ತಿಂಗಳಾಂತ್ಯದಲ್ಲಿ ಎಐಸಿಸಿ ಅಧ್ಯಕ್ಷರಾಗಿ ರಾಹುಲ್‍ ಗೆ ಪಟ್ಟಾಭಿಷೇಕ

ಈ ಸುದ್ದಿಯನ್ನು ಶೇರ್ ಮಾಡಿ

Rahul--01

ಬೆಂಗಳೂರು, ಅ.12- ತಿಂಗಳಾಂತ್ಯದಲ್ಲಿ ರಾಹುಲ್‍ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೇರಲಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿಂದು ಕಾಂಗ್ರೆಸ್ ವರಿಷ್ಠರ ಮಹತ್ವದ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ನವದೆಹಲಿಗೆ ತೆರಳಿದ್ದಾರೆ.

ದೀಪಾವಳಿಯಷ್ಟರಲ್ಲಿ ರಾಹುಲ್‍ಗಾಂಧಿಯವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಯಿದ್ದು, ಪದವಿ ಸ್ವೀಕಾರ ಸಮಾರಂಭವನ್ನು ನವದೆಹಲಿಯಲ್ಲಿ ಮಾಡಿ ನಂತರ ಎಐಸಿಸಿ ಮಹಾಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸುವ ಬಗ್ಗೆ ತೀರ್ಮಾನಿಸಲಾಗಿದ್ದು, ಈ ಸಂಬಂಧ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಕಾಂಗ್ರೆಸ್ ನಾಯಕರನ್ನು ನವದೆಹಲಿಗೆ ಕರೆಸಿಕೊಳ್ಳಲಾಗಿದ್ದು, ಇಂದು ಸಂಜೆ 4 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಮಹತ್ವದ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.

ಹಾಲಿ ಎಐಸಿಸಿ ಅಧ್ಯಕ್ಷರಾಗಿರುವ ಸೋನಿಯಾಗಾಂಧಿಯವರು ರಾಹುಲ್‍ಗಾಂಧಿಯವರಿಗೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲಿದ್ದಾರೆ. ರಾಹುಲ್‍ಗಾಂಧಿಯವರು ಎಐಸಿಸಿ ಅಧ್ಯಕ್ಷರಾಗಬೇಕೆಂಬುದು ಕಾಂಗ್ರೆಸ್‍ನ ಎಲ್ಲ ನಾಯಕರ ಬಹುದಿನಗಳ ಅಪೇಕ್ಷೆಯಾಗಿದ್ದು, ಈಗ ಕಾಲ ಕೂಡಿಬಂದಿದೆ. ಅವರು ಅಧ್ಯಕ್ಷರಾಗುವ ಕಾಲ ಕೂಡ ಪಕ್ವವಾಗಿದೆ. ಹೀಗಾಗಿ ಅವರಿಗೆ ಅಧ್ಯಕ್ಷ ಸ್ಥಾನ ವಹಿಸಬೇಕು. 2019ರ ಲೋಕಸಭೆ ಚುನಾವಣೆ ನೇತೃತ್ವವನ್ನು ಅವರು ವಹಿಸಲಿ ಎಂಬ ಹಿನ್ನೆಲೆಯಲ್ಲಿ ತಿಂಗಳಾಂತ್ಯದಲ್ಲಿ ಅವರು ಎಐಸಿಸಿ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಈ ಸಂಬಂಧ ಇಂದು ಮಹತ್ವದ ಮಾತುಕತೆ ನಡೆಯಲಿದೆ.

2018ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬೆಂಗಳೂರಿನಲ್ಲಿ ಅಥವಾ ರಾಜ್ಯದ ಬೇರೆ ಕಡೆ ಎಐಸಿಸಿ ಅಧಿವೇಶನ ನಡೆಸುವ ಉದ್ದೇಶವಿದೆ. ಈ ಸಂಬಂಧ ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶನ ಮಾಡಿ ಚುನಾವಣೆಗೆ ಪಕ್ಷ ಸಂಘಟನೆ ನಡೆಸಲು ಮುಂದಾಗಿದೆ.  ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರಕ್ಕೆ ಬರುವ ರಾಜಕೀಯ ಸನ್ನಿವೇಶ ಪೂರಕವಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ರಾಷ್ಟ್ರದಲ್ಲಿ ಕಾಂಗ್ರೆಸ್‍ಅನ್ನು ಮತ್ತೆ ಕಟ್ಟುವ ಸಂಕಲ್ಪ ಮಾಡಲಾಗಿದೆ. ಈ ಬಗ್ಗೆ ಚುನಾವಣಾ ತಂತ್ರಗಾರಿಕೆ ಬಗ್ಗೆ ನವದೆಹಲಿಯಲ್ಲಿ ಇಂದು ಚರ್ಚೆ ನಡೆಯಲಿದೆ.

ಕೆ.ಸಿ.ವೇಣುಗೋಪಾಲ್ ಅವರು ಪಕ್ಷದ ಉಸ್ತುವಾರಿಯಾದ ಮೇಲೆ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಹೊಸ ಕಾಯಕಲ್ಪ ನೀಡಿದ್ದಾರೆ. ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದಾರೆ. ಬೂತ್ ಸಮಿತಿ ರಚನೆ, ಮನೆ ಮನೆಗೂ ಕಾಂಗ್ರೆಸ್ ಪಕ್ಷ ಮುಂತಾದ ವಿನೂತನ ಕಾರ್ಯಕ್ರಮಗಳನ್ನು ರಚಿಸಿದ್ದಾರೆ.
ಇವುಗಳ ಬಗ್ಗೆಯೂ ಚರ್ಚೆ ಹಾಗೂ ಚುನಾವಣಾ ಸಿದ್ಧತೆ ಬಗ್ಗೆಯೂ ಚರ್ಚೆ, ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಶಾಸಕರ ಬಗ್ಗೆಯೂ ಕೂಡ ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆಯೂ ಕೂಡ ನಿರ್ಧಾರ ಕೈಗೊಳ್ಳಲಾಗುವುದು.

ಪಕ್ಷ ಸಂಘಟನೆಗೆ ಮತ್ತಷ್ಟು ಪದಾಧಿಕಾರಿಗಳನ್ನು ನೇಮಿಸುವ ಸಂಬಂಧವೂ ಕೂಡ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಆಕಾಂಕ್ಷಿಗಳು ನವದೆಹಲಿಗೆ ತೆರಳಿ ತಮ್ಮ ನಾಯಕರ ಜತೆ ಲಾಬಿ ಶುರುವಿಟ್ಟುಕೊಂಡಿದ್ದಾರೆ. 90ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಹಲವರು ಅವಕಾಶ ವಂಚಿತರಾಗಿದ್ದರು. ಅವರಿಗೆ ಎರಡನೆ ಪಟ್ಟಿಯಲ್ಲಿ ಅವಕಾಶ ನೀಡುವುದಾಗಿ ಸೂಚಿಸಲಾಗಿತ್ತು. ಹಾಗಾಗಿ ಚುನಾವಣೆ ಇರುವುದರಿಂದ ಮತ್ತಷ್ಟು ಜನರನ್ನು ಪಕ್ಷದ ಪದಾಧಿಕಾರಿಗಳನ್ನಾಗಿ ನೇಮಿಸುವ ಸಾಧ್ಯತೆ ಇದೆ.

Facebook Comments

Sri Raghav

Admin