ತಮಿಳುನಾಡಿನ ಸಿಎಂ ಪಟ್ಟಕ್ಕೇರಲು ತಯಾರಾಗಿರುವ ಶಶಿಕಲಾಗೆ ಕಾನೂನು ಕಂಟಕ

ಈ ಸುದ್ದಿಯನ್ನು ಶೇರ್ ಮಾಡಿ

Sasikala-Natarajan-007

ನವದೆಹಲಿ,ಫೆ.6- ತಮಿಳುನಾಡಿನ ನಿಯೋಜಿತ ಮುಖ್ಯಮಂತ್ರಿ ಚಿನ್ನಮ್ಮ ಖ್ಯಾತಿಯ ಶಶಿಕಲಾ ನಟರಾಜನ್ ಅವರಿಗೆ ಆರಂಭದಲ್ಲೇ ದೊಡ್ಡ ಕಾನೂನು ಕಂಟಕವೊಂದು ಎದುರಾಗಿದೆ.
ಆದಾಯಕ್ಕಿಂತ ಅತ್ಯಧಿಕ ಆಸ್ತಿ ಹೊಂದಿದ ಪ್ರಕರಣದ ಸಂಬಂಧ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಮತ್ತು ಶಶಿಕಲಾ ನಟರಾಜನ್   ಅವರನ್ನು ಖುಲಾಸೆಗೊಳಿಸಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ ಇನ್ನು ಒಂದು ವಾರದೊಳಗೆ ತೀರ್ಪು ನೀಡಲಿದೆ. ಶಶಿಕಲಾ ಅವರ ರಾಜಕೀಯ ಭವಿಷ್ಯವೂ ಇದರೊಂದಿಗೆ ನಿರ್ಧಾರವಾಗಲಿದೆ.
ನ್ಯಾಯಮೂರ್ತಿಗಳಾದ ಪಿ.ಸಿ.ಘೋಷ್ ಮತ್ತು ಅಮಿತಾವ್‍ರಾಯ್ ಅವರನ್ನೊಳಗೊಂಡ ವಿಭಾಗೀಯ ಪೀಠ ಒಂದು ವಾರದಲ್ಲಿ ಈ ಕುರಿತು ತೀರ್ಪು ನೀಡಲಿದ್ದು , ಒಂದು ವೇಳೆ ಆದೇಶವು ಶಶಿಕಲಾ ಅವರ ವಿರುದ್ಧವಾಗಿ ಹೊರಬಿದ್ದರೆ ಅವರ ರಾಜಕೀಯ ಭವಿಷ್ಯ ಅತಂತ್ರವಾಗಲಿದೆ.

66.65 ಕೋಟಿ ಆದಾಯದ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಹೈಕೋರ್ಟ್ ಜಯಾ ಮತ್ತು ಶಶಿಕಲಾ ಅವರನ್ನು ಆರೋಪದಿಂದ ಮುಕ್ತಗೊಳಿಸಿತ್ತು. ಉಚ್ಛ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದೆ.   ಸುಪ್ರೀಂಕೋರ್ಟ್‍ನಲ್ಲಿಂದು ಈ ಪ್ರಕರಣವನ್ನು ಉಲ್ಲೇಖಿಸಿದ ಕರ್ನಾಟಕ ಸರ್ಕಾರದ ಪರ ವಕೀಲ ದುಷ್ಯಂತ್ ದವೆ, ಮೂರು ತಿಂಗಳಿನಿಂದ ಈ ಪ್ರಕರಣ ಕುರಿತು ತೀರ್ಪು ಪ್ರಕಟವಾಗಿಲ್ಲ. ಆದ್ದರಿಂದ ಆದಷ್ಟು ಬೇಗ ಈ ಬಗ್ಗೆ ಆದೇಶ ಹೊರಡಿಸಬೇಕೆಂದು ವಾದ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಭಾಗೀಯ ಪೀಠವು ಇನ್ನು ಒಂದು ವಾರದೊಳಗೆ ಈ ಮೇಲ್ಮನವಿ ಅರ್ಜಿಗಳ ಕುರಿತು ತೀರ್ಪು ನೀಡುವುದಾಗಿ ತಿಳಿಸಿತು.   ಪ್ಲೆಸೆಂಟ್ ಸ್ಟೇ ಹೋಟೆಲ್ಸ್ ಪ್ರಕರಣವನ್ನು ಹೊರತುಪಡಿಸಿ ಇತರ ಎಲ್ಲ ಮೂರು ಪ್ರಕರಣಗಳಲ್ಲಿ ಜಯಲಲಿತಾ ಅವರೊಂದಿಗೆ ಶಶಿಕಲಾ ಶಿಕ್ಷೆಗೆ ಗುರಿಯಾಗಿದ್ದರು. ಈ ಪ್ರಕರಣಗಳಲ್ಲಿ ಖುಲಾಸೆಗೊಂಡ ನಂತರ ರಾಜ್ಯ ಸರ್ಕಾರವು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin