ತಮಿಳುನಾಡಿನಲ್ಲಿ ಅಬ್ಬರಿಸುತ್ತಿದೆ ವಾರ್ಧಾ ಚಂಡಮಾರುತ : ಚೆನ್ನೈ ಜಲಾವೃತ

ಈ ಸುದ್ದಿಯನ್ನು ಶೇರ್ ಮಾಡಿ

Chennai-01

ಚೆನ್ನೈ, ಡಿ.12– ಬಂಗಾಳಕೊಲ್ಲಿಯಲ್ಲಿ ಎದ್ದಿರುವ ವಾರ್ದಾಹ್ ಚಂಡಮಾರುತ ತಮಿಳುನಾಡು, ಮತ್ತು ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿ ರುದ್ರಸ್ವರೂಪ ಪಡೆದುಕೊಂಡಿದೆ. ಚೆನ್ನೈ ಸೇರಿದಂತೆ ಇತರ ಹಲವು ಜಿಲ್ಲೆಗಳಲ್ಲಿ ಮುಂಜಾನೆಯಿಂದಲೇ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವರುಣನ ಆರ್ಭಟದಿಂದಾಗಿ ರೈಲುಗಳು ಮತ್ತು ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ.  ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಗೆ 15 ಎನ್‍ಡಿಆರ್‍ಎಫ್ ತಂಡಗಳನ್ನು ನಿಯೋಜಿಸಲಾಗಿದೆ.
ಚಂಡಮಾರುತ ರೌದ್ರಾವತಾರಕ್ಕೆ ತಿರುಗಿರುವುದರಿಂದ ಕಲ್ಪಕಂನಲ್ಲಿರುವ ಮದ್ರಾಸ್ ಆಟೋಮಿಕ್ ಪವರ್ ಸ್ಟೇಷನ್‍ಗೆ(ಎಂಎಪಿಎಸ್) ಅಗತ್ಯ ರಕ್ಷಣೆ ನೀಡುವಂತೆ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸೂಚನೆ ನೀಡಿದ್ದಾರೆ.

 

ತಮಿಳುನಾಡಿನ ಉತ್ತರ ಭಾಗ ಮತ್ತು ದಕ್ಷಿಣ ಆಂಧ್ರಪ್ರದೇಶದಲ್ಲಿ ಚಂಡಮಾರುತ ಅಪ್ಪಳಿಸಿದ್ದು, ಭಾರೀ ಗಾಳಿಯೊಂದಿಗೆ ಕುಂಭದ್ರೋಣ ಮಳೆ ಸುರಿಯುತ್ತಿದೆ. ವಿದ್ಯುತ್ ಕಡಿತಗೊಳಿಸಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಚೆನ್ನೈನ ಪೂರ್ವಭಾಗದಲ್ಲಿ ಕೇಂದ್ರೀಕೃತವಾಗಿರುವ ಈ ಚಂಡಮಾರುತ ನೆಲ್ಲೂರು ಮತ್ತು ಮಚಲಿಪಟ್ಟಣಂ ಮಧ್ಯೆ ಗಂಟೆಗೆ 150 ಕಿ.ಮೀ. ವೇಗದಲ್ಲಿ ಹಾದು ಹೋಗಿದೆ ಎಂದು ಹವಾಮಾನ ಇಲಾಖೆ ಉಪ ನಿರ್ದೇಶಕ ಡಾ.ಎಸ್. ಬಾಲಚಂದ್ರನ್ ತಿಳಿಸಿದ್ದಾರೆ.  ಇದರಿಂದಾಗಿ ಚೆನ್ನೈ, ಕಡಲೂರು, ತಿರುವಳ್ಳೂರು, ಕಾಂಚೀಪುರಂ. ವಿಳುಪುರಂ, ಕೃಷ್ಣಗಿರಿ, ತಿರುವಣ್ಣಾಮಲೈ ಹಾಗೂ ಪುದುಚೇರಿಯ ಹಲವೆಡೆ ಮುಂಜಾನೆಯಿಂದಲೇ ಭಾರೀ ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದಾಗಿ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಶಾಲಾ-ಕಾಲೇಜುಗಳು ಮತ್ತು ಐಟಿ-ಬಿಟಿ ಕಂಪನಿಗಳಿಗೆ ರಜೆ ಘೋಷಿಸಲಾಗಿದೆ. ಚೆನ್ನೈನಲ್ಲಿ ಭಾರೀ ಮಳೆಯಿಂದಾಗಿ ಅನೇಕ ರೈಲುಗಳು ಮತ್ತು 25 ವಿಮಾನ ಸಂಚಾರಗಳನ್ನು ಸ್ಥಗಿತಗೊಳಿಸಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ.

Chennai-03

200ಕ್ಕೂ ಹೆಚ್ಚು ಮರಗಳು ಧರೆಗೆ:

ವಾರ್ದಾ ಚಂಡಮಾರುತದ ರೌದ್ರಾವತಾರದಿಂದ ಚೆನ್ನೈ ಮಹಾನಗರಿಯೊಂದರಲ್ಲೇ 200ಕ್ಕೂ ಹೆಚ್ಚು ಮರಗಳು ಉರುಳಿಬಿದ್ದಿದ್ದು , ಹಲವೆಡೆ ಭೂಕುಸಿತ ಸಂಭವಿಸಿದೆ. ಹಲವಾರು ಕಟ್ಟಡದ ಗೋಡೆಗಳು ಕುಸಿದು ಬಿದ್ದಿದ್ದು, ಮೇಲ್ಚಾವಣಿಗಳು ತರಗೆಲೆಗಳಂತೆ ಹಾರಿಹೋಗಿವೆ. ಭಾರೀ ಬಿರುಗಾಳಿ ಮತ್ತು ಮಳೆಯಿಂದಾಗಿ ನಗರದ ಬಹುತೇಕ ಕಡೆ ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ಧರಶಾಯಿಯಾಗಿದೆ.  ಜಯಲಲಿತಾರ ಪೋಯಸ್ ಗಾರ್ಡನ್‍ನಲ್ಲಿರುವ ಮನೆಯಲ್ಲಿ ಏಳಕ್ಕೂ ಹೆಚ್ಚು ಮರಗಳು ಉರುಳಿಬಿದ್ದಿವೆ. ರಾಯಪೇಟಾದಲ್ಲಿ 59, ನುಂಗ್ಗಂಬಕಂನಲ್ಲಿ 20, ಗೋಪಾಲಪುರಂನಲ್ಲಿ 16, ವಂಡಲಪುರಂನಲ್ಲಿ 23 ಭಾರೀ ಗಾತ್ರದ ಮರಗಳು ಉರುಳಿಬಿದ್ದಿವೆ.

Vardah

ಗಂಟೆಗೆ 150 ಕಿ.ಮೀಗಿಂತಲೂ ಹೆಚ್ಚು ವೇಗವಾಗಿ ಬೀಸುತ್ತಿರುವ ವಾರ್ದಾ ಗಾಳಿಗೆ ಅನೇಕ ಮನೆಗಳು, ಕಟ್ಟಡಗಳ ಗೋಡೆಗಳು ಕುಸಿದುಬಿದ್ದಿವೆ. ಚಂಡಮಾರುತಕ್ಕೆ ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.  ನೇಪಿಯರ್ ಸೇತುವೆ ಮೇಲೆ ಮರಗಳು ಉರುಳಿ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು. ನಗರದ ಅನೇಕ ಭಾಗಗಳಲ್ಲಿ ಟ್ರಾಫಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡಿದರು.  ಚೆನ್ನೈ ಸಚಿವಾಲಯದಲ್ಲಿ ತುರ್ತು ಸಭೆ ನಡೆಸಿದ ಪನ್ನೀರ್ ಸೆಲ್ವಂ ಜನರ ಜೀವ ಮತ್ತು ಆಸ್ತಿ-ಪಾಸ್ತಿ ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗೆಳಿಗೆ ಸೂಚನೆ ನೀಡಿದ್ದಾರೆ.  ಭಾರೀ ಮಳೆಯಾಗುತ್ತಿರುವುದರಿಂದ ಜಲಾನಯನ ಪ್ರದೇಶಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.
ಆಂದ್ರಪ್ರದೇಶದ ರಾಯಲ್‍ಸೀಮೆ ಪ್ರದೇಶದಲ್ಲೂ ಬೆಳಗ್ಗೆಯಿಂದ ವರುಣನ ಆರ್ಭಟ ಆರಂಭವಾಗಿದೆ.

Chennai-04

ತಮಿಳುನಾಡು, ಮತ್ತು ಆಂಧ್ರಪ್ರದೇಶದಲ್ಲಿ ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ನಿನ್ನೆಯೇ ಎಚ್ಚರಿಕೆ ನೀಡಲಾಗಿತ್ತು. ಸಮುದ್ರದಲ್ಲಿದ್ದ ಮೀನುಗಾರರು ತಕ್ಷಣ ಹಿಂದಿರುಗುವಂತೆ ಸೂಚಿಸಲಾಗಿತ್ತು.  ತಮಿಳುನಾಡಿನ ನಾಗಪಟ್ಟಣಂನಲ್ಲಿ ಡಿ.2ರಂದು ನಾಡಾ ಚಂಡಮಾರುತ ಹಾದುಹೋದ ಬಳಿಕ ಅಪ್ಪಳಿಸಿರುವ ಎರಡನೇ ಚಂಡಮಾರುತ ಇದಾಗಿದೆ.  ವಾರ್ದಾ ಚಂಡಮಾರುತ ಗಂಟೆಗೆ ಸುಮಾರು 150 ಕಿ.ಮೀ.ವೇಗದಲ್ಲಿ ಬೀಸುತ್ತಿದ್ದು, ಹಲವೆಡೆ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Chennai-02
ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಐಟಿ ಉದ್ಯೋಗಿಗಳು ಕಚೇರಿಗೆ ತೆರಳದೇ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.  ಚಂಡಮಾರುತದಿಂದ ಉದ್ಭವಿಸಬಹುದಾದ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಕರಾವಳಿ ಪ್ರದೇಶಗಳಲ್ಲಿ ಎನ್‍ಡಿಆರ್ ಮತ್ತು ರಕ್ಷಣಾಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin