ತಮಿಳುನಾಡು ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

beluru

ಬೇಲೂರು, ಸೆ.15- ತಮಿಳುನಾಡಿನ ಕನ್ನಡಿಗರ ಮೇಲೆ ನಡೆದಿರುವ ಹಲ್ಲೆ ಹಾಗೂ ವಾಹನಗಳನ್ನು ಸುಟ್ಟು ಹಾಕಿರುವುದನ್ನು ಖಂಡಿಸಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.ಹೊಯ್ಸಳ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಜಯರಾಂ ಮಾತನಾಡಿ, ತಮಿಳಿಗರು ಕನ್ನಡಿಗರ ಮೇಲೆ ಹಲ್ಲೆ ದೌರ್ಜನ್ಯ ನಡೆಸುತ್ತಿರುವುದು ಸರಿಯಲ್ಲ. ಕನ್ನಡಿಗರಾದ ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ.

ಕನ್ನಡಿಗರ ಶಕ್ತಿ ಏನು ಎಂಬುದನ್ನು ಮುಂದಿನ ದಿನಗಳಲ್ಲಿ ತೋರಿಸಬೇಕಾಗುತ್ತದೆ. ಮುಖ್ಯಮಂತ್ರಿಗಳು ಸುಪ್ರೀಂ ಕೋರ್ಟ್‍ನ ಆದೇಶವನ್ನು ಪಾಲಿಸಬಾರದು. ನಮಗೆ ಕುಡಿಯುವುದಕ್ಕೆ ನೀರಿಲ್ಲ. ಇನ್ನು ತಮಿಳುನಾಡಿಗೆ ಎಲ್ಲಿಂದ ನೀರು ಬಿಡಲು ಸಾಧ್ಯ ಎಂದು ಪ್ರಶ್ನಿಸಿದರು.ಮಾಜಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಕರ್ನಾಟಕದಲ್ಲಿ ಸಾಕಷ್ಟು ತಮಿಳು ಭಾಷಿಕರಿದ್ದಾರೆ. ಆದರೆ ನಾವುಗಳು ಅವರಿಗೆ ಯಾವುದೇ ತೊಂದರೆ ಮಾಡಿಲ್ಲ. ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ ತಕ್ಷಣವೆ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಕರ್ನಾಟಕದಲ್ಲಿರುವ ತಮಿಳರ ಸ್ಥಿತಿಗೂ ಕುತ್ತು ಬರುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಹೊಯ್ಸಳ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ರಘು, ಚಂದ್ರು, ಕತ್ತಲೆ ಕೃಷ್ಣಮೂರ್ತಿ, ಮಲ್ಲೇಶ, ನಾಗರಾಜು, ಪ್ರವೀಣ, ಧರ್ಮ ಇನ್ನಿತರರಿದ್ದರು.

 

 

► Follow us on –  Facebook / Twitter  / Google+

 

 

Facebook Comments

Sri Raghav

Admin