ತಿಂಗಳಾಂತ್ಯಕ್ಕೆ ರಾಜ್ಯದ 1000 ಗ್ರಾಮ ಪಂಚಾಯ್ತಿಗಳಿಗೆ ವೈಫೈ ಸೌಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

Wifi-01

ಬೆಂಗಳೂರು,ಡಿ.19- ಈ ತಿಂಗಳ ಅಂತ್ಯಕ್ಕೆ ರಾಜ್ಯದ ಒಂದು ಸಾವಿರ ಗ್ರಾಮ ಪಂಚಾಯ್ತಿಗಳಿಗೆ ವೈಫೈ ಸೌಲಭ್ಯ ಸಿಗಲಿದೆ. ಮುಂದಿನ 7 ತಿಂಗಳೊಳಗೆ ರಾಜ್ಯದಲ್ಲಿರುವ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ವೈಫೈ ಸೌಲಭ್ಯ ಲಭ್ಯವಾಗಲಿದ್ದು , ಈಗಾಗಲೇ ಶೇ.90ರಷ್ಟು ಕಾರ್ಯ ಪೂರ್ಣಗೊಂಡಿದೆ. ಮಹಾರಾಷ್ಟ್ರದಲ್ಲಿ 600 ಗ್ರಾಮ ಪಂಚಾಯ್ತಿಗಳಿಗೆ ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್‍ವರ್ಕ್ ಸರ್ವೀಸ್, ವೈಫೈ ಸೌಲಭ್ಯವನ್ನು ಕಲ್ಪಿಸಿತ್ತು. ಇದು ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದ್ದರಿಂದ ಇದೇ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಲು ಸರ್ಕಾರ ಮುಂದಾಗಿದೆ.

ಪ್ರತಿ ತಿಂಗಳು ಎರಡೂವರೆ ಲಕ್ಷ ಖರ್ಚು ತಗುಲಲಿದ್ದು ರಾಜ್ಯ ಸರ್ಕಾರ ಮತ್ತು ಗ್ರಾಮ ಪಂಚಾಯಿತಿಗಳೇ ಇದರ ನಿರ್ವಹಣೆಯನ್ನು ನೋಡಿಕೊಳ್ಳಬೇಕಾಗುತ್ತದೆ. ರಾಜ್ಯದಲ್ಲಿ ಒಟ್ಟು 4ಸಾವಿರ ಗ್ರಾಮ ಪಂಚಾಯ್ತಿಗಳಿದ್ದು ಮುಂದಿನ 7 ತಿಂಗಳೊಳಗೆ ವೈಫೈ ಸೌಲಭ್ಯವಿರಲಿದೆ. ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಹಾಗೂ ಸದ್ಯ ಕೇಂದ್ರ ಸೇವೆಯಲ್ಲಿರುವ ಶಿವಶೈಲಂ ಇದರ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಬ್ರಾಡ್‍ಬ್ಯಾಂಡ್ ಸೌಲಭ್ಯ ಕಲ್ಪಿಸಬೇಕೆಂಬುದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯವಾಗಿದೆ.

ಕೇಂದ್ರ ಸರ್ಕಾರವು ಸಹ ಇದಕ್ಕೆ ಕೈ ಜೋಡಿಸಲಿದ್ದು, ಅಗತ್ಯ ನೆರವು ನೀಡುವುದರ ಜೊತೆಗೆ ಆರ್ಥಿಕ ಸಹಾಯವನ್ನು ಒದಗಿಸಲಿದೆ. ನ್ಯಾಷನಲ್ ಆಪ್ಟಿಕಲ್ ಫೈಬರ್ಸ್ ನೆಟ್‍ವರ್ಕ್ ಕಂಪನಿಯು ಪ್ರತಿಯೊಂದು ಗ್ರಾಮ ಪಂಚಾಯ್ತಿಗಳಿಗೆ ಅಳವಡಿಕೆ ಮಾಡಲು ಮುಂದೆ ಬಂದಿದೆ.  ಸದ್ಯಕ್ಕೆ ಮೈಸೂರು, ತುಮಕೂರು, ಗದಗ, ಬಳ್ಳಾರಿ, ಕಲಬುರ್ಗಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ ವೈಫೈ ಸೌಲಭ್ಯ ನೀಡಲಾಗಿದೆ. ಉಳಿದಿರುವ ಅವಧಿಯಲ್ಲಿ ನಾವು 30 ಜಿಲ್ಲೆಗಳ ಎಲ್ಲ ಜಿಪಿಗಳಿಗೂ ವೈಫೈ ನೀಡಲಿದ್ದೇವೆ.

ಈಗಾಗಲೇ ಒಂದು ಸಾವಿರ ಗ್ರಾಮ ಪಂಚಾಯ್ತಿಗಳಿಗೆ ಶೇ.90ರಷ್ಟು ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದರೆ ಮುಂದಿನ ದಿನಗಳಲ್ಲಿ ಎಲ್ಲವೂ ಜಿಪಿಗಳಿಗೂ ಇದು ಲಭ್ಯವಿರಲಿದೆ ಎಂದು ಶಿವಶೈಲಂ ತಿಳಿಸಿದ್ದಾರೆ. ಗ್ರಾಮ ಪಂಚಾಯ್ತಿಯ ಪಿಡಿಒ ಅಧಿಕಾರಿಗಳು ಇದರ ನಿರ್ವಹಣೆ ಮಾಡಲಿದ್ದು , ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಮೊಬೈಲ್ ಮೂಲಕವೇ ಸದಸ್ಯರು ತಿಳಿದುಕೊಳ್ಳುವುದು ಇದರ ಸದುದ್ದೇಶವಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin