ತಮ್ಮ ಕುಟುಂಬ ಮೇಲೆ ದೂರು ನೀಡಿರುವ ಹಿಂದೆ ಯಡಿಯೂರಪ್ಪ ಕೈವಾಡ : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01

ಬೆಂಗಳೂರು,ಮೇ 24- ತಮ್ಮ ಕುಟುಂಬ 20 ಸಾವಿರ ಕೋಟಿ ಅಕ್ರಮ ಆಸ್ತಿ ಗಳಿಸಿದೆ ಎಂಬ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿರುವ ಹುನ್ನಾರದ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕೈವಾಡವಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಂತಕಲ್ ಮೈನಿಂಗ್ ಹಗರಣದಲ್ಲಿ ಕುಮಾರಸ್ವಾಮಿ ಸಂಕಷ್ಟ ಎದುರಿಸುತ್ತಿದ್ದಾರೆ ಎಂಬ ಸುದ್ದಿ ಹರಡಿದೆ. ಕಾಂಗ್ರೆಸ್ ಕಾರ್ಯಕರ್ತ ವೆಂಕಟೇಶ್ ಗೌಡ ದೂರು ನೀಡಿದ್ದಾರೆ ಎಂದು ಅವರ ಹೆಸರನ್ನು ಹೇಳಲಾಗುತ್ತಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ವೆಂಕಟೇಶ್ ಗೌಡ ಕಾಂಗ್ರೆಸ್ ಕಾರ್ಯಕರ್ತನಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.


ದೂರು ನೀಡಿರುವವರ ವಿಳಾಸ ಇಲ್ಲ. ಆದರೆ ದೂರಿನ ಪ್ರತಿ ಎಲ್ಲಿ ಟೈಪ್ ಆಗಿದೆ ಎಂಬುದು ಗೊತ್ತಾಗಿದೆ. ಇದರ ಹಿಂದೆ ಬಿಜೆಪಿಯವರ ಷಡ್ಯಂತ್ರವಿದೆ ಎಂದು ಕಿಡಿಕಾರಿದರು.   ನಮ್ಮ ಮೇಲಿನ ಅಕ್ರಮ ಆಸ್ತಿ ಆರೋಪ ಪತ್ತೆ ಮಾಡಿದರೆ ಆ ಬೇನಾಮಿ ಆಸ್ತಿಯನ್ನು ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಕೊಡುತ್ತೇನೆ ಎಂದು ಸವಾಲು ಹಾಕಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಲು ಮೀನಾಮೇಷ ಎಣಿಸುತ್ತಿವೆ ಎಂದರು.   ನಾವು ಅಕ್ರಮ ಆಸ್ತಿ ಮಾಡಿದ್ದೇ ಆದರೆ ಅದನ್ನು ಪತ್ತೆ ಮಾಡಿ ನಾನು ಅದನ್ನು ರೈತರಿಗೆ ಕೊಡುತ್ತೇನೆ. ಈ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಿ. ನಮ್ಮ ಪ್ರತಿಷ್ಠೆ ಮಾಡಲು ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎರಡೂ ರಾಷ್ಟ್ರೀಯ ಪಕ್ಷಗಳು ನಮಗೆ ಬೇಡ ಎಂಬ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದೆ. ಆದರೆ ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಸಂಶಯ ಉಂಟು ಮಾಡಲು ಇಂತಹ ಕೆಲಸಗಳನ್ನು ಮಾಡಲಾಗುತ್ತಿದೆ. ಕಾಟ ಕೊಡುವುದಕ್ಕೂ ಇತಿಮಿತಿ ಇದೆ. ಯಾವುದೇ ತಪ್ಪು ಮಾಡದಿದ್ದರೂ ನಮ್ಮ ವಿರುದ್ದ ಸಾಕಷ್ಟು ಕೇಸ್ ಹಾಕಲಾಗಿತ್ತು. ಅಂದಿನ ಬಿಜೆಪಿ ಸರ್ಕಾರದಿಂದ ಹಿಡಿದು ಇಂದಿನ ಸಿದ್ದರಾಮಯ್ಯ ಸರ್ಕಾರದಲ್ಲೂ ಇದೇ ಮುಂದುವರೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಜೆಡಿಎಸ್‍ನ್ನು ತುಳಿಯುವ ಉದ್ದೇಶದಿಂದ ಆರೋಪ ಮಾಡಲಾಗುತ್ತಿದೆ. ಚುನಾವಣೆಗೆ 300ರಿಂದ 400 ಕೋಟಿ ಹಣ ಕೊಡಿ. ಎಲ್ಲ ಆಸ್ತಿಯನ್ನು ಬರೆದು ಕೊಡುತ್ತೇನೆ. 20 ಸಾವಿರ ಕೋಟಿ ಆರೋಪಕ್ಕೆ ಕುಮಾರಸ್ವಾಮಿ ಈ ಸವಾಲು ಹಾಕಿದರು.   ನಾವು ಮುಂದೆ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ. ಉತ್ತಮ ಆಡಳಿತ ನೀಡಿ ದೇಶಕ್ಕೆ ತೋರಿಸುತ್ತೇವೆ. 1987ರಿಂದಲೂ ನಮ್ಮ ಕುಟುಂಬದ ಮೇಲೆ ಒಂದಲ್ಲ ಒಂದು ರೀತಿಯ ಆರೋಪ ಮಾಡಲಾಗುತ್ತಿದೆ ಎಂದರು.

ಪ್ರಸ್ತುತ ನೀಡಿರುವ ದೂರಿನ ಕುರಿತಂತೆ ಸಿಬಿಐ ತನಿಖೆ ನಡೆಸಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.   ಮುಖ್ಯಪೇದೆ ಸುಭಾಷ್‍ಚಂದ್ರ ಕುಟುಂಬ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕ್ರಿಕೆಟ್ ಬೆಟ್ಟಿಂಗ್‍ನಿಂದ ಇನ್ನೆಷ್ಟು ಕುಟುಂಬಗಳು ಹಾಳಾಗುತ್ತವೋ ಗೊತ್ತಿಲ್ಲ. ಮುಖ್ಯಮಂತ್ರಿಗಳ ಗೃಹ ಕಚೇರಿಯ ಭದ್ರತೆಯಲ್ಲಿದ್ದ ಪೇದೆ ಬೆಟ್ಟಿಂಗ್‍ನಲ್ಲಿ ತೊಡಗಿರುವುದು ಈಗ ಬೆಳಕಿಗೆ ಬರುತ್ತಿದೆ. ಇದು ಹಿರಿಯ ಅಧಿಕಾರಿಗಳ ಗಮನಕ್ಕೆ ಬರಲಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin