ತಿಂಗಳೊಳಗೆ ಸಾಗುವಳಿ ಚೀಟಿ ನೀಡದಿದ್ದರೆ ಶಿಸ್ತುಕ್ರಮ : ಕಾಗೋಡು

ಈ ಸುದ್ದಿಯನ್ನು ಶೇರ್ ಮಾಡಿ

kagodu-thimmappa

ಚಿಕ್ಕಮಗಳೂರು, ಏ.6- ಫಾರಂ ನಂಬರ್ 50-53ರಡಿ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಮುಂದಿನ ಒಂದು ತಿಂಗಳ ಸಾಗುವಳಿ ಚೀಟಿ ನೀಡದಿದ್ದರೆ ತಹಸೀಲ್ದಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಎಚ್ಚರಿಸಿದರು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಬರ ಮತ್ತು ನಮೂನೆ 50-53ರ ಕಂದಾಯ ಕಾಯ್ದೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳಿಗೆ ಚಾಟಿ ಬೀಸಿದರು. ಕಂದಾಯ ಇಲಾಖೆಯು ಸರ್ಕಾರದ ಇಲಾಖೆ ಆಗಿದ್ದು , ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಸರ್ಕಾರ ನಡೆಯುತ್ತವೆ ಎಂದರ್ಥ. ಕಳೆದ 15-20 ವರ್ಷಗಳಿಂದ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಂಥವರಿಗೆ ಭೂ ಮಂಜೂರಾತಿ ಪತ್ರ ಕೊಡದಿದ್ದರೆ ಚುನಾಯಿತ ಪ್ರತಿನಿಧಿಗಳಿಗೆ ಗೌರವ ಇರುವುದಿಲ್ಲ ಎಂದರು.

ಸಾಗುವಳಿ ಪತ್ರ ಕೊಡಿಸಲು ಪಕ್ಷಬೇಧ ಮರೆತು ಸಂಘಟಿತ ಹೋರಾಟ ನಡೆಸುವ ಅಗತ್ಯವಿದೆ. ಅಧಿಕಾರ ವರ್ಗ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಿ ಎಂದರು. ಕಳೆದ ನಾಲ್ಕೈದು ವರ್ಷಗಳಿಂದ ಕಡೂರು ತಾಲ್ಲೂಕು ಬರಗಾಲದಿಂದ ತತ್ತರಿಸುತ್ತಿದೆ. ಕೇವಲ ಒಂದು ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದ್ದು, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಎಂದು ಶಾಸಕ ದತ್ತ ಅವರು ಸಚಿವರ ಗಮನಕ್ಕೆ ತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಟಾಸ್ಕ್‍ಪೋರ್ಸ್ ಸಮಿತಿಯಲ್ಲಿ ಕಾಯ್ದಿರಿಸಿದ ಅನುದಾನದಲ್ಲಿ ಕೂಡಲೇ ಕುಡಿಯುವ ನೀರಿಗೆ ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮೇವಿನ ಕೊರತೆ ನೀಗಿಸಲು ಪಂಜಾಬ್, ಹರ್ಯಾಣ ರಾಜ್ಯಗಳಿಂದ ರೈಲಿನ ಮೂಲಕ ಮೇವು ತರಿಸಿಕೊಳ್ಳಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದರು.
ಸಭೆಯಲ್ಲಿ ಶಾಸಕ ಜೀವರಾಜ್, ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮ ಅಧ್ಯಕ್ಷ ಎ.ಎನ್.ಮಹೇಶ್ ಈ ವೇಳೆ ಮಾತನಾಡಿದರು. ಜಿಲ್ಲಾಧಿಕಾರಿ ಜಿ.ಸತ್ಯವತಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಗಪ್ರಿಯ, ಜಿಪಂ ಉಪಾಧ್ಯಕ್ಷ ರಾಮಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin