ತಮ್ಮ ಬಣದವರ ಆಯ್ಕೆಗೆ ಸಾ.ರಾ.ಗೋವಿಂದು ಸಂತಸ

ಈ ಸುದ್ದಿಯನ್ನು ಶೇರ್ ಮಾಡಿ

Sa-Ra-Govindu---01

ಬೆಂಗಳೂರು,ಜೂ.30- ಇತ್ತೀಚೆಗೆ ನಡೆದ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ತಮ್ಮ ಬಣದ ಶೇ.95ರಷ್ಟು ಮಂದಿ ಆಯ್ಕೆಯಾಗುವ ಮೂಲಕ ನಮ್ಮ ಹಿಂದಿನ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ಸಿಕ್ಕಂತಾಗಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹರ್ಷ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎರಡೂವರೆ ವರ್ಷಗಳ ಕಾಲ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮಂಡಳಿಯ ನೂತನ ಅಧ್ಯಕ್ಷರಾಗಿ ಚಿನ್ನೇಗೌಡರು, ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರಾಗಿ ಕರಿಸುಬ್ಬು , ವಿತರಕರ ವಲಯದ ಉಪಾಧ್ಯಕ್ಷರಾಗಿ ಕೆ.ಮಂಜು ಹಾಗೂ ಪ್ರದರ್ಶಕರ ವಲಯದಿಂದ ಕೆ.ಸಿ.ಅಶೋಕ್ ಸೇರಿದಂತೆ ಬಹಳಷ್ಟು ಮಂದಿ ನಮ್ಮ ಬಣದಿಂದಲೇ ಆಯ್ಕೆಯಾಗಿದ್ದಾರೆ.

ಇದರಿಂದ ನಮ್ಮ ವಿರುದ್ಧ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಈ ಗೆಲುವಿನಿಂದ ನಮ್ಮ ಹಿಂದಿನ ಯೋಜನೆಗಳಿಗೆ ಮುಂದೆಯೂ ಒಮ್ಮತದ ಸಹಕಾರ ಸಿಗಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ ಎಂದು ತಿಳಿಸಿದರು. ಈ ಹಿಂದೆ ವಾರ್ಷಿಕ ಬಿಡುಗಡೆಯಾಗುತ್ತಿದ್ದ 100 ಚಿತ್ರಗಳಿಗೆ ಮಾತ್ರ ಸಬ್ಸಿಡಿ ದೊರೆಯುತ್ತಿದುದು ಈಗ 125 ಚಿತ್ರಗಳಿಗೆ ಸಬ್ಸಿಡಿ ಸಿಗುವಂತಾಗಿದೆ. ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಯಾವುದೇ ನಿಗದಿತ ದಿನಾಂಕವಿರಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.24ರ ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ದಿನದಂದೇ ಅಧಿಕೃತವಾಗಿ ಪ್ರತಿ ವರ್ಷ ರಾಜ್ಯಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ಸೂಚಿಸಿ ದಿನಾಂಕ ನಿಗದಿ ಮಾಡಿದ್ದಾರೆ.

30 ಜಿಲ್ಲೆಗಳಲ್ಲಿ ಪ್ರತಿ ವರ್ಷ ಸರಳವಾದ ಚಿತ್ರೋತ್ಸವ ನಡೆಸುವ ಕಾರ್ಯಕ್ರಮ ಈ ವರ್ಷದಿಂದ ಆಚರಣೆಗೆ ಬರಲಿದೆ. ಇದರೊಂದಿಗೆ ಚಲನಚಿತ್ರಗಳಿಗೆ ದೊರೆಯಬೇಕಿರುವ ಸಬ್ಸಿಡಿ ಹಣವನ್ನು ಆಯಾ ವರ್ಷಗಳಲ್ಲೇ ಭರಿಸುವ ಸೂಚನೆ ಸರ್ಕಾರದಿಂದ ದೊರೆತಿದೆ. ಜಿಲ್ಲಾವಾರು ಮಟ್ಟದಲ್ಲಿ ಜನತಾ ಚಿತ್ರಮಂದಿರ ನಿರ್ಮಾಣಕ್ಕೆ 50 ಲಕ್ಷ ಹಾಗೂ ಹಳೆ ಚಿತ್ರಮಂದಿರಗಳ ನವೀಕರಣಕ್ಕೆ 25 ಲಕ್ಷ ಪ್ರೊತ್ಸಾಹ ಧನ ನೀಡುವ ಯೋಜನೆ ಜಾರಿಗೊಂಡಿದೆ. ಇದು ಮುಂದಿನ ದಿನಗಳಲ್ಲಿ ಕಾರ್ಯಗತಗೊಳ್ಳಬೇಕಿದೆ ಎಂದರು.  ನಿರ್ಮಾಪಕರಿಗೆ ಬಾಕಿ ಉಳಿದಿದ್ದ ಸಬ್ಸಿಡಿ ಹಣದಲ್ಲಿ 10 ಕೋಟಿಯನ್ನು ಕೂಡಲೇ ಭರಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಉಳಿದದ್ದನ್ನು ಶೀಘ್ರದಲ್ಲಿ ಭರಿಸಲಿದ್ದಾರೆ ಎಂದು ಹೇಳಿದರು.

ಇದಲ್ಲದೆ ಚಿತ್ರರಂಗ ಎದುರಿಸುತ್ತಿದ್ದ ಕಾರ್ಮಿಕರ ವೇತನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ವೇತನ ಪರಿಷ್ಕರಣೆ, ಯುಎಸ್‍ಒ-ಕ್ಯೂಬ್ ಸ್ಯಾಟಲೆಟ್ ಸಂಸ್ಥೆಗಳ ದುಬಾರಿ ಶುಲ್ಕ ಕಡಿತ ಸಂಬಂಧ ಮಾತುಕತೆಗಳು ಫಲಪ್ರದವಾಗಿದೆ. ಜಿಎಸ್‍ಟಿ ಹೊರೆ ತಪ್ಪಿಸಲು ರಾಜ್ಯ ಸರ್ಕಾರದ ಶೇ.9ರಷ್ಟು ಜಿಎಸ್‍ಟಿಯನ್ನು ಬಿಟ್ಟುಕೊಡಲು ಸರ್ಕಾರ ಸಿದ್ಧವಿದೆ. ಕೇವಲ ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಾದ ಶೇ.9ರಷ್ಟು ಜಿಎಸ್‍ಟಿ ಮಾತ್ರ ನಾವು ಪಾವತಿಸಬೇಕಾಗುತ್ತದೆ ಎಂದು ವಿವರಿಸಿದರು.

ಮಲ್ಟಿಪ್ಲೆಕ್ಸ್‍ಗಳಲ್ಲಿ ಕನ್ನಡ ಚಿತ್ರಗಳಿಗೂ ಪ್ರೈಮ್ ಟೈಂ ಶೋಗಾಗಿ ಸಮಯ ನಿಗದಿ, ಮಾಲ್‍ಗಳಲ್ಲಿನ ಚಿತ್ರಮಂದಿರಗಳಲ್ಲಿ ಏಕರೂಪದ ಟಿಕೆಟ್ ದರ ಜಾರಿ ಮತ್ತಿತರ ವಿಷಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದ್ದು , ಈ ಹಂತದಲ್ಲಿ ಯೋಜನೆಗಳು ಸಿದ್ದಗೊಂಡು ಅನುಷ್ಠಾನಗೊಳ್ಳಲು ಬಾಕಿ ಇದೆ ಎಂದರು.
ರಾಜಕುಮಾರ್ ಸ್ಮಾರಕ ಯೋಗ ಕೇಂದ್ರ ನಿರ್ಮಾಣಕ್ಕೆ 10 ಕೋಟಿ ದೊರೆತಿದೆ. ಅದರನ್ವಯ ಇದರ ಕೆಲಸ ಆರಂಭಗೊಳ್ಳಬೇಕಿದೆ. ಚಲನಚಿತ್ರ ರಂಗದ ಕಾರ್ಮಿಕರ ಕ್ಷೇಮಾಭಿವೃದ್ದಿಯೊಂದಿಗೆ ಒದಗಿಸಲಾಗಿರುವ 10 ಕೋಟಿಯನ್ನು 20 ಕೋಟಿಗೆ ಏರಿಕೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ.

ಚಲನಚಿತ್ರರಂಗಕ್ಕೆ ಸಂಬಂಧಿಸಿದ ಬೈಲಾ ತಿದ್ದುಪಡಿ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಯೋಜನೆಯೂ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಚಿತ್ರರಂಗದ ಸರ್ವಾಂಗೀಣ ಅಭಿವೃದ್ಧಿಗೆ ಒಳ್ಳೆಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಜಾರಿಗೊಳಿಸಲು ಈಗಾಗಲೇ ಮುಂದಾಗಿದ್ದೇವೆ. ಇದೀಗ ಈ ಯೋಜನೆಗಳು ಅನುಷ್ಠಾನಗೊಳ್ಳುವ ಹಂತದಲ್ಲಿದೆ ಎಂದರು.

ನಿರ್ಮಾಪಕರ ವಲಯದ ಕಾರ್ಯಕಾರಿಣಿ ಸಮಿತಿ ಸದಸ್ಯ ಉಮೇಶ್ ಬಣಕಾರ್ ಮಾತನಾಡಿ, ಕೆಲವೊಂದು ಕಾನೂನಾತ್ಮಕ ಸಮಸ್ಯೆಗಳಿಗೆ ಕಾನೂನು ರೀತಿಯಲ್ಲೇ ಎದುರಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಂತರ ನಿರ್ಧರಿಸಲಾಗುವುದು. ಚಿತ್ರರಂಗದ ನಿರಂತರ ಅಭಿವೃದ್ದಿಗೆ ಪೂರಕವಾಗಿ ಕೆಲಸ ನಿರ್ವಹಿಸಲು ಅನುವಾಗುವಂತೆ ಉನ್ನತ ಮಟ್ಟದ ಅಭಿವೃದ್ಧಿ ಸಮಿತಿಯನ್ನು ರಚಿಸಲಾಗುವುದು ಎಂದರು. ಸಾ.ರಾ.ಗೋವಿಂದು ಅವರಿಗೆ ವಿಧಾನಪರಿಷತ್ ಸದಸ್ಯರಾಗುವ ಅರ್ಹತೆ ಇದೆ. ಕನ್ನಡದ ಬಗೆಗೆ ಅವರಿಗಿರುವ ಕಾಳಜಿ, ಅವರ ಸೇವೆಯನ್ನು ಪರಿಗಣಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

Facebook Comments

Sri Raghav

Admin