ತುಮಕೂರು ರೈಲು ನಿಲ್ದಾಣದಲ್ಲಿಲ್ಲ ಸೂಕ್ತ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

Tumakuru--01

– ಸಿ.ಎಸ್.ಕುಮಾರ್, ಚೇಳೂರು
ರಾಜಧಾನಿಗೆ ಹೆಬ್ಬಾಗಿಲಂತೆ ಇರುವ ಕಲ್ಪತರು ನಾಡಿನ ರೈಲ್ವೆ ನಿಲ್ದಾಣದಲ್ಲಿ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಗಳ ಸರಮಾಲೆ ಹಲವು ವರ್ಷಗಳಿಂದ ಇದ್ದರೂ ಗಮನ ಹರಿಸದೆ ಇರುವುದು ಸಾವಿರಾರು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ 20 ರಿಂದ 30 ವರ್ಷಗಳ ಹಿಂದೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸಂಚರಿಸುತ್ತಿದ್ದವು. ಪ್ರಯಾಣಿಕರ  ಸಂಖ್ಯೆಯೂ ಸಹ ಅಷ್ಟೆ ಕಡಿಮೆ ಇತ್ತು.  ಆದರೆ, ಈಗ ರೈಲುಗಳ ಸಂಖ್ಯೆ ಹಾಗೂ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಅಷ್ಟೇ ಸಮಸ್ಯೆಗಳ ಸರಮಾಲೆಯೂ ಇದೆ.  ರೈಲುಗಳು ತುಮಕೂರು ರೈಲ್ವೆ ನಿಲ್ದಾಣದಲ್ಲಿರುವ ಉಪ ಪೊಲೀಸ್ ಠಾಣೆಯಲ್ಲಿ ಕೇವಲ ಇಬ್ಬರು ಪೊಲೀಸ್ ಕಾನ್‍ಸ್ಟೆಬಲ್ ಇದ್ದರು. ಆದರೆ, ವರ್ಷಗಳು ಕಳೆದಂತೆ ತುಮಕೂರು-ಬೆಂಗಳೂರು… ನಂತರದ ದಿನಗಳಲ್ಲಿ ಒಬ್ಬ ಮುಖ್ಯ ಪೇದೆ, ಮೂವರು ಕಾನ್‍ಸ್ಟೆಬಲ್‍ಗಳು ಸೇರಿ ನಾಲ್ಕು ಮಂದಿ ಇದ್ದಾರೆ. ಇದರಲ್ಲೂ ಒಬ್ಬ ಕಾನ್‍ಸ್ಟೆಬಲ್‍ಅನ್ನು ಯಲಹಂಕ ರೈಲ್ವೆ ಠಾಣೆಗೆ ಹಾಕಿದ್ದಾರೆ. ಸಬ್‍ಇನ್ಸ್‍ಪೆಕ್ಟರ್ ಪೋಸ್ಟ್ ಕೂಡ ಯಲಹಂಕಕ್ಕೆ ಇದೆ. ಇದೆಲ್ಲ 25-30 ವರ್ಷಗಳ ಹಿಂದಿನ ಕಥೆ.ಆದರೆ, ತುಮಕೂರು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಬೆಂಗಳೂರು-ತುಮಕೂರು ಮೂಲಕ ಹೊರ ಜಿಲ್ಲೆಗಳು, ಹೊರ ರಾಜ್ಯಗಳಿಗೆ ಬೇಕಾದಷ್ಟು ರೈಲು ಸಂಚರಿಸುತ್ತಿವೆ. ಪ್ರತಿನಿತ್ಯ ತುಮಕೂರು ಮಾರ್ಗದಲ್ಲಿ ಸುಮಾರು 70 ಸಾವಿರ ಪ್ರಯಾಣಿಕರು ಸಂಚರಿಸುತ್ತಾರೆ.  ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿ, ದಾಬಸ್‍ಪೇಟೆಯಿಂದ ಹಾಸನ ಜಿಲ್ಲೆಯ ಅರಸೀಕೆರೆವರೆಗೂ ಇದೆ.
ರೈಲುಗಳು ಬಂದ ಸಂದರ್ಭದಲ್ಲಿ ಜೇಬುಗಳ್ಳರು ಹೆಚ್ಚಾಗಿದ್ದಾರೆ. ಸರಗಳ್ಳರು, ರೈಲು ಬೋಗಿಗಳಲ್ಲಿ ಪ್ರಯಾಣಿಕರ ಲಗೇಜು ಕದಿಯುವಂತೆ ಪ್ರಕರಣ ಮರುಕಳಿಸುತ್ತಲೇ ಇವೆ. ಇದಕ್ಕೆಲ್ಲ ಕಡಿವಾಣ ಹಾಕುವವರೇ ಇಲ್ಲ.

ರೈಲಿಗೆ ಸಿಕ್ಕಿ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರಲ್ಲಿ ಕೊಲೆ ಮಾಡಿ ಹಳಿ ಮೇಲೆ ತಂದು ಹಾಕಿ ಆತ್ಮಹತ್ಯೆ ಎಂಬಂತೆ ಬಿಂಬಿಸುವುದು, ಆತ್ಮಹತ್ಯೆ ಪ್ರಕರಣಗಳು, ಆಕಸ್ಮಿಕವಾಗಿ ರೈಲಿಗೆ ಸಿಕ್ಕಿ ಸಾವನ್ನಪ್ಪುವವರ ಪ್ರಕರಣವೂ ನಡೆಯುತ್ತಲೇ ಇವೆ. ಇದೇನೇ ಆಗಿದ್ದರೂ ಇದನ್ನೆಲ್ಲ ಪರಿಶೀಲನೆ ಮಾಡಲು ಸರಿಯಾದ ಸಿಬ್ಬಂದಿಯೇ ಇಲ್ಲ.  ಏನಾದರೂ ಘಟನೆ ನಡೆದಾಗ ಯಲಹಂಕದಿಂದಲೇ ಸಬ್‍ ಇನ್ಸ್ಪೆಕ್ಟರ್ ಬರಬೇಕು. ಇದರಿಂದಾಗಿ ಎಷ್ಟೋ ಪ್ರಕರಣಗಳು ಮುಚ್ಚಿಹೋಗಿವೆ. ತನಿಖೆ ಮಾಡಲು ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ.

ಒಂದು ವೇಳೆ ಹಳಿಯ ಮೇಲೆ ಸತ್ತಿದ್ದರೆ ಮಾರನೆ ದಿನ ಗಾರ್ಡ್ ಬೆಳಗ್ಗೆ ಬಂದು ಹಳಿ ಪರೀಕ್ಷೆ ಮಾಡುವಾಗಷ್ಟೆ ವಿಷಯ ಬೆಳಕಿಗೆ ಬರುತ್ತದೆ. ಅಷ್ಟರಲ್ಲಿ ನಾಯಿಗಳು ಕಚ್ಚಿ ದೇಹ ಗುರುತು ಸಿಗದಂತೆ ಮಾಡಿರುತ್ತವೆ. ನಂತರ ದೇಹವನ್ನು ಹೇಗೋ ತಂದು ಆಸ್ಪತ್ರೆಯಲ್ಲಿ ಇಡುತ್ತಾರೆ. ಒಂದು ನಾಲ್ಕು ದಿನ ನೋಡಿ ಸುಮ್ಮನಾಗುತ್ತಾರೆ. ಆತ್ಮಹತ್ಯೆಯೋ, ಕೊಲೆಯೋ ಎಂದು ತಿಳಿಯುವುದೇ ಇಲ್ಲ. ಕಡೆಗೆ ರೈಲಿಗೆ ಸಿಕ್ಕಿ ಸಾವು ಪ್ರಕರಣ ದಾಖಲಿಸಿ ಕೈ ಚೆಲ್ಲುತ್ತಾರೆ. ಇದು ಇಂದು ನಿನ್ನೆಯ ವಿಷಯವಲ್ಲ, ಸುಮಾರು ಮೂವತ್ತು ವರ್ಷಗಳ ಕಥೆ.

ಕೇಂದ್ರ, ರಾಜ್ಯ ಸರ್ಕಾರಗಳು ರೈಲ್ವೆ ಇಲಾಖೆಯನ್ನು ಆಧುನೀಕರಣಗೊಳಿಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಮೊದಲು ಭದ್ರತೆಗೆ ಒತ್ತು ನೀಡುವ ಅತ್ಯಗತ್ಯವಿದೆ.   ನಮ್ಮ ಜಿಲ್ಲೆಯವರೇ ಆದ ರಾಜ್ಯ ಸರ್ಕಾರದ ಪ್ರಮುಖ ಹುದ್ದೆ ಹೊಂದಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇತ್ತ ಗಮನ ಹರಿಸಬೇಕು. ರೈಲ್ವೆ ಉಪಠಾಣೆ ಪಿಎಸ್‍ಐ ಪೋಸ್ಟ್ ಮಂಜೂರು ಮಾಡಿಸಿಕೊಡಬೇಕಿದೆ. ಈ ಉಪಠಾಣೆಯನ್ನು ಮೇಲ್ದರ್ಜೆಗೇರಿಸಬೇಕು, ಸಿಬ್ಬಂದಿ ಸಂಖ್ಯೆ ಹೆಚ್ಚಳ ಮಾಡುವ ಮೂಲಕ ಅಪರಾಧ ಪ್ರಕರಣಗಳಿಗೆ ತಡೆ ಹಾಕಬೇಕು.  ಗಾಂಜಾ, ಅಫೀಮು ಮತ್ತಿತರ ಮಾದಕ ವಸ್ತುಗಳು, ಬಂದೂಕುಗಳು, ಮಾನವ ಕಳ್ಳ ಸಾಗಣೆ ಮಾಡುವಂತಹ ಪ್ರಕರಣಗಳು ಹೆಗ್ಗಿಲ್ಲದೆ ಸಾಗಿವೆ. ದ್ವಿಚಕ್ರ ವಾಹನ ಕಳ್ಳರು ಹೆಚ್ಚಾಗಿದ್ದಾರೆ.  ಮೊದಲು ರೈಲ್ವೆ ಉಪ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ ಈ ಎಲ್ಲ ಅಪರಾಧಗಳಿಗೆ ಕಡಿವಾಣ ಹಾಕಲಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin