ತಮ್ಮ ಮನೆಗಳನ್ನು ತಾವೇ ಒಡೆದು ಹಾಕಿದ ಮಾಲೀಕರು : ಮುಂದುವರೆದ ಆಪರೇಷನ್ ರಾಜಕಾಲುವೆ

ಈ ಸುದ್ದಿಯನ್ನು ಶೇರ್ ಮಾಡಿ

dsgasg

ಬೆಂಗಳೂರು, ಆ.8- ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ   ಮತ್ತಷ್ಟು ತೀವ್ರಗೊಂಡಿದೆ. ಮೂರನೆ ದಿನವಾದ ಇಂದೂ ಒತ್ತುವರಿ ತೆರವು ಮುಂದುವರಿದಿರುವುದರ ಜತೆಗೆ ಸರ್ವೆ ಕಾರ್ಯವು ಕೂಡ ನಡೆಯುತ್ತಿರುವುದರಿಂದ ರಾಜಕಾಲುವೆ ಆಜುಬಾಜಿನಲ್ಲಿರುವ ಜನ ಆತಂಕಕ್ಕೊಳಗಾಗಿದ್ದಾರೆ.  ರಾಜಕಾಲುವೆ ಮೇಲೆ ಮನೆ, ಕಟ್ಟಡ ನಿರ್ಮಿಸಿಕೊಂಡಿರುವವರ ತೀವ್ರ ವಿರೋಧದ ನಡುವೆಯೂ ಬಿಬಿಎಂಪಿ ಅಧಿಕಾರಿಗಳು ಇಂದು ಕಾರ್ಯಾಚರಣೆ ನಡೆಸಿ ಹಲವು ಕಟ್ಟಡಗಳನ್ನು ನೆಲಸಮ ಮಾಡಿ ಒತ್ತುವರಿಯನ್ನು ತೆರವುಗೊಳಿಸಿದರು.  ಕೆಆರ್ ಪುರ, ಬೊಮ್ಮನಹಳ್ಳಿ, ಯಲಹಂಕ, ಮಹದೇವಪುರ ಮುಂತಾದ ಕಡೆ  ಬಿಬಿಎಂಪಿ ಜೆಸಿಬಿಗಳು, ಬುಲ್ಡೋಜರ್‍ಗಳು ಘರ್ಜಿಸಿ ಹತ್ತಾರು ಮನೆಗಳು, ಕಟ್ಟಡಗಳನ್ನು ನೆಲಸಮಗೊಳಿಸಿ ಒತ್ತುವರಿ ತೆರವು ಮಾಡಲಾಯಿತು.

ಈ ಸಂದರ್ಭದಲ್ಲಿ ಹಲವರು ಬಿಬಿಎಂಪಿ ಅಧಿಕಾರಿಗಳಿಗೆ ತಮ್ಮ ದಾಖಲೆಗಳನ್ನು ಹಿಡಿದು ಆವಾಜ್ ಹಾಕಿದರೂ ಯಾವುದಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು. ರಾಜಕಾಲುವೆ, ಉಪಕಾಲುವೆ ಎಲ್ಲ ಒತ್ತುವರಿಯನ್ನೂ ತೆರವುಗೊಳಿಸಿದರು.  ಕೆಲವರು ಸ್ವಯಂಪ್ರೇರಿತವಾಗಿ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ತೆರವುಗೊಳಿಸಿ ತಮ್ಮ ತಮ್ಮ ಜಾಗವನ್ನು ರಕ್ಷಿಸಿಕೊಳ್ಳುವಲ್ಲಿ ಮುಂದಾಗಿದ್ದು ಕಂಡುಬಂತು. ಮತ್ತೆ ಕೆಲವೆಡೆ ದೊಡ್ಡ ದೊಡ್ಡ ಮನೆಗಳು, ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರು. ಇವರು ಅಧಿಕಾರಿಗಳಿಗೆ ಸಮಯಾವಕಾಶ ಕೇಳುತ್ತಿದ್ದರು ಮತ್ತು ತಾವು ಕಟ್ಟಿದ್ದ ಕಂದಾಯ, ಕರೆಂಟ್ ಬಿಲ್‍ಗಳ ರಶೀದಿಗಳನ್ನು ತೋರಿಸುತ್ತಿದ್ದರಾದರೂ ಯಾವುದಕ್ಕೂ ಮಣಿಯಲಿಲ್ಲ.

ಇನ್ನೂ ಕೆಲವರು ಅಧಿಕಾರಿಗಳ ಮೇಲೆ ಹರಿಹಾಯ್ದಾಗ ಜಂಟಿ ಆಯುಕ್ತರು ಪೊಲೀಸರಿಂದ ಬಂಧಿಸುವ ಎಚ್ಚರಿಕೆ ನೀಡಿ ಒತ್ತುವರಿ ತೆರವುಗೊಳಿಸಬೇಕಾದ ಘಟನೆ ಯಲಹಂಕ ಭಾಗದಲ್ಲಿ ನಡೆಯಿತು. ಕೆಆರ್ ಪುರಂನ ದೇವಸಂದ್ರ ವಾರ್ಡ್‍ನ ಬಿ.ನಾರಾಯಣಪುರದಲ್ಲಿ ಒತ್ತುವರಿಯಾಗಿದ್ದ ಕೆರೆ ಜಾಗವನ್ನು ವಶಕ್ಕೆ ತೆಗೆದುಕೊಂಡು ಆ ಜಾಗದಲ್ಲಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಯನ್ನು ತೆರವುಗೊಳಿಸಲಾಗಿತ್ತು.  ಬೆಂಗಳೂರು ಪೂರ್ವ ತಾಲೂಕು ತಹಸೀಲ್ದಾರ್ ಹರೀಶ್‍ನಾಯಕ್ ನೇತೃತ್ವದಲ್ಲಿ ಬಿ.ನಾರಾಯಣಪುರದ ಸರ್ವೆ ನಂ.109ರಲ್ಲಿ 3 ಗುಂಟೆ ಜಾಗದಲ್ಲಿ ನಿರ್ಮಿಸಿದ್ದ 20 ಲಕ್ಷ ರೂ. ಮೌಲ್ಯದ ವಾಣಿಜ್ಯ ಮಳಿಗೆಯನ್ನು ತೆರವುಗೊಳಿಸಲಾಯಿತು.   ಈ ಜಾಗದಲ್ಲಿ ಇನ್ನೂ 3 ಎಕರೆ ಜಾಗ ಒತ್ತುವರಿಯಾಗಿದ್ದು, ಆದೇಶ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ರೆವಿನ್ಯೂ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ಪೊಲೀಸರಿಂದ ಅರೆಸ್ಟ್:ಯಲಹಂಕದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಜಂಟಿ ಆಯುಕ್ತ ಸರ್ಫ್‍ರಾಜ್‍ಖಾನ್ ಹಾಗೂ ಸಿಬ್ಬಂದಿಗೆ ಅಡ್ಡಿಪಡಿಸಿದ ಒತ್ತುವರಿದಾರರಿಗೆ ತಿರುಗೇಟು ನೀಡಿದ ಅವರು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಿದರೆ ಅರೆಸ್ಟ್ ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.  ಬೊಮ್ಮನಹಳ್ಳಿ ವಲಯದ ಸರಸ್ವತಿಪುರಂನ 5ನೆ  ಮುಖ್ಯರಸ್ತೆಯ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೂಡ ಮುಂದುವರಿದಿತ್ತು.    ಅವನಿ ಶೃಂಗೇರಿ, ಕೋಡಿಚಿಕ್ಕನಹಳ್ಳಿ, ಹುಳಿಮಾವು, ಮಡಿವಾಳ ಬಳಿ ಉಪಕಾಲುವೆಗಳಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು. ನಿನ್ನೆಯಷ್ಟೆ ಹತ್ತಾರು ಮನೆಗಳು, ಕಟ್ಟಡಗಳನ್ನು ಒಡೆದುಹಾಕಿದ್ದರಿಂದ ನಿದ್ರೆಯಿಲ್ಲದೆ ಕಾಲ ಕಳೆದ ಜನ ಇಂದು ತಮ್ಮ ಮನೆಗಳು ಎಲ್ಲಿ ಧ್ವಂಸಗೊಳ್ಳುತ್ತಾವೋ ಎಂಬ ಆತಂಕದಿಂದ ಕಾಲ ಹಾಕುತ್ತಿದ್ದುದು ಕಂಡುಬಂತು.

ಎಲ್ಲ ಒತ್ತುವರಿ ತೆರವು:

ರಾಜಕಾಲುವೆ ಒತ್ತುವರಿ ಮಾಡಿರುವುದರಿಂದ  ಮಳೆಗಾಲದಲ್ಲಿ ಅನಾಹುತಗಳು ಉಂಟಾಗಿ ಸಾವಿರಾರು ಜನ ಸಂಕಷ್ಟಕ್ಕೀಡಾಗುತ್ತಾರೆ. ನಾಲ್ಕಾರು ಮನೆಗಳಿಂದ ಸಾವಿರಾರು ಜನಗಳಿಗೆ ತೊಂದರೆಯಾಗುವುದನ್ನು ಸಹಿಸಲು ಸಾಧ್ಯವಿಲ್ಲ. ಹಾಗಾಗಿ ಎಲ್ಲ ಒತ್ತುವರಿಯನ್ನೂ ತೆರವು ಮಾಡಿ ಕೆರೆಯನ್ನು ಸಂಪರ್ಕಿಸುವ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin