ತಮಿಳುನಾಡು ಬೆಸ್ತರು-ಶ್ರೀಲಂಕಾ ನೌಕಾಪಡೆ ನಡುವೆ ತೀವ್ರಗೊಂಡ ಘರ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Tamil-Fishermen-Srilanka

ರಾಮೇಶ್ವರ, ಡಿ.20-ಭಾರತ ಮತ್ತು ಶ್ರೀಲಂಕಾ ಜಲಗಡಿ ಪ್ರದೇಶದಲ್ಲಿ ತಮಿಳುನಾಡು ಮೀನುಗಾರರು ಮತ್ತು ದ್ವೀಪರಾಷ್ಟ್ರದ ನೌಕಾಪಡೆ ನಡುವೆ ಸಂಘರ್ಷ ತೀವ್ರಗೊಂಡಿದೆ. ದ್ವೀಪರಾಷ್ಟ್ರದ ನೆಡುನ್‍ತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ಏಳು ತಮಿಳು ಬೆಸ್ತರನ್ನು ನೌಕಾ ಸಿಬ್ಬಂದಿ ಬಂಧಿಸಿದ್ದಾರೆ.  ಪುದುಕೊಟ್ಟೈನ ಜಗದಪಟ್ಟಿಣಂನ ಬೆಸ್ತರು ಮತ್ತು ಅವರ ಎರಡು ದೋಣಿಗಳನ್ನು ವಶಕ್ಕೆ ತೆಗೆದುಕೊಂಡ ನೌಕಾಪಡೆ ಅವರನ್ನು ಶ್ರೀಲಂಕಾ ಕಂಗನೈಸೆಂಧುರೈ ಬಂದರಿಗೆ ಕರೆದೊಯ್ದಿದೆ ಎಂದು ಪುದುಕೊಟ್ಟೈ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2,500 ಬೆಸ್ತರನ್ನು ಓಡಿಸಿದ ಸಿಬ್ಬಂದಿ :

ಡಿ.14ರಂದು ಕಚ್ಚತೀವು ಕರಾವಳಿ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಯಾಂತ್ರಿಕೃತ ದೋಣಿಗಳ ಬಲೆಗಳನ್ನು ಕತ್ತರಿಸಿದ ಶ್ರೀಲಂಕಾ ನೌಕಾ ಸಿಬ್ಬಂದಿ ಮೀನುಗಾರಿಕೆಯಲ್ಲಿ ತೊಡಗಿದ್ದ 2,500ಕ್ಕೂ ಹೆಚ್ಚು ಬೆಸ್ತರನ್ನು ಶ್ರೀಲಂಕಾ ಬೆನ್ನಟ್ಟಿ ಚದುರಿಸಿರುವ ಘಟನೆ ನಡೆದಿತ್ತು.  ರಾಮೇಶ್ವರಂ ಮೀನುಗಾರರು ನಿನ್ನೆ 583 ದೋಣಿಗಳಲ್ಲಿ ಕಚ್ಚತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದರು. ಅಗ ಅಲ್ಲಿಗೆ ಧಾವಿಸಿದ ನೌಕಾ ಸಿಬ್ಬಂದಿ 50ಕ್ಕೂ ಹೆಚ್ಚು ದೋಣಿಗಳನ್ನು ಸುತ್ತುವರಿದು ಮೀನುಗಾರಿಕೆ ಬಲೆಗಳನ್ನು ಕತ್ತರಿಸಿದರು ಹಾಗೂ ಅಲ್ಲಿಂದ ಹಿಂದಿರುಗುವಂತೆ ಬೆದರಿಸಿದರು. ಇದಕ್ಕೆ ಮೀನುಗಾರರು ವಿರೋಧ ವ್ಯಕ್ತಪಡಿಸಿದಾಗ ದೌರ್ಜನ್ಯ ನಡೆಸಿದ ಸಿಬ್ಬಂದಿ ಮೀನುಗಾರರನ್ನು ಬೆನ್ನಟ್ಟಿ ಚದುರಿಸಿದ್ದರು.  ಕಳೆದ ಕೆಲವು ದಿನಗಳಿಂದ ರಾಮೇಶ್ವರ ಕರಾವಳಿ ಪ್ರದೇಶದಲ್ಲಿ ಶ್ರೀಲಂಕಾ ನೌಕಾಪಡೆ ತಮಿಳುನಾಡು ಬೆಸ್ತರಿಗೆ ಮೀನುಗಾರಿಕೆಗೆ ಅಡ್ಡಿಯುಂಟು ಮಾಡಿ ದೋಣಿಗಳು ಮತ್ತು ಬಲೆಗಳಿಗೆ ಹಾನಿ ಮಾಡುತ್ತಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin