ತಿಂಗಳಾಂತ್ಯಕ್ಕೆ ಬರಪೀಡಿತ ಪ್ರದೇಶಗಳ ಘೋಷಣೆ : ನೂರಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ

ಈ ಸುದ್ದಿಯನ್ನು ಶೇರ್ ಮಾಡಿ

Drought

ಬೆಂಗಳೂರು, ಸೆ.18- ರಾಜ್ಯದಲ್ಲಿ ಮಳೆಯ ಅಭಾವದಿಂದ ಸುಮಾರು ನೂರಕ್ಕೂ ಹೆಚ್ಚು ತಾಲೂಕುಗಳು ಬರ ಪೀಡಿತವಾಗಿವೆ. ಬರಪೀಡಿತ ಪ್ರದೇಶಗಳ ಘೋಷಣೆಗೆ ಇದೇ ತಿಂಗಳ ಅಂತ್ಯದಲ್ಲಿ ಉನ್ನತ ಮಟ್ಟದ ಮಹತ್ವದ ಸಭೆ ನಡೆಯಲಿದೆ.  ಸತತ ಮೂರನೆ ವರ್ಷವೂ ಮುಂಗಾರು ಮಳೆ ರಾಜ್ಯದಲ್ಲಿ ಕೈಕೊಟ್ಟಿದ್ದು, ಬೆಳೆ ಹಾನಿ ಉಂಟಾಗಿದೆ. ಇದರಿಂದ ರೈತರು ಪದೇ ಪದೇ ಸಂಕಷ್ಟ ಅನುಭವಿಸುವಂತಾಗಿದೆ. ಅಲ್ಲದೆ, ಜಲಕ್ಷಾಮದಿಂದ ತತ್ತರಿಸಿ ನಲುಗುತ್ತಿರುವ ರಾಜ್ಯದಲ್ಲಿ ಈಗ ಮತ್ತೆ ಬರದ ಕರಾಳ ಛಾಯೆ ಆವರಿಸಿಕೊಂಡಿದೆ. ಸೆ.28ರಂದು ಸರ್ಕಾರದ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಅಂದು ರಾಜ್ಯದ ಬರಪೀಡಿತ ಪ್ರದೇಶಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮುಂಗಾರು ಕೊರತೆಯಿಂದ ರಾಜ್ಯದ ತುಂಗಭದ್ರಾ, ಶರಾವತಿ, ಕಾವೇರಿ ಸೇರಿದಂತೆ ಪ್ರಮುಖ ನದಿಗಳ ಜಲಾಶಯಗಳು ನೀರಿನ ಅಭಾವವನ್ನು ಎದುರಿಸುತ್ತಿವೆ. ಕಾವೇರಿ ಜಲಾನಯನ ಭಾಗದಿಂದ ತಮಿಳುನಾಡಿಗೆ ನೀರು ಬಿಟ್ಟು ತೀವ್ರ ಸಂಕಷ್ಟವನ್ನು ರಾಜ್ಯ ಅನುಭವಿಸುವಂತಾಗಿದೆ. ಇದರ ನಡುವೆಯೇ ಬರ ಪರಿಸ್ಥಿತಿಯನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾದ ಸನ್ನಿವೇಶ ಕೂಡ ಸೃಷ್ಟಿಯಾಗಿದೆ. ಆಗಸ್ಟ್‍ನಂತೆ ಸೆಪ್ಟೆಂಬರ್‍ನಲ್ಲೂ ಕೂಡ ರಾಜ್ಯದಲ್ಲಿ ಉತ್ತಮ ಮಳೆಯಾಗಲಿಲ್ಲ. ಹಿಂಗಾರು ಮಳೆ ಆರಂಭಗೊಂಡರೂ ಉತ್ತಮವಾದ ಮಳೆಯಾಗಿ ಸಮೃದ್ಧ ಬೆಳೆಯಾಗುವ ಸಾಧ್ಯತೆಗಳು ವಿರಳ.

ಹೀಗಾಗಿ ಮಳೆ ಪ್ರಮಾಣ, ಬೆಳೆ ಹಾನಿ, ತೇವಾಂಶದ ಮಾಹಿತಿ ಸೇರಿದಂತೆ ಹಲವು ಅಂಶಗಳ ಆಧಾರದ ಮೇಲೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಬರ ಪೀಡಿತ ಪ್ರದೇಶಗಳನ್ನು ಆಯ್ಕೆ ಮಾಡಲಾಗುತ್ತದೆ. ಸತತ ನಾಲ್ಕು ವಾರ ಒಣಹವೆ ಮುಂದುವರಿದಿದ್ದು, ಬೆಳೆ ಹಾನಿಯಾಗಿದ್ದರೆ ಬರ ಪೀಡಿತ ಪಟ್ಟಿಗೆ ಸೇರ್ಪಡೆ ಮಾಡಬಹುದಾಗಿದೆ.   ರಾಜ್ಯದಲ್ಲಿ ಕಳೆದ ಜೂ.1ರಿಂದ ಸೆಪ್ಟೆಂಬರ್ 16ರ ವರೆಗೆ ವಾಡಿಕೆ ಮಳೆ ಪ್ರಮಾಣ 748 ಮಿಲಿ ಮೀಟರ್ ಇದ್ದರೆ, ಕೇವಲ 632 ಮಿಲಿ ಮೀಟರ್‍ನಷ್ಟು ಮಳೆಯಾಗಿದೆ. ಇದರಿಂದ ಒಟ್ಟಾರೆ ರಾಜ್ಯದಲ್ಲಿ ಶೇ.16ರಷ್ಟು ಮಳೆ ಕೊರತೆಯನ್ನು ಎದುರಿಸುವಂತಾಗಿದೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಅತಿ ಹೆಚ್ಚು ಮಳೆಯಾಗುತ್ತಿದ್ದ ಮಲೆನಾಡು ಮತ್ತು ಕರಾವಳಿ ಭಾಗ ಈ ಬಾರಿ ಹೆಚ್ಚಿನ ಮಳೆ ಕೊರತೆ ಎದುರಿಸುತ್ತಿದ್ದು, ಬರದ ದವಡೆಗೆ ಸಿಲುಕಿಕೊಂಡಿದೆ. ರಾಜ್ಯದ ನೂರಕ್ಕೂ ಹೆಚ್ಚು ತಾಲೂಕುಗಳು ಹಾಗೂ ಸುಮಾರು 200ಕ್ಕೂ ಹೆಚ್ಚು ಹೋಬಳಿಗಳು ಬರ ಪೀಡಿತವಾಗಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ ಅಧಿಕೃತ ಘೋಷಣೆಯಾಗುವ ಸಾಧ್ಯತೆಗಳಿವೆ. ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಬರ ಪೀಡಿತ ಪ್ರದೇಶಗಳ ಪಟ್ಟಿ ದಿನದಿಂದ ದಿನಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ. ಕಳೆದ ವರ್ಷ 136 ತಾಲೂಕುಗಳು ಬರ ಪೀಡಿತ ಪ್ರದೇಶಗಳಾಗಿದ್ದವು.

ಈ ಬಾರಿ 73 ಲಕ್ಷ ಹೆಕ್ಟೇರ್‍ನಲ್ಲಿ ಬಿತ್ತನೆ ಮಾಡುವ ಗುರಿ ಹೊಂದಿದ್ದರೂ ಕೇವಲ 69.71 ಲಕ್ಷ ಹೆಕ್ಟೇರ್‍ನಲ್ಲಿ ಮಾತ್ರ ಬಿತ್ತನೆಯಾಗಿದೆ. ಅದು ಕೂಡ ಕೆಲವೆಡೆ ಮೊಳಕೆಯೇ ಬಂದಿಲ್ಲ. ಇನ್ನೂ ಕೆಲವೆಡೆ ಮೊಳಕೆಯೊಡೆದ ಪೈರು ಕೂಡ ಬೆಳೆಯಲಾಗದೆ ಒಣಗಿ ಹೋಗಿದೆ.  ಕಾವೇರಿ ನದಿ ಉಗಮಸ್ಥಾನವಿರುವ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಾಮರಾಜನಗರ , ಮೈಸೂರು, ಉಡುಪಿ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಗದಗ, ಸೇರಿದಂತೆ ಹಲವು ಜಿಲ್ಲೆಗಳು ಮಳೆ ಅಭಾವವನ್ನು ತೀವ್ರವಾಗಿ ಎದುರಿಸುತ್ತಿವೆ. ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾಗಶಃ ಮಳೆಯ ಕೊರತೆ ಎದುರಿಸತೊಡಗಿವೆ. ಉತ್ತರ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲೂ ಮಳೆ ಕೊರತೆ ಉಂಟಾಗಿದ್ದು, ಬರ ಆವರಿಸಿಕೊಂಡಿದೆ.  ಕಳೆದ 2012ರ ನಂತರ ಈ ವರ್ಷ ಮೂರನೆ ಬಾರಿ ತೀವ್ರ ಮಳೆ ಕೊರತೆಯನ್ನು ಎದುರಿಸುವಂತಾಗಿದೆ. ಇದೇ ಪರಿಸ್ಥಿತಿ ಹಿಂಗಾರಿನಲ್ಲೂ ಮುಂದುವರಿದರೆ ಜನ-ಜಾನುವಾರುಗಳ ಕುಡಿಯುವ ನೀರಿಗೂ ತೀವ್ರ ಸಂಕಷ್ಟ ಉಂಟಾಗುವ ಸಂಭವ ಹೆಚ್ಚಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin