ತರಾತುರಿಯಲ್ಲಿ ವಿಧೇಯಕ ಮಂಡನೆ-ಅನುಮೋದನೆಗೆ ಅವಕಾಶವಿಲ್ಲ : ಕೋಳಿವಾಡ

ಈ ಸುದ್ದಿಯನ್ನು ಶೇರ್ ಮಾಡಿ

K-B-Koliwada
ಬೆಂಗಳೂರು, ಫೆ.3- ಅಧಿವೇಶನದ ಕೊನೆಯ ದಿನ ತರಾತುರಿಯಲ್ಲಿ ಸರ್ಕಾರದ ವತಿಯಿಂದ ವಿಧೇಯಕ ಮಂಡಿಸಿ ಅನುಮೋದನೆಗೆ ಮುಂದಾದರೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ತಿಳಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧೇಯಕಗಳನ್ನು ಮುಂಚಿತವಾಗಿ ಮಂಡಿಸಿ ಚರ್ಚೆಗೆ ಸಾಕಷ್ಟು ಕಾಲಾವಕಾಶ ನೀಡಬೇಕು. ವಿಚಾರವನ್ನು ಸದನದ ಕಾರ್ಯ-ಕಲಾಪಗಳ ಸಲಹಾ ಸಮಿತಿಸಭೆಯ ಗಮನಕ್ಕೂ ತರುವುದಾಗಿ ಹೇಳಿದರು.

ವಿಧಾನ ಸಭೆಯಲ್ಲಿ ಮಂಡನೆಯಾಗುವ ವಿವಿಧ ಸಮಿತಿಗಳ ವರದಿಗೆ ಗೌರವ ಕೊಡಬೇಕು ಎಂಬ ಸೂಚನೆಯನ್ನು ಸಭಾಧ್ಯಕ್ಷರು ಕೊಡಬಹುದು. ಆದರೆ, ಇದುವರೆಗೂ ಯಾರೂ ಅಂತಹ ಸೂಚನೆ ಕೊಟ್ಟಿಲ್ಲ ಎಂದರು. ನೈಸ್ ಸಂಸ್ಥೆ, ವಿದ್ಯುತ್ ಖರೀದಿ ಸೇರಿದಂತೆ ವಿವಿಧ ಸದನ ಸಮಿತಿಗಳು ಈಗಾಗಲೇ ವರದಿ ನೀಡಿದ್ದು, ಆ ವರದಿ ಅನುಷ್ಠಾನದ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಡವಳಿಯನ್ನು ರೂಪಿಸುವಾಗ ಸದನ ಸಮಿತಿಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಿ ಸರ್ಕಾರದ ನಿಲುವನ್ನು ಪ್ರಕಟಿಸಬೇಕೆಂಬ ಸಲಹೆ ಕೊಟ್ಟಿದ್ದೇವೆ ಎಂದು ಅವರು ಹೇಳಿದರು. ಅಧಿವೇಶನದಲ್ಲಿ ಶಾಸಕರ ಪಾಲ್ಗೊಳ್ಳುವಿಕೆ ತೃಪ್ತಿಕರವಾಗಿಲ್ಲ. ಆದರೆ, ರಾಜ್ಯಪಾಲರ ಭಾಷಣ ಮತ್ತು ಬಜೆಟ್‍ನಲ್ಲಿ ನೀಡಿದ ಭರವಸೆ ಈಡೇರಿಕೆ ಬಗ್ಗೆ ಸಮಾಧಾನವಿದೆ ಎಂದು ಹೇಳಿದರು.

ಫೆ.5ರಂದು 14ನೆ ವಿಧಾನಸಭೆ, 16ನೆ ಅಧಿವೇಶನ ಆರಂಭವಾಗಲಿದ್ದು, ರಾಜ್ಯಪಾಲ ವಿ.ಆರ್.ವಾಲಾ ಅವರು ವಿಧಾನ ಮಂಡಲದ ಉಭಯ ಸದನದ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅದಾದ ನಂತರ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು. ಫೆ.16ರಂದು ಬೆಳಗ್ಗೆ 11.30ಕ್ಕೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2018-19ನೆ ಸಾಲಿನ ಆಯವ್ಯಯ ಮಂಡಿಸಲಿದ್ದಾರೆ. ಎರಡೂ ಅಧಿವೇಶನ ಸೇರಿ ಒಟ್ಟು 12 ದಿನಗಳ ಪ್ರಶ್ನೋತ್ತರ ಕಾರ್ಯ-ಕಲಾಪಗಳಿರುತ್ತವೆ ಎಂದರು.

ರಾಜ್ಯಪಾಲರಿಂದ ಪುನರ್ ಪರಿಶೀಲನೆಗಾಗಿ ಹಿಂದಿರುಗಿಸಲಾಗಿರುವ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕ ಅಂಗೀಕಾರಕ್ಕಾಗಿ ಬಾಕಿ ಇದೆ. ರಾಜ್ಯ ಸಿವಿಲ್ ಸೇವೆಗಳ (ಕೃಷಿ ಇಲಾಖೆ ಮತ್ತು ಸಿಬ್ಬಂದಿ) ವರ್ಗಾವಣೆ ವಿಧೇಯಕ ಅಂಗೀಕಾರಕ್ಕಾಗಿ ಬಾಕಿ ಇದೆ. ಈಗಾಗಲೇ ಒಂದು ವಿಧೇಯಕ ಸ್ವೀಕೃತವಾಗಿದ್ದು, ಸರ್ಕಾರ ಯಾವುದೇ ಸಂದರ್ಭದಲ್ಲಿ ವಿಧೇಯಕ ಮಂಡಿಸುವ ಕೋರಿಕೆ ಬಂದಲ್ಲಿ ಪರಿಗಣಿಸಲಾಗುವುದು ಎಂದು ವಿವರಿಸಿದರು.

ರಾಜ್ಯದ ಜ್ವಲಂತ ವಿಷಯ ಹಾಗೂ ಅತ್ಯುತ್ತಮ ವಿಷಯಗಳ ಬಗ್ಗೆ ಸದಸ್ಯರು ಬೆಳಕು ಚೆಲ್ಲಿ ರಾಜ್ಯದ ಅಭಿವೃದ್ಧಿಗೆ ಸ್ಪಂದಿಸುತ್ತೇವೆ ಎಂದರು. 2013ರಿಂದ ಇಲ್ಲಿಯವರೆಗೂ ನಡೆದ ಅಧಿವೇಶನ ಸೇರಿ 186 ದಿನ ಅಧಿವೇಶನ ನಡೆದಂತಾಗುತ್ತದೆ ಎಂದು ಹೇಳಿದರು.

Facebook Comments

Sri Raghav

Admin