ತಿ.ನರಸೀಪುರದಲ್ಲಿ ಬಂದ್‍ಗೆ ವ್ಯಾಪಕ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

T--NARASIPURA
ತಿ.ನರಸೀಪುರ, ಸೆ.10- ತಮಿಳುನಾಡಿಗೆ 15 ಟಿಎಂಸಿ ನೀರು ಹರಿಸಬೇಕೆಂದು ಸುಂಪ್ರಿಕೋರ್ಟ್ ನೀಡಿರುವ ಆದೇಶವನ್ನು ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಸಂಪೂರ್ಣ ಬೆಂಬಲ ದೊರೆಯಿತು.ಬಂದ್ ಹಿನ್ನಲೆಯಲ್ಲಿ ಪಟ್ಟಣದ ವಿವಿಧ ಅಂಗಡಿ ಮಾಲೀಕರು, ಚಿಲ್ಲರೆ ವ್ಯಾಪಾರಸ್ಥರು, ಟೀ ಶಾಪ್, ಹಣ್ಣು, ಹೂ, ತರಕಾರಿ ವ್ಯಾಪಾರಸ್ಥರು ಹೊಟೇಲ್‍ಗಳು, ಚಿತ್ರ ಮಂದಿರ, ಪೆಟ್ರೋಲ್ ಬಂಕ್‍ಗಳು ಖಾಸಗಿ ಬಸ್‍ಗಳು ಸ್ವಂಘೋಷಿತವಾಗಿ ಬೆಳಗಿನಿಂದ ಸಾಯಂಕಾಲದವರೆಗೂ ಸಂಪೂರ್ಣವಾಗಿ ತಮ್ಮ ವ್ಯವಹಾರ ವಹಿವಾಟನ್ನು ಸ್ಘಗಿತಗೊಳಿಸಿದ್ದವು.
ವಿವಿಧ ಕನ್ನಡ ಪರ ಸಂಘಟನೆಗಳಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ: ಬಂದ್‍ಹಿನ್ನಲೆಯಲ್ಲಿ ತಾಲ್ಲೂಕು ರೈತ ಸಂಘ, ದಲಿತ ಸಂಘರ್ಷ ಸಮಿತಿ, ನಾಗರೀಕಾ ಸೇವಾ ವೇದಿಕೆ, ಖಾಸಗಿ ಬಸ್ ಏಜೆಂಟರ್ ಸಂಘ, ಜಯ ಕರ್ನಾಟಕ, ಸೇರಿದಂತೆ ಜನಪರ ಸಂಘಟನೆಗಳು ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಿಂದ ಮೆರವಣಿಗೆ ಹೊರಟು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ನೀರಾವರಿ ಸಚಿವ ಎಂ.ಬಿ.ಪಾಟೀಲ್, ಮತ್ತು ವಕೀಲ ಪಾಲಿನಾರಿಮನ್ ವಿರುದ್ದ ಧಿಕ್ಕಾರ ಘೋಷಣೆಗಳನ್ನು ಕೂಗಿದವು.ನಂತರ ತಾಲ್ಲೂಕು ಕಚೇರಿಗೆ ತೆರಳಿ ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿ ತಹಸೀಲ್ದಾರ್‍ರವರಿಗೆ ಮನವಿ ಸಲ್ಲಿಸಿದರು. ಮುಂಜಾಗ್ರತಾ ಕ್ರಮವಾಗಿ ವೃತ್ತ ನೀರೀಕ್ಷಕ ಮನೋಜ್‍ಕುಮಾರ್ ನೇತೃತ್ವದಲ್ಲಿ ಸಬ್‍ಇನ್ಸ್‍ಪೆಕ್ಟರ್ ಬಿ.ಎಸ್.ರವಿಶಂಕರ್ ಸೂಕ್ತ ಬಂದೋ ಬಸ್ತ್ ಒದಗಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಉಪಾಧ್ಯಕ್ಷ ಕೈಯಂಬಳ್ಳಿ ಜಿ.ನಟರಾಜು, ಕಾರು ಮಾಲೀಕರ ಸಂಘದ ಸದಸ್ಯ ಮೂಗೂರು ರೇವಣ್ಣ, ಮಲ್ಲಪ್ಪ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೊತ್ತೇಗಾಲ ಶಿವಪ್ರಸಾದ್, ಕಬ್ಬು ಬೆಳೆಗಾರರ ತಾಲ್ಲೂಕು ಅಧ್ಯಕ್ಷ ಕಿರಗಸೂರು ಶಂಕರ್, ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಚಂದ್ರಶೇಖರ್, ಜಯ ಕರ್ನಾಟಕ ಸಂಘದ ತಾಲ್ಲೂಕು ಮಹಿಳಾ ಅಧ್ಯಕ್ಷೆ ರೇವತಿ ಮತ್ತಿತರರು ಹಾಜರಿದ್ದರು.ಸಭೆ ಮುಂದೂಡಿಕೆ: ನಿನ್ನೆ ನಡೆಯಬೇಕಿದ್ದ ತಿ.ನರಸೀಪುರ ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ಬಂದ್ ಹಿನ್ನೆಲೆಯಲ್ಲಿ ಸೆ.16 ಕ್ಕೆ ಮುಂದೂಡಲಾಗಿದೆ ಎಂದು ತಹಸೀಲ್ದಾರ್ ಬಿ.ಶಂಕರಯ್ಯ ಪತ್ರಿಕೆಗೆ ತಿಳಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin