ತಲೈವಾಗೆ ತಟ್ಟಿದ ಪ್ರತಿಭಟನೆ ಬಿಸಿ : ತಮಿಳಿಗನೆಂದು ಹೇಳಿಕೊಳ್ಳುವ ‘ಕನ್ನಡಿಗ’ ರಜನಿ ರಾಜಕೀಯದಿಂದ ದೂರವಿರಲಿ,

ಈ ಸುದ್ದಿಯನ್ನು ಶೇರ್ ಮಾಡಿ

Rajanikant--01

ಚೆನ್ನೈ, ಮೇ 22- ರಾಜಕೀಯ ಪ್ರವೇಶಿಸುವ ಬಗ್ಗೆ ಸ್ಪಷ್ಟ ಮುನ್ಸೂಚನೆ ನೀಡಿ ದೇಶಾದ್ಯಂತ ಸಂಚಲನ ಮೂಡಿಸಿರುವ ಖಾತ್ಯ ಚಿತ್ರನಟ ರಜನಿಕಾಂತ್ ಅವರಿಗೆ ಆರಂಭದಲ್ಲೇ ಪ್ರತಿಭಟನೆ ಎದುರಾಗಿದೆ. ತಲೈವಾ ರಾಜಕಾರಣಕ್ಕೆ ಸೇರುವುದನ್ನು ವಿರೋಧಿಸಿ ಕೆಲವು ತಮಿಳು ಸಂಘಟನೆಗಳು ಪ್ರತಿಭಟನೆ ಮತ್ತು ಮುತ್ತಿಗೆ ಹಾಕಿದಾಗ ಪೊಲೀಸರೊಂದಿಗೆ ಘರ್ಷಣೆ ನಡೆದು ಕೆಲವರನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚೆನ್ನೈನ ಪೋಯೆಸ್ ಗಾರ್ಡನ್‍ನಲ್ಲಿರುವ ರಜನಿ ನಿವಾಸಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಈ ಬೆಳವಣಿಗೆಯಿಂದಾಗಿ ಸೂಪರ್‍ಸ್ಟಾರ್ ರಾಜಕಾರಣಕ್ಕೆ ಧುಮುಕುವ ಮುನ್ನವೇ ಪರ ಮತ್ತು ವಿರೋಧ ಬಣಗಳು ಹುಟ್ಟಿಕೊಂಡಿದೆ. ತಮಿಳುನಾಡನ್ನು ಅರಾಜಕತೆಯಿಂದ ಪಾರು ಮಾಡಲು ರಜನಿ ರಾಜಕೀಯ ಪ್ರವೇಶಿಸಬೇಕು ಎಂಬುದು ಅಸಂಖ್ಯಾತ ಅಭಿಮಾನಿಗಳ ಬಯಕೆಯಾದರೆ, ತಲೈವಾ ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಬಾರದು ಎಂಬ ದೃಢ ಧೋರಣೆಯನ್ನು ಕೆಲವು ಸಂಘಟನೆಗಳು ಬಹಿರಂಗವಾಗಿಯೇ ವ್ಯಕ್ತಪಡಿಸಿವೆ. ಪ್ರತಿಭಟನಾಕಾರರ ಗುಂಪು ಇಂದು ರಜನಿಯವರ ಮನೆ ಮುಂದೆ ಭಾರಿ ಪ್ರತಿಭಟನೆ ನಡೆಸಿದರು.ತಾನು ಅಪ್ಪಟ ತಮಿಳಿಗ ಎಂದು ಹೇಳಿಕೊಳ್ಳುವ ರಜನಿಕಾಂತ್ ಮೂಲತಃ ಮರಾಠಿಯವರಾಗಿದ್ದು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಅವರು ಕೊಡುಗೆ ನೀಡಿರುವುದನ್ನು ಬಿಟ್ಟರೆ, ತಮಿಳರಿಗೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅವರು ಏಕೆ ರಾಜಕೀಯ ಪ್ರವೇಶಿಸಬೇಕು ಎಂದು ಪ್ರಶ್ನಿಸಿದರು. ಈ ಸಂಧರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಪ್ರಕ್ಷುಬ್ದ ವಾತಾವರಣ ಉಂಟಾಯಿತು. ನಿಂತರೆ ಉದ್ರಿಕ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ರಜನಿ ರಾಜಕೀಯರಂಗ ಪ್ರವೇಶಿಸುವುದನ್ನು ತಮಿಳ್ ಮುನ್ನೇತ್ರ ಪಡೆಯ ಕಾರ್ಯಕರ್ತರು ಪ್ರಬಲವಾಗಿ ವಿರೋಧಿಸಿದ್ದಾರೆ. ತಲೈವಾ ನಿರ್ಧಾರದಿಂದ ಬೇಸತ್ತಿರುವ ಕೆಲವು ಸಂಘಟನೆಗಳೂ ಕೂಡ ಈ ಪಡೆಗೆ ಬೆಂಬಲ ನೀಡಿವೆ. ಅಲ್ಲದೇ ಈ ನಿರ್ಧಾರವನ್ನು ಪ್ರತಿಭಟಿಸಲು ಹಾಗೂ ಸೂಪರ್‍ಸ್ಟಾರ್ ನಿವಾಸಕ್ಕೆ ಮುತ್ತಿಗೆ ಹಾಕಲು ಸಂಘಟನೆಗಳು ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಜನಿ ನಿವಾಸ ಹಾಗೂ ಅವರ ಅಭಿಮಾನಿಗಳ ಕಚೇರಿ ಬಳಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ರಜನಿ ರಾಜಕೀಯ ಪ್ರವೇಶಿಸುವುದನ್ನು ಬಹುತೇಕ ಎಲ್ಲ ಪಕ್ಷಗಳು ಸ್ವಾಗತಿಸಿವೆ. ಅವರನ್ನು ತನ್ನತ್ತ ಸೆಳೆಯಲು ರಾಷ್ಟ್ರೀಯ ಪಕ್ಷಗಳೂ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಕಸರತ್ತು ನಡೆಸುತ್ತಿವೆ. ಇದೇ ವೇಳೆ ಅವರು ಸಕ್ರಿಯ ರಾಜಕೀಯಕ್ಕೆ ಧುಮುಕುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸಂಘಟನೆಗಳ ಹಿಂದೆ ಕೆಲವು ರಾಜಕೀಯ ಮುಖಂಡರ ಕೈವಾಡ ಇದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.  ಚೆನ್ನೈ ಸೇರಿದಂತೆ ತಮಿಳುನಾಡಿನ ಯಾವುದೇ ಭಾಗದಲ್ಲೂ ಈ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸುವಂತೆ ಉನ್ನತ ಪೊಲೀಸ್ ಆಧಿಕಾರಿಗಳು ಸಿಬ್ಬಂದಿಗೆ ಸ್ಫಷ್ಟ ಎಚ್ಚರಿಕೆ ನೀಡಿದ್ದಾರೆ.


ಎಲ್ಲ ರಂಗಗಳಲ್ಲೂ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ನಿಗ್ರಹಿಸಲು ಸೂಕ್ತ ಸಮಯದಲ್ಲಿ ತಾವು ರಾಜಕೀಯ ಪ್ರವೇಶಿಸುವುದಾಗಿ ಹಾಗೂ ತಮ್ಮೊಂದಿಗೆ ಹೋರಾಟಕ್ಕೆ ಸಿದ್ದರಾಗಿ ಎಂದು ಅವರು ಕರೆ ನೀಡುವ ಮೂಲಕ ಈಗಾಗಲೇ ಅಭಿಮಾನಿಗಳಲ್ಲಿ ಪುಳಕ ಉಂಟು ಮಾಡಿದ್ದಾರೆ.

ರಜನಿ-ಮೋದಿ ಭೇಟಿ : ರಾಜಕೀಯ ಸೇರ್ಪಡೆಯ ಮೊದಲ ಭಾಗವಾಗಿ ರಜನಿ ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ರಜನಿ ತಮ್ಮದೇ ಆದ ರಾಜಕೀಯ ಪಕ್ಷ ಕಟ್ಟುತ್ತಾರೆ ಎಂಬ ಸುದ್ದಿಗಳೂ ಹರಡಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ರಜನಿ ರಾಜಕೀಯ ಪ್ರವೇಶಕ್ಕೆ ವಿರೋಧ ವ್ಯಕ್ತವಾಗಿರುವುದೂ ಹೊಸ ವಿದ್ಯಮಾನವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin