ತಮಿಳುನಾಡು ರೈತರ ಬದ್ಧತೆ ಮೆಚ್ಚಬೇಕು, ನಮ್ಮ ಕೀಳರಿಮೆ ಚುಚ್ಚಬೇಕು

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಬೆಂಗಳೂರು, ಆ.26-ತಮಿಳುನಾಡು ರೈತರ, ಅಲ್ಲಿನ ಜನರ ಬದ್ಧತೆಯನ್ನು ಮೆಚ್ಚಲೇಬೇಕು. ಆ ಬದ್ಧತೆ ನಮಗಿಲ್ಲವಲ್ಲ ಎಂಬ ಕೀಳರಿಮೆ ನಮ್ಮನ್ನು ಚುಚ್ಚಲೇಬೇಕು. ಕಳೆದ ಮೂರು ದಶಕಗಳಿಂದ ಕಾವೇರಿ ನೀರಿಗಾಗಿ ಬದ್ಧ ವೈರಿಗಳಂತೆ ಹೋರಾಡುತ್ತ ಬಂದಿದ್ದೇವೆ. ಕಾನೂನು ಹೋರಾಟವನ್ನು ನಡೆಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಜಲಾಶಯದಲ್ಲಿ ನೀರಿನ ಕೊರತೆ ಇದೆ. ತಮಿಳುನಾಡು ಜಲಾನಯನ ಪ್ರದೇಶಕ್ಕೆ ನೀರಿನ ಅಗತ್ಯವಿದೆ. ಇದನ್ನು ಮನಗಂಡ ಅಲ್ಲಿನ ರೈತರು ತಮಿಳುನಾಡು ಸರ್ಕಾರದ ಯಾವುದೇ ಅನುಮತಿ ಇಲ್ಲದೆ ಸೀದಾ ನಮ್ಮ ಮುಖ್ಯಮಂತ್ರಿಗಳ ಬಳಿ ಬಂದು ನೀರು ಬಿಡಬೇಕೆಂದು ಮನವಿ ಮಾಡಿದ್ದಾರೆ. ಅದು ನಮ್ಮ ರೈತ ಸಂಘದ ಮುಖಂಡರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುತ್ತಾರೆ. ಅವರ ಬದ್ಧತೆಯನ್ನು ಮೆಚ್ಚಲೇಬೇಕು.
ನಮ್ಮ ಕಾವೇರಿ ಜಲಾಶಯದಲ್ಲಿ ನೀರಿಲ್ಲ. ನಿಜ, ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸರ್ಕಾರ ಕಾನೂನು ಹೋರಾಟವನ್ನು ಮುಂದುವರೆಸಿದೆ. ಅದಕ್ಕೆ ಪೂರಕವಾಗಿ ಅಲ್ಲಿನ ರೈತರು, ಮಾಜಿ ರಾಜಕೀಯ ಮುಖಂಡರು ತಾವೇ ಸ್ವಯಂಪ್ರೇರಿತರಾಗಿ ಕರ್ನಾಟಕಕ್ಕೆ ಆಗಮಿಸಿ ಕಾವೇರಿ ನೀರು ಪಡೆಯಲು ಮುಖ್ಯಮಂತ್ರಿಯವರಿಗೆ ಖುದ್ದು ಮನವಿ ಮಾಡಿದ್ದಾರೆ. ನಮಗೆ ವಿರೋಧವೆನಿಸಿದರೂ ಅವರ ಈ ಪ್ರಯತ್ನ ಮೆಚ್ಚಲೇಬೇಕಾದುದು.   ಇಂತಹ ಯಾವುದೇ ಪ್ರಯತ್ನವನ್ನು ನಮ್ಮ ನಾಡಿನ ರೈತರಾಗಲಿ, ರೈತ ನಾಯಕರಾಗಲಿ, ಸ್ವಯಂ ಸೇವಾ ಸಂಸ್ಥೆಗಳಾಗಲಿ, ಕನ್ನಡಪರ ಸಂಘಟನೆಗಳಾಗಲಿ, ರಾಜಕೀಯ ನಾಯಕರಾಗಲಿ ಇದುವರೆಗೂ ಮಾಡಲೇ ಇಲ್ಲ ಎಂಬ ಕೊರಗು ನಮ್ಮನ್ನು ಕಾಡಿದೆ. ಆ ನಿಟ್ಟಿನಲ್ಲಿ ಯೋಚನೆ ಕೂಡ ಮಾಡದಿರುವುದು ಅತ್ಯಂತ ದುರದೃಷ್ಟಕರ.

ಆದರೆ ತಮಿಳುನಾಡು ರೈತರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ದು ಅಲ್ಲಿನ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ನಮ್ಮ ರೈತ ಮುಖಂಡರು ಮುತುವರ್ಜಿಯಿಂದ ಮಾಡಿದರು. ಆದರೆ ಅದೇ ರೈತ ಮುಖಂಡರು ನಮ್ಮ ಜಲದ ಪರಿಸ್ಥಿತಿಯನ್ನು, ಕಾವೇರಿ ನೀರಿನ ಸಂಗ್ರಹದ ಪರಿಸ್ಥಿತಿ, ನಮ್ಮ ಸಂಕಷ್ಟದ ಪರಿಸ್ಥಿತಿಯನ್ನು ನೇರವಾಗಿ ತಮಿಳುನಾಡು ಸರ್ಕಾರಕ್ಕೆ ತಿಳಿಸುವಂತಹ ಪ್ರಯತ್ನವನ್ನು ಮಾಡಲು ಸಾಧ್ಯವೇ? ಅಂತಹ ಒಂದು ಪ್ರಯತ್ನವನ್ನು ಮಾಡುತ್ತಾರೆಯೇ?
ರೈತ ಮುಖಂಡರಾಗಲಿ, ರೈತರಾಗಲಿ, ಕನ್ನಡಪರ ಸಂಘಟನೆಗಳ ನಾಯಕರಾಗಲಿ, ಜಲಾನಯನ ಪ್ರದೇಶದಲ್ಲಿರುವ ರೈತರಾಗಲಿ ಯಾರಾದರೂ ಹೋಗಿ ತಮಿಳುನಾಡು ಮುಖ್ಯಮಂತ್ರಿಯನ್ನು ಭೇಟಿಯಾಗಿ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಸಾಧ್ಯವೇ….? ಸಾಧ್ಯವೇ ಇಲ್ಲ. ಏಕೆಂದರೆ, ಅವರು ನಮ್ಮ ರಾಜ್ಯದವರನ್ನು ನೋಡುವ ದೃಷ್ಟಿಕೋನವೇ ಬೇರೆ. ನಮ್ಮ ರಾಜ್ಯದ ಮಗಳೆಂದು ಬಾಗೀನ ಕಳುಹಿಸಿದರೆ ಸೌಜನ್ಯಕ್ಕಾದರೂ ಸ್ವೀಕರಿಸುವ ಬದಲು ಅದನ್ನು ಹಿಂತಿರುಗಿ ಕಳುಹಿಸಿದ್ದಾರ. ಚೆನ್ನೈನಲ್ಲಿ ಭಾರೀ ಪ್ರವಾಹ ಉಂಟಾದಾಗ ಲಕ್ಷಾಂತರ ಜನ ಸಂತ್ರಸ್ಥರಾದಾಗ ಕರ್ನಾಟಕದಿಂದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟರೆ ಅವುಗಳನ್ನೂ ಸಹ ವಾಪಸ್ ಕಳುಹಿಸಿದ್ದಾರೆ.

ಸಂತ್ರಸ್ಥರ ನೆರವಿಗೆ ಧಾವಿಸಿದ ವೈದ್ಯರ ತಂಡವನ್ನು ಹಿಂದಕ್ಕೆ ಕಳುಹಿಸಿದ್ದಾರೆ. ಕರ್ನಾಟಕದ ಯಾವುದೇ ನೆರವು ನಮಗೆ ಬೇಡ ಎಂದು ಖಡಾಖಂಡಿತವಾಗಿ ನಿರಾಕರಿಸಿದ್ದರು. ಆದರೂ ಇಂಥವರಿಗೆ ನಮ್ಮ ರೈತ ನಾಯಕರು ಅಲ್ಲಿನ ರೈತರನ್ನು ಕರೆತಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ಔದಾರ್ಯ ತೋರಿಸಿದ್ದಾರೆ. ಅದೇ ಔದಾರ್ಯವನ್ನು ಅವರು ತೋರಿಸಬೇಕು. ನಮ್ಮ ಸಮಸ್ಯೆಗಳನ್ನೂ ಕೂಡ ಅರ್ಥ ಮಾಡಿಕೊಳ್ಳಬೇಕು. ಆದರೆ ನಮ್ಮವರು ಅಲ್ಲಿಗೆ ಹೋಗಿ ತಮಿಳುನಾಡು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ನಮ್ಮ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಕೇವಲ ಕಾನೂನು ಹೋರಾಟವೊಂದೇ ಪರಿಹಾರವಲ್ಲ.   ನಮ್ಮ ರೈತರು, ಪ್ರತಿಪಕ್ಷಗಳ ನಾಯಕರು, ಕನ್ನಡಪರ ಸಂಘಟನೆಗಳ ಮುಖಂಡರು ತಮಿಳುನಾಡಿಗೆ ನೀರು ಬಿಡಬಾರದೆಂದು ಅಬ್ಬರಿಸಿ ಬೊಬ್ಬಿರಿಯುತ್ತಾರೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿ ದಹಿಸುತ್ತಾರೆ. ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡುತ್ತಾರೆ. ಆದರೆ ತಮಿಳುನಾಡಿಗೆ ಹೋಗಿ ಅಲ್ಲಿನ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಯಾರಾದರೂ ಮಾಡುತ್ತಾರೆಯೇ ಕಾದುನೋಡಬೇಕು.

ನಿನ್ನೆ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ತಮಿಳುನಾಡು ರೈತ ಸಂಘದ ಮುಖಂಡರನ್ನು ಮುಖ್ಯಮಂತ್ರಿಯವರಿಗೆ ಭೇಟಿ ಮಾಡಿಸಿ ಅಲ್ಲಿನ ಸಮಸ್ಯೆ ಮನವರಿಕೆ ಮಾಡಿಕೊಡುವ ಯತ್ನ ಮಾಡಿದ್ದಾರೆ.  ಅದೇ ರೀತಿ ಅವರೇ ತಮಿಳುನಾಡಿಗೆ ರೈತರ ನಿಯೋಗ ಕೊಂಡೊಯ್ದು ಇಲ್ಲಿರುವ ಸಮಸ್ಯೆಯನ್ನು ಅವರಿಗೆ ಏಕೆ ಮನವರಿಕೆ ಮಾಡಿಕೊಡಬಾರದು ಎಂಬುದು ಕಾವೇರಿ ಜಲಾನಯನ ಪ್ರದೇಶದ ರೈತರ, ಸಾರ್ವಜನಿಕರ ಪ್ರಶ್ನೆಯಾಗಿದೆ.  ಕಾವೇರಿ ಜಲಾನಯನ ಪ್ರದೇಶದಲ್ಲಿ ನಿಗದಿತವಾದ ಮಳೆಯಾಗಿಲ್ಲ. ಸಂಕಷ್ಟ ಸೂತ್ರದಂತೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ನೀರು ಬಿಟ್ಟರೆ ರಾಜ್ಯದಲ್ಲಿ ಕುಡಿಯುವ ನೀರಿಗೆ ಕಷ್ಟವಾಗುತ್ತದೆ. ಇದನ್ನು ತಮಿಳುನಾಡು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಆದರೆ ಕಾನೂನು ಹೋರಾಟಕ್ಕೆ ಮುಂದಾಗಿದೆ.

ಅವರಿಗೆ ಈ ವಿವಾದ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ನಡುವೆ ಅಲ್ಲಿನ ರೈತರು ಬಂದು ಭೇಟಿ ಮಾಡಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದು ಮಾತ್ರ ಮೆಚ್ಚುವಂತಹ ವಿಷಯ. ನಮ್ಮವರೂ ಕೂಡ ಇಂತಹ ಪ್ರಯತ್ನ ಮಾಡಿ ರಾಜ್ಯ-ರಾಜ್ಯಗಳ ನಡುವೆ ಸೌಹಾರ್ದ ವಾತಾವರಣ ಮೂಡಿಸಲಿ ಎಂಬುದು ನಮ್ಮ ಆಶಯ.

-ಕೆ.ಎಸ್.ಜನಾರ್ಧನ್

► Follow us on –  Facebook / Twitter  / Google+

Facebook Comments

Sri Raghav

Admin