ತೆಂಗು-ಕೊಬ್ಬರಿ, ಅಡಿಕೆಗೆ ಬೆಂಬಲ ಬೆಲೆ

ಈ ಸುದ್ದಿಯನ್ನು ಶೇರ್ ಮಾಡಿ

kaduru

ಕಡೂರು,ಸೆ.23- ತಾಲ್ಲೂಕಿನಾದ್ಯಂತ ಭೀಕರ ಬರಗಾಲ ತಾಂಡವವಾಡುತ್ತಿದ್ದು, ರೈತರು ಬೆಳೆದ ಈರುಳ್ಳಿ, ತೆಂಗು, ಅಡಿಕೆ, ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕಿದೆ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತಿ ಸದಸ್ಯರು ಒತ್ತಾಯಿಸಿದರು. ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಪ್ರತಿಕ್ರಿಯಿಸಿದ ದತ್ತಾ ಅವರು, ಬೆಂಬಲ ಬೆಲೆ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ರೈತರು ಬೆಳೆದ ಈರುಳ್ಳಿ, ತೆಂಗು, ಅಡಿಕೆ ಹಾಗೂ ಕೊಬ್ಬರಿ ಬೆಲೆ ಕುಸಿದಿದೆ. ತಕ್ಷಣ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿ ರೈತರ ನೆರವಿಗೆ ಬರಬೇಕಿದೆ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಕ್ಷೇತ್ರದಾದ್ಯಂತ ಎಂಟು ಸಾವಿರ ವಸತಿ ರಹಿತರಿದ್ದಾರೆ. ಕಂದಾಯ ಭೂಮಿ ಲಭ್ಯವಿರುವ ಗ್ರಾಮಗಳಲ್ಲಿ ನಿವೇಶನಕ್ಕೆ ಉಪಯೋಗಿಸಿ ಕೊಳ್ಳಬಹುದಾಗಿದೆ ಖಾಸಗಿ ಜಮೀನು ಕೊಳ್ಳಲು ಎಕರೆಗೆ ಒಂಭತ್ತು ಲಕ್ಷ ರೂ. ಸರ್ಕಾರದಿಂದ ಕೊಡಿಸಿಕೊಡಲಾಗುವುದು ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು.ಜಿಪಂ ಸದಸ್ಯ ಮಹೇಶ್ ಒಡೆಯರ್ ಮಾತನಾಡಿ, ಸಾಮಾನ್ಯ ವರ್ಗದವರು ಮನೆ ಕಟ್ಟಿಕೊಳ್ಳಲು ಈ ಸಾಲಿನಲ್ಲಾದರೂ ಅವಕಾಶ ಕಲ್ಪಿಸಿ, ಪರಿಶಿಷ್ಟ ಜನಾಂಗದವರಿಗೆ ಎಷ್ಟು ಮನೆಗಳು ಬರುತ್ತಿವೆ. ಫಲಾನುಭವಿಗಳು ಇಲ್ಲದೆ ಬಂದ ಮನೆಗಳು ವಾಪಸ್ ಹೋಗುತ್ತಿವೆ. ಶಾಸಕರು ಸರ್ಕಾರ ಮಟ್ಟದಲ್ಲಿ ಹೆಚ್ಚಿನ ಪ್ರಯತ್ನ ನಡೆಸಬೇಕಿದೆ ಎಂದರು.
ಇದಕ್ಕೆ ಉತ್ತರಿಸಿ ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ಸಾಮಾನ್ಯ ವರ್ಗದವರಿಗೆ ಈಗಾಗಲೇ 681 ಮನೆಗಳನ್ನು ತರಲಾಗಿದೆ. ಇನ್ನೂ ಹೆಚ್ಚುವರಿ 500 ಮನೆಗಳನ್ನು ತರಲಾಗುವುದು. ಹಂಚಿಕೆಯಲ್ಲಿ ಕೆಟ್ಟ ಹೆಸರು ತರಬಾರದು. ಗ್ರಾಮ ಪಂಚಾಯಿತಿ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸಿಬೇಕೆಂದರು. ಕುಡಿಯುವ ನೀರಿಗೆ ಎಲ್ಲೆಲ್ಲಿ ಸಮಸ್ಯೆಯಿದೆ, ತೀವ್ರತೆ ಇರುವ ಕಡೆಗಳಲ್ಲಿ ಹೊಸ ಬೋರ್‍ವೆಲ್ ಕೊರೆಸಲು ರಿಪೇರಿಗೆ ಜೀವಜಲ ಇರುವ ಕಡೆ ಪೈಪ್‍ಲೈನ್ ಮೂಲಕ ನೀರು ತರಲು ಹಾಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ನೀಡಲು ಹಣದ ಕೊರತೆಯಿಲ್ಲ. ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಒಂದು ವಾರದೊಳಗೆ ಕ್ರಿಯಾ ಯೋಜನೆ ತಯಾರಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಗೋಪಾಲ್‍ಕೃಷ್ಣ , ತಾಪಂ ಅಧ್ಯಕ್ಷೆ ರೇಣುಕಾ ಉಮೇಶ್, ಉಪಾಧ್ಯಕ್ಷ ರುದ್ರಮೂರ್ತಿ, ತಹಸೀಲ್ದಾರ್ ಭಾಗ್ಯ, ಜಿಪಂ ಸದಸ್ಯರಾದ ಕಾವೇರಿ ಲಕ್ಕಪ್ಪ, ಲೋಲಾಕ್ಷಿಬಾಯಿ, ಲಕ್ಕಮ್ಮ ಸಿದ್ಧಪ್ಪ ತಾಲ್ಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

 

ಮೂರು ಹೋಬಳಿ ಕೇಂದ್ರಗಳಲ್ಲಿ ಗೋಶಾಲೆ:ದತ್ತ
ತಾಲ್ಲೂಕಿನಾದ್ಯಂತ ಕಳೆದ ಹಲವಾರು ವರ್ಷಗಳಿಂದ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿರುವುದರಿಂದ ಯಾವುದೆ ಬೆಳೆ ಬೆಳೆಯಲು ಸಾಧ್ಯವಾಗದೇ ದನಗಳಿಗೂ ಮೇಯಲು ಮೇವು ದೊರಕದೇ ಇರುವುದರಿಂದ ಪಂಚನಹಳ್ಳಿ, ಶಿವಗಂಗೆ ಹಾಗೂ ಚೌಳಹಿರಿಯೂರು ಮೂರು ಕಡೆಗಳಲ್ಲಿ ಗೋಶಾಲೆ ಪ್ರಾರಂಭಿಸಲಾಗುವುದು ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಜಿಪಂ ಸದಸ್ಯರಾದ ಶರತ್ ಕೃಷ್ಣಮೂರ್ತಿ, ವನಮಾಲ ದೇವರಾಜ್ ಹಾಗೂ ಮಹೇಶ್ ಒಡೆಯರ್ ಅವರುಗಳು ಮಳೆಯ ಕೊರತೆಯಿಂದಾಗಿ ರಾಗಿಯ ಫಸಲು ಇಲ್ಲದಾಗಿದ್ದು, ಗೋಶಾಲೆ ಹಾಗೂ ಮೇವು ಬ್ಯಾಂಕ್ ಸ್ಥಾಪಿಸಬೇಕೆಂದು ಶಾಸಕರಲ್ಲಿ ಒತ್ತಾಯಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ದತ್ತಾ, ಗೋಶಾಲೆಗಳಲ್ಲಿ ರಾಗಿಯ ಮೇವು ನೀಡಲು ಸಾಧ್ಯವಾಗುತ್ತಿಲ್ಲ. ಭತ್ತದ ಮೇವು ದೊರಕುತ್ತಿದ್ದು, ಇದಕ್ಕೆ ಬೇಡಿಕೆ ಇಲ್ಲದಾಗಿದೆ. ಕಳೆದ 2012 ರಲ್ಲಿ ರಾಗಿ ಮೇವಿಗೆ ಕ್ವಿಂಟಾಲ್‍ಗೆ ಮೂರು ಸಾವಿರ ರೂ. ನಿಗದಿಗೊಳಿಸಲಾಗಿತ್ತು. ಸರ್ಕಾರ ಈಗಲೂ ಅದೇ ದರವನ್ನು ನಿಗದಿಗೊಳಿಸಿರುವುದರಿಂದ ರೈತರು ರಾಗಿ ಮೇವು ಮಾರಾಟ ಮಾಡಲು ಮುಂದೆ ಬರುತ್ತಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ಭತ್ತದ ಮೇವನ್ನೇ ಗೋಶಾಲೆಗಳಲ್ಲಿ ನೀಡಲಾಗುವುದು ಎಂದರು.
ಕೃಷಿ ಅಧಿಕಾರಿ ಶಿವಕುಮಾರ್ ಮಾಹಿತಿ ನೀಡಿ, ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಡಿ ಬೆಳೆ ನಷ್ಟ ಪರಿಹಾರ ನೀಡಲು ಕೆಲವು ಬೆಳೆಗಳನ್ನು ಹಾಗೂ ರಾಗಿ ಬೆಳೆಯನ್ನು ಸೇರಿಸಲಾಗಿದೆ. ಮಳೆ ಬಾರದೇ ಇರುವುದರಿಂದ 55 ಸಾವಿರ ಹೆಕ್ಟೇರ್‍ನಲ್ಲಿ ಬೆಳೆ ನಷ್ಟವಾಗಿದೆ ಎಂಬ ಮಾಹಿತಿ ಸರ್ಕಾರಕ್ಕೆ ಈಗಾಗಲೇ ಕಳುಹಿಸಲಾಗಿದೆ. 200 ಹೆಕ್ಟೇರ್‍ನಲ್ಲಿ ಭತ್ತ ಬೆಳೆಯಲಾಗಿದೆ. ಮುಸುಕಿನ ಜೋಳದ ಬೆಳೆ ಸಾಧಾರಣವಾಗಿ ಬಂದಿದೆ. ಬಿತ್ತನೆ ಮಾಡದೇ ಇರುವುದ ರೈತರಿಗೂ ಸಹ ಫಸಲ್ ವಿಮಾ ಯೋಜನೆಯಡಿಯಲ್ಲಿ ಪರಿಹಾರ ದೊರಕಲಿದೆ ಎಂದರು.

 

 

► Follow us on –  Facebook / Twitter  / Google+

Facebook Comments

Sri Raghav

Admin