದ್ದೇಶಕ್ಕೂ ಸೇರಿದಂತೆ ಹೊರಗೆ ಹರಿಯಬಿಡಲಾಗುತ್ತಿದೆ ಎಂದು ವಿವರಿಸಿದರು.

ನಾಲ್ಕು ಜಲಾಶಯಗಳಲ್ಲಿ ಕನಿಷ್ಠ 100 ಟಿಎಂಸಿ ನೀರು ಸಂಗ್ರಹವಾಗದ ಹೊರತು ಕೃಷಿಗೆ ನೀರು ಕೊಡಲು ಸಾಧ್ಯವಿಲ್ಲ. ಈ ವರ್ಷ ಕೃಷಿ ರಜೆ ಘೋಷಿಸುವ ಸಂಬಂಧ ಕೃಷಿ ಇಲಾಖೆ ಜೊತೆ ಚರ್ಚೆ ಮಾಡಿ ಅಂಕಿಅಂಶಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು. ಜಲಾಶಯಗಳಲ್ಲಿ ಸಂಗ್ರಹವಾಗುವ ನೀರನ್ನು ಮೊದಲು ಕುಡಿಯುವ ಉದ್ದೇಶಕ್ಕೆ ಬಳಸಲಾಗುವುದು. ನಂತರ ಕೃಷಿ, ಅನಂತರವೂ ಉಳಿದರೆ ವಿದ್ಯುತ್ ಉತ್ಪಾದನೆಗೆ ಪೂರೈಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ರಾಜ್ಯಸರ್ಕಾರ ಇನ್ನು ಆಶಾವಾದದಲ್ಲಿದೆ. ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದೇವೆ. ಸೆಪ್ಟೆಂಬರ್‍ನೊಳಗೆ ಉತ್ತಮ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಪ್ರಕೃತಿಯನ್ನು ನಂಬದ ಹೊರತು ನಮಗೆ ಅನ್ಯ ಮಾರ್ಗವಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.
ಮೋಡ ಬಿತ್ತನೆಗೆ ಸಂಬಂಧಪಟ್ಟಂತೆ ನನಗೆ ಯಾವುದೇ ಮಾಹಿತಿ ಇಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ್ ಇದರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಮೋಡ ಬಿತ್ತನೆಯಲ್ಲಿ ಅವರು ತಜ್ಞರು. ಹಣಕಾಸಿನ ಸೌಲಭ್ಯವನ್ನು ಜಲಸಂಪನ್ಮೂಲ ಇಲಾಖೆಯೇ ನೀಡಲಿದೆ. ಆದರೆ ಮೋಡ ಬಿತ್ತನೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ಎಚ್.ಕೆ.ಪಾಟೀಲ್ ಅವರಿಗಿದೆ ಎಂದು ಹೇಳಿದರು.

ಮಲಪ್ರಭಾದಿಂದ ಮಹದಾಯಿಗೆ, ಮಹದಾಯಿಯಿಂದ ಗೋವಾಗೆ ರಾಜ್ಯಸರ್ಕಾರ ನೀರು ಹರಿಸುತ್ತಿದೆ ಎಂಬ ವರದಿಯ ಬಗ್ಗೆ ಸ್ಪಷ್ಟನೆ ನೀಡಿದ ಎಂ.ಬಿ.ಪಾಟೀಲ್ ಅವರು, ಇದು ಸುಳ್ಳು ಮಾಹಿತಿ. ರಾಜ್ಯಸರ್ಕಾರ ಮಲಪ್ರಭಾದಿಂದ ಮಹದಾಯಿಗೆ ನೀರು ಹರಿಸಿಲ್ಲ. ಕರ್ನಾಟಕ ಭಾಗದಲ್ಲಿರುವ ಮಹದಾಯಿಯಿಂದ ಗೋವಾ ಭಾಗದ ಮಹದಾಯಿಗೆ ಯಾಂತ್ರಿಕವಾಗಿ ನೀರು ಹರಿದು ಹೋಗಿದೆ. ಕಳಸಾ ಬಂಡೂರಿ ವಿವಾದ ನ್ಯಾಯಾಲಯದ ವಿಚಾರಣೆಯಲ್ಲಿರುವುದಿಲ್ಲ. ನಾವು ಯಾವುದೇ ಅಣೆಕಟ್ಟು ಕಟ್ಟಿಲ್ಲ. ಸಹಜವಾಗಿಯೇ ನೀರು ಹರಿದು ಹೋಗುತ್ತಿದೆ. ಇದನ್ನು ಸರಿಯಾಗಿ ತಿಳಿದುಕೊಳ್ಳದೆ ತಪ್ಪು ವರದಿ ಮಾಡಿರುವುದು ಸರಿಯಲ್ಲ. ಕಳಸಾ ಬಂಡೂರಿ ವಿವಾದದ ಸಲುವಾಗಿ ಆ ಭಾಗದ ನಾಲ್ಕು ಜಿಲ್ಲೆಗಳಲ್ಲಿ ಎರಡು ವರ್ಷಗಳಿಂದ ತೀವ್ರ ಹೋರಾಟ ನಡೆಯುತ್ತಿದೆ. ತಪ್ಪು ಮಾಹಿತಿಯಿಂದ ರೈತರು ಪ್ರತಿಭಟನೆ ನಡೆಸಿ ಕಾನೂನು ಕೈಗೆತ್ತಿಕೊಂಡರೆ ಯಾರು ಹೊಣೆ ಎಂದು ಎಂ.ಬಿ.ಪಾಟೀಲ್ ಪ್ರಶ್ನಿಸಿದರು.

ಕಳಸಾ ಬಂಡೂರಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಗೋವಾ ಸರ್ಕಾರ ಮುಂದಾದರೆ ಅದನ್ನು ಕರ್ನಾಟಕ ಸ್ವಾಗತಿಸಲಿದೆ ಮತ್ತು ವಿವಾದ ಬಗೆಹರಿಸಲು ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಸಚಿವರು ತಿಳಿಸಿದರು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂತಿಆ ಗೋವಾ ಸರ್ಕಾರಕ್ಕೆ ಪತ್ರಗಳನ್ನು ಬರೆದು ಸೌಹಾರ್ದ ಮಾತುಕತೆಗೆ ಆಹ್ವಾನ ನೀಡಿದ್ದಾರೆ. ಅದರ ನಂತರ ಬೆಳವಣಿಗೆ ಬಗ್ಗೆ ಮಾಹಿತಿ ಇಲ್ಲ. ಗೋವಾ ಸರ್ಕಾರದ ಮಾತುಕತೆಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ನಿಜವೇ ಆಗಿದ್ದರೆ ಮಹಾರಾಷ್ಟ್ರ, ಗೋವಾ, ಕರ್ನಾಟಕ ರಾಜ್ಯದ ವಕೀಲರು ಮಾತುಕತೆ ವೇಳೆ ಹಾಜರಿದ್ದು, ವಿವಾದ ಬಗೆಹರಿಸಲು ಮುಂದಾಗುತ್ತಾರೆ. ಪ್ರಧಾನಿ ಮಧ್ಯೆಪ್ರವೇಶ ಮಾಡಿದರೆ ಇನ್ನೂ ಉತ್ತಮವಾಗಿರುತ್ತದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin