ತುಮಕೂರು ಜಿಲ್ಲೆಯಿಂದ 300 ಕೋಟಿ ವಾಣಿಜ್ಯ ತೆರಿಗೆ ಸಂಗ್ರಹ : ಟಿ.ಬಿ.ಜಯಚಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

jayachandra

ತುಮಕೂರು,ಆ.15- ಜಿಲ್ಲೆಯಿಂದ ವಾಣಿಜ್ಯ ತೆರಿಗೆ ಸಂಗ್ರಹವು ಪ್ರಸ್ತುತ 300ಕೋಟಿ ರೂಗಳಿಗೆ ಹೆಚ್ಚಿದ್ದು, ಈ ಸಂಗ್ರಹ ಇನ್ನೂ ಹೆಚ್ಚಾಗಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ.ಜಯಚಂದ್ರ ತಿಳಿಸಿದ್ಧಾರೆ.  ನಗರದ ಸಿದ್ದರಾಮೇಶ್ವರ ಬಡಾವಣೆಯಲ್ಲಿ ಅಂದಾಜು 5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ವಾಣಿಜ್ಯ ತೆರಿಗೆ ಇಲಾಖೆ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.ತುಮಕೂರು ಪ್ರಖ್ಯಾತ ಸ್ಥಳವಾಗಿದ್ದು, ಉತ್ತರ ಕರ್ನಾಟಕ ಮತ್ತು ಉತ್ತರ ಭಾರತಕ್ಕೆ ಹೆಬ್ಬಾಗಿಲಿದ್ದಂತೆ. ತುಮಕೂರಿಗೆ ಬಾಂಬೆ ಕಾರಿಡಾರ್, ಹೊನ್ನಾವರ ಕಾರಿಡಾರ್ ಸೇರಿದಂತೆ ಇತರೆ ಹಲವಾರು ಕಾರಿಡಾರ್ ಹರಿದು ಬರುತ್ತಿವೆ. ಜಪಾನ್ ದೇಶದಿಂದಲೂ ಹಲವು ಕಾರಿಡಾರ್‍ಗಳು ಬರುತ್ತಿರುವುದು ಸಂತಸದ ವಿಷಯವಾಗಿದೆ. ಇನ್ನೂ ಮುಂದೆ ತುಮಕೂರು ದಕ್ಷಿಣ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಅಭಿವೃದ್ದಿ ಹೊಂದಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸುಮಾರು 52 ಸಾವಿರ ಕೋಟಿ ವಾಣಿಜ್ಯ ತೆರಿಗೆ ಸಂಗ್ರಹವಾಗುತ್ತಿದ್ದು, ದೇಶದಲ್ಲಿ ಹೆಚ್ಚು ವಾಣಿಜ್ಯ ತೆರಿಗೆ ಸಂಗ್ರಹವಾಗುವ ರಾಜ್ಯ ಕರ್ನಾಟಕ ಎಂದರೆ ತಪ್ಪಾಗಲಾರದು ಎಂದ ಅವರು, ವಾಣಿಜ್ಯ ಇಲಾಖೆಯಲ್ಲಿ ವಾಹನಗಳ ಸಮಸ್ಯೆ ಇದೆ. ಅದರ ಪರಿಹಾರಕ್ಕೆ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಹಾಲಿ ಜಿಲ್ಲೆಯಲ್ಲಿ ಸಂಗ್ರಹವಾಗುತ್ತಿರುವ 300 ಕೋಟಿ ತೆರಿಗೆ ಹಣ 500 ಕೋಟಿ ರೂಗಳಿಗೆ ಹೆಚ್ಚಾಗಬೇಕಾದ ಅನಿವಾರ್ಯತೆ ಇದೆ ಎಂದರು.ನಮ್ಮ ರಾಜ್ಯದಲ್ಲಿ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಇದಕ್ಕೆ ಸುಮಾರು 1 ಲಕ್ಷ ಕೋಟಿ ರೂ ಅಗತ್ಯವಿದೆ. ತುಮಕೂರಿಗೆ ಹೆಚ್ಚು ಕೈಗಾರಿಕೆಗಳು ಬರುತ್ತಿರುವುದರಿಂದ ತುಮಕೂರು ಕೈಗಾರಿಕಾ ನಗರವಾಗಿ ಗುರುತಿಸಲ್ಪಡುತ್ತಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ತೆರಿಗೆ ಸಂಗ್ರಹ ಆ ರಾಜ್ಯದ ಸ್ಥಿತಿಗತಿಗಳನ್ನು ಪ್ರತಿಬಿಂಬಿಸುತ್ತದೆ. 2015-16 ರಲ್ಲಿ 48 ಸಾವಿರ ಕೋಟಿ ವಾಣಿಜ್ಯ ತೆರಿಗೆ ಸಂಗ್ರಹವಾಗಿತ್ತು. ಈ ಗುರಿ 2016-17ರಲ್ಲಿ 52 ಸಾವಿರ ಕೋಟಿ ಸಂಗ್ರಹಿಸಲು ನಾವು ಇನ್ನು ಹೆಚ್ಚಿನ ಆಸಕ್ತಿ ತೋರಬೇಕಾಗಿದೆ. ಹೆಚ್ಚು ಹೆಚ್ಚು ತೆರಿಗೆ ಸಂಗ್ರಹವಾದಲ್ಲಿ ಇದು ರಾಜ್ಯದ ಅಭಿವೃದ್ದಿ ಸಹಕಾರಿಯಾಗಲಿದೆ ಎಂದರು.ತುಮಕೂರಿಗೆ ಬೆಂಗಳೂರಿನ ಮೆಟ್ರೋ ಯೋಜನೆಯನ್ನು ವಿಸ್ತರಿಸುವುದು ನಮ್ಮ ಕನಸಾಗಿದ್ದು, ಈ ಕನಸು ಸಾಕಾರವಾಗಲು ಎಲ್ಲರ ಸಹಕಾರ ಕೋರಿದರು.  ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ದೇಶದ ಅಭಿವೃದ್ದಿ ತೆರಿಗೆ ಸಂಗ್ರಹದಿಂದ ಮಾತ್ರ ಸಾಧ್ಯ ಎಂಬ ಮನೋಭಾವ ಜನರಲ್ಲಿ ಮೂಡುವಂತಾಗಬೇಕು, ಎಲ್ಲದಕ್ಕೂ ಸರಕಾರವನ್ನೇ ಯಾಚಿಸುವ ನಾವು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದೇವೆಯೇ ಎಂದು ಪ್ರಶ್ನೆ ಹಾಕಿಕೊಳ್ಳಬೇಕು. ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರುಕೈಗಾರಿಕಾಭಿವೃದ್ದಿಯಲ್ಲಿ ಪ್ರಗತಿ ಹೊಂದುತ್ತಿದೆ ಎಂದರು.ಡಾ.ಎಸ್.ರಫೀಕ್, ಲೀಡ್ಕರ್ ಅಧ್ಯಕ್ಷ ಆರ್.ರಾಮಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಇಂಜಿನಿಯರ್‍ಗಳಾದ ಶಿವಶಂಕರ್, ಹೆಚ್.ಎನ್.ಪ್ರಸಾದ್ ಹಾಗೂ ರವೀಶಯ್ಯ ಮತ್ತಿತರರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin