ತಿಂಗಳಾಂತ್ಯಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ, 8 ಸಚಿವರು ಔಟ್, 10 ಮಂದಿ ಇನ್

ಈ ಸುದ್ದಿಯನ್ನು ಶೇರ್ ಮಾಡಿ

s-sIDDARAMAIHA-cm

– ಆರ್.ಟಿ.ವಿಠ್ಠಲಮೂರ್ತಿ

ಬೆಂಗಳೂರು, ಜೂ.12-ರಾಜ್ಯ ಸಚಿವ ಸಂಪುಟವನ್ನು ಪುನರ್‍ರಚಿಸಲು ಸಿಎಂ ಸಿದ್ಧರಾಮಯ್ಯ ನಿರ್ಧರಿಸಿದ್ದು ತಿಂಗಳಾಂತ್ಯದ ವೇಳೆಗೆ ಕನಿಷ್ಟ ಎಂಟು ಮಂದಿಯನ್ನು ಸಂಪುಟದಿಂದ ಕೈ ಬಿಟ್ಟು ಹತ್ತು ಮಂದಿಯನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.  ದಿಲ್ಲಿಯ ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು ಹಾಲಿ ಸಚಿವ ಸಂಪುಟದಲ್ಲಿರುವ ಮಂತ್ರಿಗಳ ಪೈಕಿ ಯಾರ್ಯಾರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಾರೆ ಎಂಬ ಕುರಿತು ಈಗಾಗಲೇ ನಡೆಯುತ್ತಿರುವ ಸರ್ವೇ ಮೂಲಕ ಸಿಎಂ ಸಿದ್ಧರಾಮಯ್ಯ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ. ಹಾಲಿ ಸಚಿವ ಸಂಪುಟದಲ್ಲಿರುವ ಅರ್ಧಕ್ಕೂ ಹೆಚ್ಚು ಸಚಿವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸುವುದು ನಿಶ್ಚಿತ ಎಂದು ಸರ್ವೇ ನೀಡಿರುವ ವರದಿಯನ್ನು ಸಿದ್ಧರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದಾರೆ.

ಹೀಗೆ ಸೋಲುವ ಮಂತ್ರಿಗಳ ಪೈಕಿ ಕೆಲ ಮಂತ್ರಿಗಳ ಕ್ಷೇತ್ರದಲ್ಲಿನ ವಿರೋಧಿ ಅಲೆಯನ್ನು ಸರಿಪಡಿಸಿದರೆ ಅವರು ಗೆಲ್ಲಬಹುದು. ಆದರೆ ಕನಿಷ್ಟ ಎಂಟು ಮಂದಿ ಮಂತ್ರಿಗಳು ಸೋಲು ಅನುಭವಿಸುವುದು ನಿಶ್ಚಿತ ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾದ ಪ್ರಾಥಮಿಕ ವರದಿ ಹೇಳಿದೆ. ಒಂದು ಹಂತದಲ್ಲಿ ಸಚಿವ ಸಂಪುಟದಲ್ಲಿ ಖಾಲಿ ಇರುವ ಮಂತ್ರಿ ಸ್ಥಾನಗಳನ್ನು ಭರ್ತಿ ಮಾಡುವುದಷ್ಟಕ್ಕೇ ಗಮನ ಹರಿಸಲು ಸಿಎಂ ಸಿದ್ಧರಾಮಯ್ಯ ನಿರ್ಧರಿಸಿದ್ದರಾದರೂ ಸರ್ವೇ ವರದಿಯಲ್ಲಿ ಸೋಲು ಅನುಭವಿಸುವ ಮಂತ್ರಿಗಳ ಕುರಿತು ಸ್ಪಷ್ಟವಾಗಿ ಹೇಳಿದ ಮೇಲೆ ಸಂಪುಟ ಪುನರ್ರಚನೆ ಮಾಡುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಇದೇ ಮೂಲಗಳು ಹೇಳಿವೆ.

ಮುಂದಿನ ಚುನಾವಣೆಯಲ್ಲಿ ಸೋಲುವ ಮಂತ್ರಿಗಳು ಯಾರು?ಯಾವ ಕಾರಣಕ್ಕಾಗಿ ಅವರು ಸೋಲುತ್ತಾರೆ?ಯಾವ್ಯಾವ ಅಂಶಗಳು ಅವರ ಸೋಲಿಗೆ ಕಾರಣವಾಗುತ್ತಿವೆ? ಸೋಲುವ ಪರಿಸ್ಥಿತಿ ಇದ್ದರೂ ತಪ್ಪುಗಳನ್ನು ಸರಿಪಡಿಸಿಕೊಂಡು ಗೆಲ್ಲುವ ಮಂತ್ರಿಗಳು ಯಾರು? ಅನ್ನುವುದನ್ನು ಸರ್ವೇ ವರದಿ ಸ್ಪಷ್ಟವಾಗಿ ಹೇಳಿದೆ.

ಈ ಹಿನ್ನೆಲೆಯಲ್ಲಿ ಸಚಿವ ಸಂಪುಟವನ್ನು ಪುನರ್ರಚಿಸುವುದು ಸೂಕ್ತ ಎಂದು ಭಾವಿಸಿರುವ ಸಿಎಂ ಸಿದ್ಧರಾಮಯ್ಯ ಎರಡು ದಿನಗಳ ಹಿಂದೆ ಹೈಕಮಾಂಡ್ ವರಿಷ್ಟರ ಜತೆ ಪ್ರಾಥಮಿಕ ಸುತ್ತಿನ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.  ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಹೊಸ ಹುರುಪಿನೊಂದಿಗೆ ಮುನ್ನುಗ್ಗುವಂತಾಗಬೇಕು. ಇದೇ ಕಾರಣಕ್ಕಾಗಿ ಸಚಿವ ಸಂಪುಟವನ್ನು ಪುನರ್ರಚಿಸಿ ಹತ್ತು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕೆಲಸವಾದರೆ ಸಂಘಟನೆಗೆ ಪುನಃ ಚುರುಕು ದಕ್ಕಿದಂತಾಗುತ್ತಿದೆ ಎಂದು ಈ ಚರ್ಚೆಯ ಸಂದರ್ಭದಲ್ಲಿ ಸಿದ್ಧರಾಮಯ್ಯ ವಿವರಿಸಿದ್ದಾರೆ.

ಹೀಗೆ ಅಂತಿಮ ಸುತ್ತಿನ ಸಂಪುಟ ಪುನರ್ರಚನೆ ಕಾರ್ಯ ನಡೆದರೆ ಎಲ್ಲರೂ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಸಿದ್ಧರಾಮಯ್ಯ ವಿವರಿಸಿದ್ದು ವರಿಷ್ಟರು ಕೂಡಾ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಇವೇ ಮೂಲಗಳು ಸ್ಪಷ್ಟಪಡಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin