ತೆರೆಗೆ ಮೇಲೆ ‘3 ಗಂಟೆ 30 ದಿನ 30 ಸೆಕೆಂಡ್’

ಈ ಸುದ್ದಿಯನ್ನು ಶೇರ್ ಮಾಡಿ

3-30-30

ಇತ್ತೀಚೆಗೆ ಬರುತ್ತಿರುವ ಬಹುತೇಕ ಚಿತ್ರಗಳು ತಮ್ಮ ಶೀರ್ಷಿಕೆ ಹಾಗೂ ಪೋಸ್ಟರ್ ಮೂಲಕ ಗಮನಸೆಳೆಯುವುದು ಸರ್ವೆ ಸಾಮಾನ್ಯವಾಗಿದೆ. ಆ ನಿಟ್ಟಿನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ 3 ಗಂಟೆ 30 ದಿನ 30 ಸೆಕೆಂಡ್ ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಥಿಯೇಟರ್‍ಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಚನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಈ ಕುರಿತು ಒಂದಷ್ಟು ಮಾಹಿತಿಗಳನ್ನು ನೀಡಲೆಂದು ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು.

ಚಿತ್ರದ ನಿರ್ಮಾಪಕ ಚಂದ್ರಶೇಖರ್ ಆರ್. ಪದ್ಮಶಾಲಿ, ನಿರ್ದೇಶಕ ಮಧುಸೂದನ್, ನಾಯಕ ಅರುಣ್‍ಗೌಡ, ನಾಯಕಿ ಕಾವ್ಯ ಶೆಟ್ಟಿ, ನಟ ದೇವರಾಜ್ ಸೇರಿದಂತೆ ಇಡೀ ಚಿತ್ರತಂಡ ಹಾಜರಿದ್ದು ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದರು. ಈಗಾಗಲೇ ಪ್ರೇಕ್ಷಕರು ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. ಇದೇ ಆತ್ಮವಿಶ್ವಾಸದಲ್ಲಿರುವ ಚಿತ್ರತಂಡ ಹೊರನಾಡ ಕನ್ನಡಿಗರಿಗೆ ಕೂಡ ಚಿತ್ರವನ್ನು ತೋರಿಸುವ ಉದ್ದೇಶದಿಂದ ವಿದೇಶಗಳಲ್ಲೂ ಸಿನಿಮಾವನ್ನು ಪ್ರದರ್ಶನ ಮಾಡಲು ನಿರ್ಧರಿಸಿದೆ. ಜ.19ರಂದು ರಿಲೀಸ್ ಆಗುತ್ತಿರುವ 3 ಗಂಟೆ 30 ದಿನ 30 ಸೆಕೆಂಡ್ ಚಿತ್ರವನ್ನು ಮುಂದಿನ ದಿನಗಳಲ್ಲಿ ಯುಎಸ್‍ನಲ್ಲಿ ಕೂಡ ಬಿಡುಗಡೆ ಮಾಡಲಾಗುತ್ತಿದೆ. ಅದಾದ ನಂತರ ಆಸ್ಟ್ರೇಲಿಯಾ, ಯೂರೋಪ್ ಹಾಗೂ ಲಂಡನ್ ದೇಶಗಳಲ್ಲಿ ರಿಲೀಸ್ ಮಾಡಲು ವಿತರಕರು ಯೋಜನೆ ಹಾಕಿದ್ದಾರೆ. ಇನ್ನುಳಿದಂತೆ ಹಲವು ವರ್ಷಗಳಿಂದ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡಿರುವ ಮಧುಸೂದನ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಶ್ರೀನಿವಾಸ್ ರಾಮಯ್ಯ ಈ ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿದ್ದು, ಚಂದ್ರಶೇಖರ್ ಆರ್. ಪದ್ಮಶಾಲಿ ಚಿತ್ರದ ನಿರ್ಮಾಣ ಮಾಡಿದ್ದಾರೆ. ಡೈನಾಮಿಕ್ ಹೀರೋ ದೇವರಾಜ, ಸುಧಾರಾಣಿ, ಸುಂದರ್, ಯಮುನಾ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ಈ ಚಿತ್ರಕ್ಕಿದ್ದು, ಒಟ್ಟು 6 ಹಾಡುಗಳು ಈ ಚಿತ್ರದಲ್ಲಿವೆ. ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿರುವ ಅರುಣ್‍ಗೌಡ ಒಬ್ಬ ಮರದ ಕೆಳಗಿನ ಲಾಯರ್ ಪಾತ್ರ ನಿರ್ವಹಿಸಿದ್ದಾರೆ. ಆತ ಎಂದೂ ಕೇಸುಗಳಿಗೆ ಕಾದವನಲ್ಲ. ಆತನ ಬಳಿಗೇ ಕೇಸ್‍ಗಳು ತಂತಾನೇ ಹುಡುಕಿಕೊಂಡು ಬರುತ್ತದೆ. ಎಂಥಾ ಕ್ಲಿಷ್ಟಕರ ಕೇಸ್ ಆಗಿದ್ರೂ ಸುಲಭದಲ್ಲಿ ಬಗೆ ಹರಿಸಬಲ್ಲ ಚಾಣಾಕ್ಷ. ಆತ ಕೇಸ್ ಫೈಲ್ ಹಿಡಿದು ಎಂದಿಗೂ ಕೋರ್ಟ್ ಕಚೇರಿ ಮೆಟ್ಟಿಲು ಹತ್ತಿದವನಲ್ಲ. ಆದರೆ ಅವನ ತಂತ್ರಗಾರಿಕೆಯಿಂದ ಗೆಲುವು ಸಾಧಿಸುತ್ತಾನೆ. ಅವಿನಾಶ್ ಜೀವನದಲ್ಲಿ ನಡೆಯುವ ಒಂದು ಘಟನೆ ಆತನ ಜೀವನವನ್ನೇ ಬದಲಾಯಿಸಿಬಿಡುತ್ತದೆ. ಒಬ್ಬ ಟಿವಿ ಆಂಕರ್ ಜೊತೆ ಜಿದ್ದಾ ಜಿದ್ದಿ ನಡುವೆ ಸೋಲು ಅನುಭವಿಸ ಬೇಕಾಗುತ್ತದೆ.

ಸದಾ ತಂತ್ರಗಾರಿಗೆ ಮಾಡಿಕೊಂಡು ಮೆರೆಯುತ್ತಿದ್ದ ಅವಿನಾಶ್‍ಗೆ ತನ್ನ ಆಟದಿಂದ ತನಗೇ ಉರುಳಾಗುವಂಥ ಸಂದರ್ಭ ಎದುರಾಗುತ್ತದೆ. 3 ಗಂಟೆಯ ಹುಡುಗಾಟ 30 ದಿನದ ತೀವ್ರ ಪರದಾಟಕ್ಕೆ ಎಡೆಮಾಡಿ ಕೊಡುತ್ತದೆ. 30 ಸೆಕೆಂಡಿನ ಅಳಿವು ಉಳಿವಿನ ಹೋರಾಟದಲ್ಲಿ ಅವಿನಾಶ್ ಗೆಲ್ಲುತ್ತಾನೋ ಸೋಲುತ್ತಾನೋ ಎನ್ನುವುದೇ ಈ ಚಿತ್ರದ ಕಥೆ. ಅರುಣ್‍ಗೌಡ ಅವಿನಾಶ್ ಪಾತ್ರದಲ್ಲಿ ನಟಿಸಿದ್ದಾರೆ. ನಟ ದೇವರಾಜ್ ಮಾತನಾಡಿ ಚಿತ್ರದಲ್ಲಿ ನನ್ನದು ಚಿಕ್ಕ ಪಾತ್ರವಾದರೂ ತುಂಬಾ ಪ್ರಮುಖವಾಗಿದೆ. ಹೊಸಬರ ಜೊತೆ ಕೆಲಸ ಮಾಡಿದ್ದು ಖುಷಿ ತಂದಿದೆ ಎಂದು ಹೇಳಿದರು. ನಾಯಕಿ ಕಾವ್ಯ ಶೆಟ್ಟಿ ನ್ಯೂಸ್ ಚಾನೆಲ್‍ವೊಂದರ ಹೆಡ್ ಆಗಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಬಹಳಷ್ಟು ನಿರೀಕ್ಷೆಗಳೊಂದಿಗೆ ಸಿದ್ದ ಮಾಡಿರುವ ಈ ಮೂರರ ಕರಾಮತ್ತನ್ನು ತೆರೆ ಮೇಲೆ ಪ್ರೇಕ್ಷಕರು ನೋಡಿ ಯಾವ ಪರಿಯಿದೆ ಎಂದು ನಿರ್ಧರಿಸಲಿದ್ದಾರೆ.

Facebook Comments

Sri Raghav

Admin