ತಮಿಳುನಾಡು ಪಾಲಿನ ನೀರು ಬಿಡಿ : ಫಾಲಿನಾರಿಮನ್ ವಾದ

ಈ ಸುದ್ದಿಯನ್ನು ಶೇರ್ ಮಾಡಿ

S-Nariman

ಬೆಂಗಳೂರು, ಆ.25– ಕೆಆರ್ಎಸ್ನಿಂದ 50 ಟಿಎಂಸಿ ನೀರು ಬಿಡುವಂತೆ ತಮಿಳುನಾಡಿನಿಂದ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗಿರುವ ವಿಶೇಷ ಅರ್ಜಿ ಸಂಬಂಧ ಕರ್ನಾಟಕದ ಕಾನೂನು ತಜ್ಞರ ತಂಡದ ಮುಖ್ಯಸ್ಥ ಫಾಲಿನಾರಿಮನ್ಅವರ ಜೊತೆ ಇಂದು ಸಿಎಂ ಸಿದ್ದರಾಮಯ್ಯ ಇಂದು ದೂರವಾಣಿ ಮೂಲಕ ಮಾತುಕತೆ ನಡೆಸಿದರು.  ತಮಿಳುನಾಡು ಸರ್ಕಾರ 50 ಟಿಎಂಸಿ ನೀರಿಗಾಗಿ ತಕರಾರು ಅರ್ಜಿ ಸಲ್ಲಿಸಿದೆ. ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಹಿನ್ನೆಲೆಯಲ್ಲಿ ತಮಿಳುನಾಡು ಪಾಲಿನ ನೀರನ್ನು ಕರ್ನಾಟಕ ಹರಿಯಬಿಡಬೇಕು. ಇಲ್ಲದೇ ಹೋದರೆ ಸುಪ್ರೀಂಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ಎದುರಿಸಬೇಕಾಗುತ್ತದೆ ಎಂದು ನಾರಿಮನ್ ದೂರವಾಣಿಯಲ್ಲಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಕರ್ನಾಟಕದ ಜಲಾಶಯಗಳ ಸ್ಥಿತಿ ಉತ್ತಮವಾಗಿಲ್ಲ. ಬೆಳೆ ಒಣಗಿ ಹೋಗಿವೆ. ನೀರು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ ಎಂದು ಸಿಎಂ ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸಿದರು.

ಇದಕ್ಕೆ ಕಿವಿಗೊಡದ ನಾರಿಮನ್ ಅವರು, ತಮಿಳುನಾಡಿನ ತಕರಾರು ಅರ್ಜಿಯಿಂದ ಕಾನೂನು ಸಮಸ್ಯೆ ಎದುರಾಗುತ್ತದೆ. ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮುಂದೆ ಸಮರ್ಥಿಸಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ನೀರನ್ನು ಬಿಡುಗಡೆ ಮಾಡಿ ಎಂದು ನಾರಿಮನ್ ಒತ್ತಡ ಹೇರಿದ್ದಾರೆ. ಇಲ್ಲದೇ ಹೋದರೆ ಪ್ರಕರಣದಲ್ಲಿ ನಾವು ಜಯಗಳಿಸುವುದು ಕಷ್ಟವಾಗುತ್ತದೆ ಎಂದಾಗ, ಮುಖ್ಯಮಂತ್ರಿಯವರು ಶತಾಯಗತಾಯ ನಾವು ಗೆಲ್ಲಲೇಬೇಕು. ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಿ, ನಮ್ಮ ರಾಜ್ಯದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ನಾಳೆ ದೆಹಲಿಗೆ ಬಂದು ನಿಮ್ಮನ್ನು ಭೇಟಿ ಮಾಡಿ ಜಲಾಶಯಗಳ ವಾಸ್ತವ ಸ್ಥಿತಿಗತಿಗಳನ್ನು ವಿವರಿಸಲಿದ್ದಾರೆ. ಅದಕ್ಕೆ ತಕ್ಕಹಾಗೆ ದಾಖಲೆಗಳು ಮತ್ತು ಮಾಹಿತಿಯನ್ನು ಒದಗಿಸಲಿದ್ದಾರೆ. ನಮ್ಮ ಜಲಾಶಯಗಳ ಪರಿಸ್ಥಿತಿಗಳ ಬಗ್ಗೆ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡಿ ಎಂದು ಸಿಎಂ ನಾರೀಮನ್ ಅವರಿಗೆ ಸೂಚಿಸಿದರು.

ಸುಮಾರು ಮೂರ್ನಾಂಲ್ಕು ನಿಮಿಷಗಳ ಕಾಲ ನಡೆದ ಸಂಭಾಷಣೆಯಲ್ಲಿ ನಾರಿಮನ್ ಅವರು ರಾಜ್ಯ ಸರ್ಕಾರದ ವಾದವನ್ನು ಆಲಿಸದೆ ನೀರು ಬಿಡುಗಡೆ ಮಾಡುವಂತೆ ಒತ್ತಡ ಹೇರುತ್ತಲೇ ಇದ್ದರು. ಮುಖ್ಯಮಂತ್ರಿ ಅವರು ಮಾಧ್ಯಮಗಳ ಮುಂದೆ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದರಿಂದ ಎಲ್ಲವನ್ನೂ ವಿವರವಾಗಿ ಮಾತನಾಡಲು ಸಾಧ್ಯವಾಗದೆ ಕೆಲ ನಿಮಿಷಗಳಲ್ಲೇ ಮತ್ತೆ ಕರೆ ಮಾಡುತ್ತೇನೆ ಎಂದು ಸಂಪರ್ಕ ಕಡಿತ ಮಾಡಿದರು.  ಜಲಸಂಪನ್ಮೂಲ ಇಲಾಖೆಯ ಮೂರು ವರ್ಷಗಳ ಸಾಧನೆಯ ಪುಸ್ತಕ ಬಿಡುಗಡೆ ಮಾಡಿದ ನಂತರ ಆಪ್ತ ಸಮಾಲೋಚನಾ ಕೋಣೆಗೆ ತೆರಳಿದ ಸಿದ್ದರಾಮಯ್ಯ ಅವರು ಅಲ್ಲಿಂದಲೇ ದೂರವಾಣಿಯಲ್ಲಿ ನಾರಿಮನ್ ಅವರ ಜತೆ ವಿವರವಾಗಿ ಚರ್ಚಿಸಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎನ್ನಲಾಗಿದೆ.

► Follow us on –  Facebook / Twitter  / Google+

 

Facebook Comments

Sri Raghav

Admin