ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಅಧಿಕಾರಿಗಳಿಗೆ ಮೇಯರ್ ತಾಕೀತು

ಈ ಸುದ್ದಿಯನ್ನು ಶೇರ್ ಮಾಡಿ

padmavathi
ಬೆಂಗಳೂರು, ಅ.25- ತಿಂಗಳಿಗೊಮ್ಮೆ ಜನಪ್ರತಿನಿಧಿಗಳು, ಸಾರ್ವಜನಿಕರ ಜತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಮೇಯರ್ ಪದ್ಮಾವತಿ ಪೂರ್ವವಲಯದ ಜಂಟಿ ಆಯುಕ್ತರಿಗೆ ಇಂದಿಲ್ಲಿ ತಾಕೀತು ಮಾಡಿದರು.ಪೂರ್ವವಲಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಬಿಎಂಪಿ ಸದಸ್ಯರುಗಳು ಜಂಟಿ ಆಯುಕ್ತರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜಂಟಿ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಮೇಯರ್ ಅವರು, ಜನಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕವಿರಿಸಿಕೊಂಡು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕೆಂದು ಕಿವಿಮಾತು ಹೇಳಿದರು.

ನಿಮ್ಮ ವಲಯ ವ್ಯಾಪ್ತಿಯ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಬೇಕು. ಎಲ್ಲಾ ಕೆಲಸ ನಮ್ಮ ಮೇಲೆ ಹೇರಬೇಡಿ. ಪ್ರತಿ ತಿಂಗಳು ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ಕರೆಯಬೇಕು. ಸಭೆಯಲ್ಲಿ ನಿಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ನಿವಾರಿಸುವತ್ತ ಗಮನಹರಿಸಬೇಕು. ಸಭೆಯಲ್ಲಿ ಕೈಗೊಂಡ ತೀರ್ಮಾನ ಹಾಗೂ ಸಮಸ್ಯೆ ಬಗೆಹರಿಸಲು ಕೈಗೊಂಡ ಕ್ರಮಗಳ ಬಗ್ಗೆ ನನಗೆ ವರದಿ ನೀಡಬೇಕು ಎಂದು ತಾಕೀತು ಮಾಡಿದರು.ಬಿಬಿಎಂಪಿ ಬಜೆಟ್‍ನಲ್ಲಿ ನಗರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ. ಕಾಮಗಾರಿಗಳ ಸಮಗ್ರ ಜಾರಿಯಿಂದಷ್ಟೇ ನಗರದ ಅಭಿವೃದ್ಧಿ ಸಾಧ್ಯ. ಹೀಗಾಗಿ ಅಧಿಕಾರಿಗಳು ಬಜೆಟ್ ಅನುಷ್ಠಾನದತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಪೂರ್ವ ವಲಯ ಅತಿ ಹೆಚ್ಚು ಸಂಗ್ರಹಿಸುವ ಕೇಂದ್ರವಾಗಿದ್ದು, ಕಂದಾಯ ಅಧಿಕಾರಿಗಳು ಬಾಕಿ ಬರಬೇಕಾದ ತೆರಿಗೆ ಸಂಗ್ರಹಿಸಲು ಅಗತ್ಯ ಕಾರ್ಯಕ್ರಮ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಪೂರ್ವ ವಲಯದಲ್ಲಿ ಪ್ಲ್ಯಾಸ್ಟಿಕ್ ನಿಷೇಧಕ್ಕೆ ಕೈಗೊಂಡಿರುವ ಕ್ರಮಗಳನ್ನು ಮೇಯರ್ ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು.ಭವಿಷ್ಯದಲ್ಲಿ ಪ್ಲ್ಯಾಸ್ಟಿಕ್‍ನಿಂದ ಉಂಟಾಗುವ ಅನಾಹುತಗಳನ್ನು ಗಮನದಲ್ಲಿಟ್ಟುಕೊಂಡು ಇಡೀ ವಲಯವನ್ನೇ ಪ್ಲ್ಯಾಸ್ಟಿಕ್ ಮುಕ್ತ ಮಾಡಲು ಮುಂದಾಗಬೇಕು ಎಂದು ಅಧಿಕಾರಿಗಳನ್ನು ಹುರಿದುಂಬಿಸಿದರು.
ಸಭೆಯಲ್ಲಿ ಉಪಮೇಯರ್ ಆನಂದ್, ಪೂರ್ವವಲಯದ 44 ಬಿಬಿಎಂಪಿ ಸದಸ್ಯರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin