ತಮಿಳುನಾಡು ಮೀನುಗಾರರ ಮೇಲೆ ಹಲ್ಲೆ ನಡೆಸಿ, ದೋಣಿ ಮುಳುಗಿಸಿ ಬಲೆ ಹರಿದು ಹಾಕಿದ ಲಂಕಾ ನೌಕಾಪಡೆ
ರಾಮೇಶ್ವರಂ, ಅ.6- ಧನುಷ್ಕೋಡಿ ಜಲಪ್ರದೇಶದಲ್ಲಿ ಶ್ರೀಲಂಕಾ ನೌಕಾ ಸಿಬ್ಬಂದಿ ಇಂದು ಬೆಳಿಗ್ಗೆ ತಮಿಳುನಾಡು ಮೀನುಗಾರರ ಮೇಲೆ ದಾಳಿ ಯಾಂತ್ರೀಕೃತ ನೌಕೆಯೊಂದನ್ನು ಮುಳುಗಿಸಿ, ಅಲ್ಲದೇ ಹಲವು ನಾವೆಗಳನ್ನು ಜಖಂಗೊಳಿಸಿ, ಮೀನುಗಾರಿಕೆ ಬಲೆಗಳನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದ ಕುಪಿತಗೊಂಡಿರುವ ಮೀನುಗಾರರು ಶ್ರೀಲಂಕಾ ನೌಕಾಪಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದ್ವೀಪರಾಷ್ಟ್ರದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಈ ಕೃತ್ಯ ನಡೆದಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಭಾರತ-ಶ್ರೀಲಂಕಾ ಜಲಗಡಿಯ ರಾಮೇಶ್ವರಂನ ಧನುಷ್ಕೋಡಿ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಅಲ್ಲಿಗೆ ಆಗಮಿಸಿ ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ತಮಿಳುನಾಡು ಬೆಸ್ತರ ಮೇಲೆ ಕಲ್ಲುಗಳು ಮತ್ತು ಬಾಟಲ್ಗಳನ್ನು ಎಸೆದರು.
ಇದರಿಂದ 2,000ಕ್ಕೂ ಹೆಚ್ಚು ಮೀನುಗಾರರು ಪಲಾಯನ ಮಾಡಿ ಕಡಲ ಕಿನಾರೆಗೆ ಹಿಂದಿರುಗಿದರು. ಸಿಬ್ಬಂದಿಯ 70ಕ್ಕೂ ಹೆಚ್ಚು ದೋಣಿಗಳಲ್ಲಿದ್ದ ಮೀನುಗಾರಿಕೆ ಬಲೆಗಳನ್ನು ಕತ್ತರಿಸಿ ಹಾಕಿದ್ದಾರೆ. ನೌಕೆಯು ಡಿಕ್ಕಿ ಹೊಡೆದು ಒಂದು ಯಾಂತ್ರೀಕೃತ ದೋಣಿ ಮುಳುಗಡೆಯಾಗಿದೆ ಎಂದು ತಮಿಳುನಾಡು ಮ್ಯಾಕನೈಸ್ಡ್ ಫಿಷರ್ಮೆನ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸೆಸುರಾಜ್ ಆರೋಪಿಸಿದ್ದಾರೆ. ನೌಕಾ ಪಡೆ ದಾಳಿಯಿಂದ ದೋಣಿಗಳ ಗಾಳಿ ಪರದೆಗಳು ಹಾಳಾಗಿದೆ ಎಂದು ಅವರು ದೂರಿದ್ದಾರೆ.
ಈ ಪ್ರಾಂತ್ಯದ 437 ಯಾಂತ್ರೀಕೃತ ದೋಣಿಗಳು ಇಂದು ಮುಂಜಾನೆ ಈ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿದ್ದಾಗ, ಶ್ರೀಲಂಕಾ ಕರಾವಳಿ ರಕ್ಷಣಾಪಡೆ ಸಿಬ್ಬಂದಿ ಈ ದಾಳಿ ನಡೆಸಿ ಭಾರೀ ನಷ್ಟ ಉಂಟು ಮಾಡಿದೆ ಎಂದು ಆರೋಪಿಸಲಾಗಿದೆ.
► Follow us on – Facebook / Twitter / Google+