ತುಮಕೂರು ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ, ಕಾಳಸಂತೆಕೋರರ ಪಾಲಾಗುತ್ತಿದೆ ಪಡಿತರ

ಈ ಸುದ್ದಿಯನ್ನು ಶೇರ್ ಮಾಡಿ

Annabhagya

ತುಮಕೂರು, ನ.3- ಬಡವರ ಹಸಿವು ನೀಗಿಸುವ ಸಲುವಾಗಿ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಗೆ ಹಲವಾರು ಅಡ್ಡಿ ಎದುರಾಗುತ್ತಿದ್ದು, ಅರ್ಹರಿಗೆ ಸಿಗಬೇಕಾದ ಅಕ್ಕಿ ಮತ್ತಿತರ ಪಡಿತರ ಕಾಳಸಂತೆಕೋರರ ಪಾಲಾಗುತ್ತಿದೆ. ಇಂತಹ ಒಂದು ಮಾಹಿತಿ ಜಿಲ್ಲೆಯ ಹಲವೆಡೆಗಳಿಂದ ಕೇಳಿಬರುತ್ತಿದ್ದು, ಇದರ ಬೆನ್ನು ಹತ್ತಿ ಕಾರ್ಯಾಚರಣೆಗಿಳಿದಾಗ ಪತ್ರಿಕೆಗೆ ಗುಬ್ಬಿ ತಾಲೂಕಿನ ಹಲವೆಡೆ ಅಕ್ರಮಗಳು ನಡೆಯುತ್ತಿರುವುದು ಖಾತ್ರಿಯಾಗಿದೆ. ಈಗಾಗಲೇ ಅಕ್ರಮಗಳನ್ನು ತಡೆಯಲು ಕೂಪನ್ ವ್ಯವಸ್ಥೆ ಮತ್ತು ಪಡಿತರಕ್ಕೆ ಆಧಾರ್ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಿ ಪಾರದರ್ಶಕತೆಗೆ ಆಹಾರ ಇಲಾಖೆ ಭಾರೀ ಪ್ರಯತ್ನ ನಡೆಸುತ್ತಿದ್ದರೂ ಅದನ್ನೂ ಮೀರಿ ಕಾಳಸಂತೆಕೋರರು ಅಕ್ಕಿಯನ್ನು ಕೊಳ್ಳೆ ಹೊಡೆಯುತ್ತಿದ್ದಾರೆ.

ಇದರ ಬಗ್ಗೆ ತಹಸೀಲ್ದಾರ್ ವಿಶ್ವನಾಥ್ ತನಿಖೆ ಆರಂಭಿಸಿದ್ದು, ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ, ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ. ಇನ್ನು 15 ದಿನಗಳೊಳಗಾಗಿ ಅಕ್ರಮದಲ್ಲಿ ತೊಡಗಿದ ನ್ಯಾಯಬೆಲೆ ಅಂಗಡಿಗಳಿಗೆ ಬೀಗ ಹಾಕಿಸುತ್ತೇನೆ ಎಂದು ಈ ಸಂಜೆಗೆ ತಿಳಿಸಿದ್ದಾರೆ. ಹಲವು ಪಡಿತರ ಚೀಟಿಗಳಿಗೆ ಒಂದೇ ಆಧಾರ್ ಕಾರ್ಡ್ ಬಳಸಿಕೊಂಡಿರುವುದು ಕೂಡ ಗೊತ್ತಾಗಿದೆ.ನ್ಯಾಯಬೆಲೆ ಅಂಗಡಿಗಳಿಗೆ ಬರುವ ಅನ್ನಭಾಗ್ಯ ಪಡಿತರವನ್ನು ಫಲಾನುಭವಿಗಳಿಗೆ ಸರಿಯಾಗಿ ವಿತರಿಸದೆ ಅದನ್ನು ಅಕ್ಕಿ ಗಿರಣಿಗಳಿಗೆ ಸಾಗಾಟ ಮಾಡಿ ಅಲ್ಲಿ ಪಾಲಿಷ್ ಮಾಡಿ ವಿವಿಧೆಡೆಗಳಿಗೆ ಭಾರೀ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಇಂತಹ ಅಕ್ರಮ ಕೃತ್ಯ ನಡೆಸುವ ಜಾಲವು ಕೂಡ ಇದೆ ಎಂದು ಹೇಳಲಾಗುತ್ತಿದ್ದು, ಆಗಾಗ ಪೊಲೀಸರ ಕೈಗೆ ಸಿಕ್ಕಿಬೀಳುವಂತಹ ಖದೀಮರು ನಂತರ ಬಿಡುಗಡೆಗೊಳ್ಳುತ್ತಾರೆ. ಸರ್ಕಾರಕ್ಕೆ ಸಡ್ಡು ಹೊಡೆದು ಯಾರ ಅಂಜಿಕೆಯೂ ಇಲ್ಲದೆ ವ್ಯವಸ್ಥಿತವಾಗಿ ದಂಧೆ ನಡೆಸಿಕೊಂಡು ಹೋಗಲಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.  ಈಗಾಗಲೇ ತಪ್ಪಿತಸ್ಥ ಕೆಲವರು ತಲೆಮರೆಸಿಕೊಂಡಿದ್ದು, ಹೇಗಾದರೂ ಮಾಡಿ ಇದರಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಕೂಡ ವಿಶ್ವಸನೀಯ ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin