ತಮಿಳುನಾಡಿನ 21ನೇ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಪ್ರಮಾಣ

ಈ ಸುದ್ದಿಯನ್ನು ಶೇರ್ ಮಾಡಿ

palanisamy-01

ಚೆನ್ನೈ,ಫೆ.16-ಭಾರೀ ಕುತೂಹಲ ಕೆರಳಿಸಿದ್ದ ತಮಿಳುನಾಡಿನ 21ನೇ ಮುಖ್ಯಮಂತ್ರಿಯಾಗಿ ಹಾಲಿ ಲೋಕೋಪಯೋಗಿ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಆಪ್ತ ಎಡಪ್ಪಾಡಿ ಕೆ.ಪಳನಿಸ್ವಾಮಿ ಗುರುವಾರ ಅಧಿಕಾರ ಸ್ವೀಕರಿಸುವುದರೊಂದಿಗೆ 15 ದಿನಗಳ ರಾಜಕೀಯ ಪ್ರಹಸನಕ್ಕೆ ತೆರೆ ಎಳೆದಿದ್ದಾರೆ.  ತಮಿಳುನಾಡು ಸರ್ಕಾರ ರಚನೆಯಲ್ಲಿ ಕೊನೆಗೂ ಶಶಿಕಲಾ ನಟರಾಜನ್ ಕೈ ಮೇಲಾಗಿರುವುದು ಸ್ಪಷ್ಟವಾಗಿದೆ.   ಗುರುವಾರ ಸಂಜೆ 4.30ಕ್ಕೆ ಚೆನ್ನೈನಲ್ಲಿರುವ ರಾಜಭವನದ ಮುಂಭಾಗ ಕೆ.ಫಳನಿಸ್ವಾಮಿಗೆ ಉಸ್ತುವಾರಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅಧಿಕಾರ ಗೌಪ್ಯತೆ ಬೋಧಿಸಿದರು. ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅವರೊಂದಿಗೆ ಎಐಎಡಿಎಂಕೆ ಪಕ್ಷದ 30 ಮಂದಿ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಕೊನೆಯ ಕ್ಷಣದವರೆಗೆ ಮುಖ್ಯಮಂತ್ರಿ ಪಟ್ಟ ಏರಲು ಕಸರತ್ತು ನಡೆಸಿದ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಆಸೆ ಕೈಗೂಡಲಿಲ್ಲ. ಬಹುಮತ ಸಾಬೀತುಪಡಿಸಲು ನೂತನ ಮುಖ್ಯಮಂತ್ರಿಗೆ ರಾಜ್ಯಪಾಲರು 15 ದಿನಗಳ ಗಡುವು ನೀಡಿದ್ದಾರೆ.   ಎಡಪ್ಪಾಡಿ ಪಳನಿಸ್ವಾಮಿ ಅವರೊಂದಿಗೆ ಶಾಸಕರಾದ ಸಂಗೊಟ್ಟಿಯನ್, ಜಯಕುಮಾರ್, ಅನ್ಬಳಗಂ, ಸಂಪತ್, ಕುರುಪ್ಪನ್, ಮಣಿಯನ್, ರಾಧಾಕೃಷ್ಣನ್, ಉದಯಕುಮಾರ್, ವೀರಮಣಿ, ಮಣಿಕಂಠನ್, ಶ್ರೀನಿವಾಸನ್, ರಾಜಲಕ್ಷ್ಮಿ, ತಂಗುಮಣಿ, ಕೆ.ರಾಜು ಸೇರಿದಂತೆ ಒಟ್ಟು 30 ಮಂದಿ ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ಸಚಿವ ಸಂಪುಟಕ್ಕೆ ಸೇರ್ಪಡೆಯಾದವರಲ್ಲಿ ಬಹುತೇಕ ಶಶಿಕಲಾ ಬಣಕ್ಕೆ ಸೇರಿರುವುದು ವಿಶೇಷ ಎನಿಸಿದೆ. ಇದರೊಂದಿಗೆ ಕಳೆದ 10 ದಿನಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿದ್ದ ರಾಜಕೀಯ ಹೈಡ್ರಾಮ ಕೊನೆಗೊಂಡಿದೆ.   ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಪಳನಿಸ್ವಾಮಿ ಮುಂದೆ ಬಹುಮತ ಸಾಬೀತುಪಡಿಸಬೇಕಾದ ಅಗ್ನಿಪರೀಕ್ಷೆ ಎದುರಾಗಿದೆ.   ರಾಜ್ಯಪಾಲರಿಗೆ ನೀಡಿರುವ ಪಟ್ಟಿಯಲ್ಲಿ ತಮಗೆ 124 ಮಂದಿ ಶಾಸಕರ ಬೆಂಬಲಿವಿದೆ ಎಂದು ಹೇಳಿಕೊಂಡಿದ್ದಾರೆ. ವಾಸ್ತವವಾಗಿ ಬಹುಮತ ಸಾಬೀತುಪಡಿಸುವೇ ದಿನವೇ ಯಾರು ಯಾರ ಕಡೆ ಎಂಬುದು ರುಜುವಾತಾಗಲಿದೆ.

ಸದ್ಯಕ್ಕೆ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಬಹುತೇಕ ಶಾಸಕರು ಪಳನಿ ಸ್ವಾಮಿಗೆ ನಿಷ್ಠೆ ತೋರಿದ್ದು ಕುದುರೆ ವ್ಯಾಪಾರ ನಡೆಯುವ ಸಾಧ್ಯತೆಗಳಿಲ್ಲ. ಪನ್ನೀರ್ ಸೆಲ್ವಂ ಪಕ್ಷದ ಶಾಸಕರನ್ನು ಸೆಳೆಯುವ ಕಸರತ್ತಿನಿಂದ ದೂರು ಉಳಿದಿದ್ದಾರೆ.

ಸರ್ಕಾರ ರಚನೆಗೆ ಆಹ್ವಾನ:

ಇದಕ್ಕೂ ಮುನ್ನ ಬುಧವಾರ ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿದ ಪಳನಿಸ್ವಾಮಿ ತಮಗೆ 124 ಮಂದಿ ಶಾಸಕರ ಬೆಂಬಲವಿದೆ ಎಂಬ ಸಹಿವುಳ್ಳ ಪತ್ರ ನೀಡಿದ್ದರು. ಈ ಪತ್ರದ ಸತ್ಯಸತ್ಯತೆಯನ್ನು ಕಾನೂನು ತಜ್ಞರೊಂದಿಗೆ ಪರಿಶೀಲನೆ ನಡೆಸಿದ ರಾಜ್ಯಪಾಲರು ತದನಂತರ 11.30ಕ್ಕೆ ರಾಜಭವನಕ್ಕೆ ಆಗಮಿಸುವಂತೆ ಸೂಚಿಸಿದರು. ಬಳಿಕ ಸರ್ಕಾರ ರಚನೆಗೆ ಅಧಿಕೃತವಾಗಿ ಆಹ್ವಾನ ನೀಡಿದರು.

ಪಳನಿ ಬಣದ ಸಂಭ್ರಮಾಚರಣೆ :

ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡುತ್ತಿದ್ದಂತೆ ರಾಜಭವನದ ಹೊರಗೆ ಎಐಎಡಿಎಂಕೆ ಕಾರ್ಯಕರ್ತರು ಮತ್ತು ಬೆಂಬಲಿಗರು ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು. ಇನ್ನೊಂದೆಡೆ, ಪನ್ನೀರ್ ಸೆಲ್ವಂ ಬಣದ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಗುಂಪಿನ ಬೆಂಬಲ ಸಾಬೀತುಪಡಿಸಲು ಸಮಯ ನೀಡುವಂತೆ ಮನವಿ ಮಾಡಿದ್ದರು.

ರಾಜ್ಯಪಾಲರ ಜಾಣ ನಡೆ :

ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೇಂದ್ರದಿಂದ ರಾಜ್ಯಪಾಲರಿಗೆ ನಿರ್ದೇಶನ ಬಂದಿತ್ತು ಎನ್ನಲಾಗಿದೆ. ಪದೇ ಪದೇ ವಿಳಂಬ ಮಾಡಿದರೆ ಜನತೆ ಆಕ್ರೋಶಗೊಂಡು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಸಾಧ್ಯತೆ ಇದೆ. ಹೀಗಾಗಿ ವಿಳಂಬ ಮಾಡಿದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂಬ ಕಾರಣಕ್ಕೆ ರಾಜ್ಯಪಾಲರು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಕಳೆದ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿದ ಯಡಪ್ಪಾಡಿ ಪಳನಿಸ್ವಾಮಿ ತಮಗೆ 124 ಮಂದಿ ಶಾಸಕರ ಬೆಂಬಲವಿದೆ ಎಂಬ ಪತ್ರವನ್ನು ನೀಡಿದ್ದರು. ಸರ್ಕಾರ ರಚನೆಗೆ ಅವಕಾಶ ನೀಡುವಂತೆಯೂ ನಿನ್ನೆ ರಾತ್ರಿಯೂ ಸಹ ಮನವಿ ಮಾಡಿದ್ದರು.

ರಾಜ್ಯದಲ್ಲಿ ಅಮ್ಮನ ಆಸೆಯಂತೆ ಪಕ್ಷವನ್ನು ಉಳಿಸಬೇಕು. ಯಾವುದೇ ಕಾರಣಕ್ಕೂ ಆಮಿಷಗಳಿಗೆ ಬಲಿಯಾಗದೆ ಶಾಸಕರು ತಮ್ಮ ನಿರ್ಧಾರವನ್ನು ಬದಲಿಸಬಾರದು. ಪಳನಿಸ್ವಾಮಿಗೆ ನಿಮ್ಮ ನಿಷ್ಠೆ ಇರಲಿ ಎಂದು ಸದ್ಯಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಶಾಸಕರಿಗೆ ಸೂಚಿಸಿದ್ದರು. ಹೀಗಾಗಿ ಬಹುತೇಕ ಶಾಸಕರು ಪನ್ನೀರ್ ಸೆಲ್ವಂ ಬದಲಿಗೆ ಪಳನಿ ಸ್ವಾಮಿ ನಾಯಕತ್ವಕ್ಕೆ ಜೈ ಎಂದಿದ್ದಾರೆ. ತಮಿಳುನಾಡಿನ ವಿಧಾನಸಭೆಯಲ್ಲಿ ಒಟ್ಟು 234 ಮಂದಿ ಸದಸ್ಯರಿದ್ದಾರೆ. ಯಾವುದೇ ಸರ್ಕಾರ ಬಹುಮತ ಸಾಬೀತುಪಡಿಸಲು ಸರಳ ಬಹುಮತವಾಗಿ 118 ಸದಸ್ಯರ ಬೆಂಬಲ ಬೇಕು. ಎಐಎಡಿಎಂಕೆ 135 ಶಾಸಕರನ್ನು ಹೊಂದಿದೆ. ಇದರಲ್ಲಿ ಪನ್ನೀರ್ ಸೆಲ್ವಂ ಗುಂಪಿನಲ್ಲಿ 11 ಮಂದಿ ಶಾಸಕರು ಗುರುತಿಸಿಕೊಂಡಿದ್ದಾರೆ. ಉಳಿದಂತ 124 ಮಂದಿ ಶಾಸಕರು ಪಳನಿಸ್ವಾಮಿ ಗುಂಪಿನಲ್ಲಿದ್ದಾರೆ.

ಪರಪ್ಪನ ಅಗ್ರಹಾರಕ್ಕೆ ಭೇಟಿ..?:

ಯಡಪ್ಪಾಡಿ ಪಳನಿಸ್ವಾಮಿ ಇಂದು ಸಂಜೆ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ತಮ್ಮ ಗಾಡ್ ಮದರ್ ಶಶಿಕಲಾ ಅವರ ಆಶೀರ್ವಾದ ಪಡೆಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin