ತೆರೆಯ ಮೇಲೆ ‘ಹಲೋ ಮಾಮ’

ಈ ಸುದ್ದಿಯನ್ನು ಶೇರ್ ಮಾಡಿ

hello-mama-1
ನಗೆಯ ಹೊಳೆ ಹರಿಸಲು ನಟ-ನಿರ್ದೇಶಕ ಮೋಹನ್ ತೆರೆ ಮೇಲೆ ಬರುತ್ತಿದ್ದಾರೆ. ಅದು ಹಲೋ ಮಾಮ ಎಂದು ಹೇಳುತ್ತ. ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಈ ಹಾಸ್ಯಮಯ ಚಿತ್ರ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದೆ. ರಾಜ್ಯದಲ್ಲಿ ಎಲೆಕ್ಷನ್ ಹವಾ ಜೋರಾಗಿರುವ ಈ ಸಂದರ್ಭದಲ್ಲಿ ಒಂದು ದಿನ ಮುಂಚಿತವಾಗಿಯೇ ಬಿಡುಗಡೆಯಾಗುತ್ತಿರುವ ಈ ಹಲೋ ಮಾಮ ಪ್ರೇಕ್ಷಕರ ಮನಸೂರೆಗೊಳ್ಳಲು ಸಿದ್ಧವಾಗಿದ್ದಾನೆ. ಬಿಗ್‍ಬಾಸ್‍ನಿಂದ ಹೊರಬಂದ ನಂತರ ಮೋಹನ್ ನಿರ್ದೇಶನ ಹಾಗೂ ನಟನೆಯಲ್ಲಿ ಹೊರಬರುತ್ತಿರುವ ಮೊದಲ ಚಿತ್ರ ಇದಾಗಿದ್ದು, ಇದು ಬಹಳಷ್ಟು ನಗೆಯ ಹೊಳೆಯನ್ನು ಹರಿಸಲಿದೆಯಂತೆ.
ಶಾಸ್ತ್ರೋಕ್ತವಾಗಿ ಹೆಣ್ಣು ಕೊಡುವವರನ್ನು ಮಾವ ಅಂತಲೂ, ಅನಧಿಕೃತವಾಗಿ ಅವರು, ಇವರು ಎಂದು ತಗಲಾಕುವವರನ್ನು ಮಾಮ ಅಂತಲೂ ಕರೆಯುತ್ತಾರೆ. ಸಂಪ್ರದಾಯಸ್ಥ ಕುಟುಂಬ ವಾಸವಿದ್ದ ಮನೆಯ ವಠಾರಕ್ಕೆ ನಾಲ್ವರು ಬ್ರಹ್ಮಚಾರಿಗಳು ಬಾಡಿಗೆಗೆ ಬಂದಾಗ ಅಲ್ಲಿ ಸೃಷ್ಟಿಯಾಗುವ ಘಟನೆಗಳನ್ನು ಹಾಸ್ಯದ ರೂಪದಲ್ಲಿ ಹೇಳುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಲಾಗಿದೆ.

ಚಿತ್ರದಲ್ಲಿ ಒಂದಷ್ಟು ಸಂದೇಶವನ್ನು ಕೂಡ ಹೇಳುವ ಪ್ರಯತ್ನದ ಜತೆಗೆ ಮನರಂಜನೆಯ ಮಹಾಪೂರವೇ ಪ್ರೇಕ್ಷಕರಿಗೆ ಸಿಗಲಿದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ನಟ-ನಿರ್ದೇಶಕ ಮೋಹನ್. ಯಾವುದೇ ದೃಶ್ಯಕ್ಕೆ ಕತ್ತರಿ ಬಳಸದೆ, ಮ್ಯೂಟ್ ಮಾಡದೆ ಸೆನ್ಸಾರ್‍ನಿಂದ ಕ್ಲೀನ್ ಯು/ಎ ಪ್ರಮಾಣ ನೀಡಿರುವುದರಿಂದ ಸಹಜವಾಗಿಯೇ ಚಿತ್ರತಂಡಕ್ಕೆ ಖುಷಿಯಾಗಿದೆ. ಚಿತ್ರರಂಗದಲ್ಲಿ 18 ವರ್ಷಗಳ ಅನುಭವ ಹೊಂದಿರುವ ನಟ ಮೋಹನ್ ಈ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜತೆಗೆ ನಾಯಕನಾಗಿಯೂ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ರಂಗಿತರಂಗ ಖ್ಯಾತಿಯ ಅರವಿಂದ್ ಇದೇ ಮೊದಲ ಬಾರಿಗೆ ಕಾಮಿಡಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪತಿಯನ್ನು ಸದಾ ಅನುಮಾನಿಸುವ ಪತ್ನಿಯಾಗಿ ಭೂಮಿಕ, ಮಾಡ್ರನ್ ಹುಡುಗಿಯಾಗಿ ಭಾವನೆಗಳಿಗೆ ಬೆಲೆ ಕೊಡದ ಸೌಜನ್ಯ, ಶೃಂಗೇರಿ ಮೂಲದ ಗಾಯಕಿ ಸಾಂಪ್ರತ ಭಾರ್ಗವ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಕೆಂಪೇಗೌಡ, ಅಕ್ರಂ ಕೂಡ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿರುವ ಮೂರು ಗೀತೆಗಳಿಗೆ ಧರ್ಮದೀಪ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಗ್ರಹಣವನ್ನು ಡಿ. ಪ್ರಸಾದ್‍ಬಾಬು ನಿರ್ವಹಿಸಿದ್ದಾರೆ. ಸಂಕಲನ ಶಿವಪ್ರಸಾದ್ ಅವರದ್ದಾಗಿದೆ. ಮೋಹನ್ ಟಾಕೀಸ್ ಹಾಗೂ ಪ್ರಗತಿ ಸಿನಿ ಕ್ರಿಯೇಷನ್ಸ್ ಮೂಲಕ ಬಿ.ಕೆ. ಚಂದ್ರಶೇಖರ್ ಅವರು ನಿರ್ಮಾಣ ಮಾಡಿರುವ ಈ ಚಿತ್ರ ಅದ್ಧೂರಿಯಾಗಿ ಬೆಳ್ಳಿ ಪರದೆ ಮೇಲೆ ನಗೆಯ ಟಾನಿಕ್ ನೀಡಲು ಬರುತ್ತಿದೆ.

Facebook Comments

Sri Raghav

Admin